ADVERTISEMENT

ಮತದಾನ ಅವಧಿ ಹೆಚ್ಚಿಸಲು ಮೊರೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಬೆಂಗಳೂರು: ಸಾರ್ವಜನಿಕರ ಹಿತದೃಷ್ಟಿಯಿಂದ ವಿಧಾನಸಭಾ ಚುನಾವಣೆಯ ಮತದಾನದ ಅವಧಿ ಹೆಚ್ಚಿಸುವಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಮಾಡಿದರು.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ವಿ.ಎಸ್.ಸಂಪತ್ ನೇತೃತ್ವದ ತಂಡ ಸೋಮವಾರ ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ಸಂದರ್ಭದಲ್ಲಿ ಮತದಾನದ ಅವಧಿ ಹೆಚ್ಚಳ, ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ವಿಷಯ ಪ್ರಮುಖವಾಗಿ ಪ್ರಸ್ತಾಪವಾಯಿತು.

ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಮಧ್ಯಾಹ್ನದ ವೇಳೆ ಮತಗಟ್ಟೆಗಳಿಗೆ ತೆರಳಲು ಕಷ್ಟವಾಗುತ್ತದೆ. ಹೀಗಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಮತದಾನ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ಆದ್ದರಿಂದ ಬೆಳಿಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬಿಜೆಪಿ ಮನವಿ ಮಾಡಿದೆ.

ಕಾನೂನು ಸಚಿವ ಎಸ್.ಸುರೇಶ್‌ಕುಮಾರ್, ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರು ಬಿಜೆಪಿ ಪರವಾಗಿ ಆಯೋಗಕ್ಕೆ ಮನವಿ ಸಲ್ಲಿಸಿ, `ತಾರಾ' ಪ್ರಚಾರಕರ ಭಾಷಣಕ್ಕೆ ಮುಖ್ಯ ಚುನಾವಣಾಧಿಕಾರಿಗಳು ಅನುಮತಿ ನೀಡಿದ ನಂತರ ಸ್ಥಳೀಯವಾಗಿ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವಂತೆ ಕೋರಿದ್ದಾರೆ.

`ತಾರಾ' ಪ್ರಚಾರಕರೊಂದಿಗೆ ಅಭ್ಯರ್ಥಿಯು ಹೆಲಿಕಾಪ್ಟರ್‌ನಲ್ಲಿ ಪ್ರವಾಸ ಮಾಡಿದರೆ ಶೇ 50ರಷ್ಟು ವೆಚ್ಚವನ್ನು ಅಭ್ಯರ್ಥಿಯ ಲೆಕ್ಕಕ್ಕೆ ಸೇರಿಸುವುದು ಅವೈಜ್ಞಾನಿಕ. ಕೇಂದ್ರ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸ್ಪಷ್ಟನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಮತದಾನದ ಅವಧಿಯನ್ನು ಮೊದಲಿನ ಹಾಗೆ ಬೆಳಿಗ್ಗೆ 7ರಿಂದ ಸಂಜೆ 5ಕ್ಕೆ ನಿಗದಿ ಮಾಡಬೇಕು ಎಂದು ಕಾಂಗ್ರೆಸ್, ಸಿಪಿಐ ಒತ್ತಾಯಿಸಿವೆ.

ಕೆಪಿಸಿಸಿ ವಕ್ತಾರ ಪಿ.ಆರ್.ರಮೇಶ್, ವಿಧಾನ ಪರಿಷತ್ ಸದಸ್ಯ ನಜೀರ್ ಅಹ್ಮದ್ ಅವರು ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ನಾಗಮಂಗಲ, ಕೋಲಾರ ಸೇರಿದಂತೆ ಕೆಲವೆಡೆ ಅಭ್ಯರ್ಥಿಗಳ ಸಂಬಂಧಿಕರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹವರನ್ನು ಕೂಡಲೇ ಬದಲಾಯಿಸಬೇಕು ಎಂದು ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.