ರಾಮನಗರ: ಮತಗಟ್ಟೆಗೆ ಹೆಚ್ಚಿನ ಸಂಖ್ಯೆಯ ಮತದಾರರನ್ನು ಸೆಳೆಯಲು ‘ಸ್ವೀಪ್’ ಸಮಿತಿಯು ಜಿಲ್ಲೆಯಲ್ಲಿ ನಡೆಯುವ ನಿಶ್ಚಿತಾರ್ಥ ಮತ್ತು ವಿವಾಹ ಕಾರ್ಯಕ್ರಮಗಳನ್ನೂ ಸಾರ್ವಜನಿಕ ಜಾಗೃತಿಯ ವೇದಿಕೆಯನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿದೆ.
ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಮತದಾರರ ಸಹಭಾಗಿತ್ವ (ಸಿಸ್ಟಮ್ಯಾಟಿಕ್ ವೋಟರ್ಸ್ ಎಜುಕೇಷನ್ ಆ್ಯಂಡ್ ಎಲೆಕ್ಟೋರಲ್ ಪಾರ್ಟಿಸಿಪೇಷನ್– ಸ್ವೀಪ್) ಮೂಡಿಸುವುದು ‘ಸ್ವೀಪ್’ನ ಮುಖ್ಯ ಉದ್ದೇಶ. ಸಮಿತಿಯು ಈಗಾಗಲೇ ರಂಗೋಲಿ, ಚಿತ್ರಕಲಾ ಸ್ಪರ್ಧೆ, ಚರ್ಚಾ ಸ್ಪರ್ಧೆ, ವಿದ್ಯಾರ್ಥಿಗಳಿಂದ ಪ್ರಮಾಣ ವಚನ, ಜಾಗೃತಿ ಜಾಥಾ, ಮಾನವ ಸರಪಳಿ ಆಯೋಜಿಸುವ ನಿಟ್ಟಿನಲ್ಲಿ ವಿವಿಧ ಜಾಗೃತಿ ಯೋಜನೆಗಳನ್ನು ರೂಪಿಸಿದೆ.
ಇದೀಗ ಸಮಿತಿ ಖಾಸಗಿ ಕಾರ್ಯಕ್ರಮಗಳಲ್ಲಿಯೂ ಮತದಾನದ ಬಗ್ಗೆ ಅರಿವು ಮೂಡಿಸಲು ನಿರ್ಧರಿಸಿರುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ನಡೆಯುವ ಯಾವುದೇ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳಿಗೆ ‘ಸ್ವೀಪ್’ ತಂಡದ ಅಧಿಕಾರಿಗಳು ಭೇಟಿ ನೀಡಿ, ಏ 17ರಂದು ‘ತಪ್ಪದೆ ಮತದಾನದಲ್ಲಿ ಭಾಗವಹಿಸಿ’ ಎಂದು ನವದಂಪತಿಯ ಕುಟುಂಬ ಹಾಗೂ ಅಲ್ಲಿ ನೆರೆಯುವ ಜನರನ್ನು ಕೋರಲು ಆಲೋಚಿಸಿದೆ ಎಂದು ಜಿಲ್ಲಾ ‘ಸ್ವೀಪ್’ ಸಮಿತಿ ಅಧ್ಯಕ್ಷರೂ ಆದ ಜಿ.ಪಂ ಸಿಇಒ ಡಾ.ಎಂ.ವಿ.ವೆಂಕಟೇಶ್ ಅವರು ಬುಧವಾರ ‘ಪ್ರಜಾವಾಣಿ’ಗೆ ವಿವರಿಸಿದರು.
ಜಿಲ್ಲೆಯಲ್ಲಿ ಯಾವ ಕುಟುಂಬದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುತ್ತಾರೋ ಅವರಿಗೆ ‘ಉತ್ತಮ ಅಥವಾ ಜಾಗೃತ ಕುಟುಂಬ’ ಎಂದು ಸತ್ಕರಿಸಲು ನಿರ್ಧರಿಸಲಾಗಿದೆ ಎಂದೂ ಅವರು ತಿಳಿಸಿದರು.
ರಂಗೋಲಿಯಲ್ಲಿ ಮತದಾನದ ಸಂದೇಶ: ಮನೆಗಳ ಮುಂದೆ ಬಿಡಿಸುವ ರಂಗೋಲಿಯಲ್ಲಿ ಏಪ್ರಿಲ್ 17ರಂದು ಮತದಾನ ದಿನದ ಶುಭಾಶಯದ ಜತೆಗೆ ‘ಮತದಾನ ಮಾಡುವುದನ್ನು ಮರೆಯಬೇಡಿ’ ಎಂಬ ಘೋಷಣೆ ಬರೆಯುವಂತೆ ಪ್ರೇರೇಪಿಸ
ಲಾಗುವುದು.
ಕಂದಾಯ ಇಲಾಖೆಯ ‘ಭೂಮಿ’, ಬೆಸ್ಕಾಂನ ವಿದ್ಯುತ್ ಬಿಲ್, ಆಸ್ಪತ್ರೆಗಳ ವೈದ್ಯರ ಸಲಹಾ ಚೀಟಿಗಳು ಇತ್ಯಾದಿಗಳಲ್ಲಿಯೂ ಮತದಾನದ ಕುರಿತು ಜಾಗೃತಿ ಸಂದೇಶದ ಮುದ್ರೆ ಒತ್ತಲಾಗುವುದು ಎಂದು ಅವರು ವೆಂಕಟೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.