ADVERTISEMENT

ಮತ್ತೆ ಹಾಲಿನ ದರ ಏರಿಕೆ ಚಿಂತನೆ- ಸಿ.ಎಂ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಹಾವೇರಿ: `ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲು ರಾಜ್ಯದ ರೈತ ಪ್ರತಿನಿಧಿಗಳ ಜತೆ ಮುಂದಿನ ತಿಂಗಳು ವಿಧಾನಸೌಧದಲ್ಲಿ ಚರ್ಚೆ ನಡೆಸಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ತಿಳಿಸಿದರು.

ನಗರದ ಜಿ.ಎಚ್.ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ 32ನೇ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ರಾಜಕಾರಣಿಗಳು ರೈತರ ಸಮಸ್ಯೆ ಬಗ್ಗೆ ಚರ್ಚಿಸುವುದಕ್ಕೂ, ನಿತ್ಯವೂ ಭೂಮಿಯ ಜತೆ ಒಟನಾಟ ಹೊಂದಿರುವ ರೈತರ ಜತೆಗೆ ಚರ್ಚಿಸುವುದಕ್ಕೆ ಬಹಳಷ್ಟು ವ್ಯತ್ಯಾಸವಿದೆ. ಅದಕ್ಕಾಗಿ ಕೃಷಿ ಬಜೆಟ್‌ಗೂ ಮುನ್ನ ರೈತರ ಜತೆ ವಿಧಾನಸೌಧದಲ್ಲಿ ಚರ್ಚಿಸಿ ಅವರ ಸಮಸ್ಯೆಗಳಿಗೆ ಆ ಬಜೆಟ್‌ನಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಮತ್ತೆ ಹಾಲಿನ ದರ ಏರಿಕೆ ಚಿಂತನೆ: ಎಮ್ಮೆ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹಧನ ನೀಡಬೇಕೆಂಬ ನಿರ್ಣಯದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಾಲು ಉತ್ಪಾದನಾ ವೆಚ್ಚ ಹೆಚ್ಚಳವಾಗಿರುವುದು ಸರ್ಕಾರದ ಗಮನದಲ್ಲಿದ್ದು, ಈಗಾಗಲೇ ಪ್ರತಿ ಲೀಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಳ ಮಾಡಲಾಗಿದೆ. ಅದರಂತೆ ಮುಂದಿನ ಎರಡು ತಿಂಗಳಲ್ಲಿ ಇನ್ನಷ್ಟು ಹೆಚ್ಚಿಸುವ ಚಿಂತನೆ ಸರ್ಕಾರದ ಮುಂದಿದೆ. ಆಗ ಹಾಲು ಉತ್ಪಾದಕರ ಪ್ರೋತ್ಸಾಹಧನವನ್ನು ಹೆಚ್ಚಳ ಮಾಡುವುದಾಗಿ ಸದಾನಂದಗೌಡ ಭರವಸೆ ನೀಡಿದರು.
ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡುವಲ್ಲಿ ಆಗಿರುವ ವಿಳಂಬವನ್ನು ಈ ತಿಂಗಳು ನಿವಾರಿಸಲಾಗಿದ್ದು ಮುಂದಿನ ತಿಂಗಳಿನಿಂದ ಆಯಾ ತಿಂಗಳಿನ ಪ್ರೋತ್ಸಾಹಧನ  ಅದೇ ತಿಂಗಳು ಪಾವತಿಸಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಕೃಷಿಗೆ ಹೆಚ್ಚು ಹಣ: ಈ ವರ್ಷವೂ ಕೃಷಿಗೆ ಪ್ರತ್ಯೇಕ ಮುಂಗಡಪತ್ರ ಮಂಡಿಸಲಾಗುತ್ತಿದ್ದು, ಕಳೆದ ಬಾರಿ ನೀಡಲಾದ ಹಣಕ್ಕಿಂತ ಹೆಚ್ಚಿನ ಹಣವನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಣ್ಣ ಹಿಡುವಳಿದಾರರ ಜಮೀನಲ್ಲಿನ ಕೃಷಿಗೂ ವಿಸ್ತರಿಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ ಅವರು, ಆ  ಪತ್ರದ ಪ್ರತಿಯನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೂ ಕಳುಹಿಸಲಾಗುವುದು ಎಂದು ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾವೇರಿ ಜಿಲ್ಲೆಯಲ್ಲಿ ತೆರೆಯಲು ಉದ್ದೇಶಿಸಿದ ಸಿದ್ಧ ಉಡುಪು ಘಟಕಕ್ಕೆ ನಾಲ್ಕು ಕೋಟಿ ರೂಪಾಯಿ ಕೊಡುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈಗ  ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಎರಡು ಕೋಟಿ ರೂಪಾಯಿ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದ್ದರು. ಹೇಮಾವತಿ ಹೆಗ್ಗಡೆ, ಸಚಿವರಾದ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ಶಾಸಕರು ಹಾಜರಿದ್ದರು.

ಹತ್ತಿ ಬಿಡಿಸುವ ಯಂತ್ರ ದೊರೆಯುವ ಸ್ಥಳ: ಅಗ್ರಿ ಕೇರ್, ಸಿಂಧನೂರು. ಮೊಬೈಲ್- 9480560620
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT