ADVERTISEMENT

ಮನದಟ್ಟಾದ ಬೆಳೆ ಹಾನಿ ಗಂಭೀರತೆ

ಹೆಚ್ಚಿನ ನೆರವಿಗೆ ಶೀಘ್ರವೇ ಕೇಂದ್ರಕ್ಕೆ ವರದಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 19:30 IST
Last Updated 23 ಮಾರ್ಚ್ 2014, 19:30 IST

ಬಾಗಲಕೋಟೆ/ಚಡಚಣ: ಕೇಂದ್ರ ಅಧ್ಯಯನ ತಂಡ ಭಾನುವಾರ ಬಾಗಲ­ಕೋಟೆ  ಮತ್ತು ವಿಜಾಪುರ ಜಿಲ್ಲೆಗಳಲ್ಲಿ ಭಾನುವಾರ ಸಂಚರಿಸಿ, ಇತ್ತೀಚೆಗೆ ಆಲಿಕಲ್ಲು ಮಳೆಯಿಂದಾದ ಹಾನಿ ಕುರಿತು ರೈತರು ಮತ್ತು ಜಿಲ್ಲಾಡಳಿತ­ದಿಂದ ಮಾಹಿತಿ ಸಂಗ್ರಹಿಸಿತು.

ಅಧ್ಯಯನ ತಂಡವು ಬಾಗಲಕೋಟೆ ತಾಲ್ಲೂಕು ವ್ಯಾಪ್ತಿಯ ದ್ರಾಕ್ಷಿ, ಪಪ್ಪಾಯಿ, ಕಲ್ಲಂಗಡಿ, ದಾಳಿಂಬೆ, ಚಿಕ್ಕು (ಸಪೋಟಾ) ತೋಟಗಳಿಗೆ ಮತ್ತು ಬಿಳಿ ಜೋಳದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿತು.

‘ಅಕಾಲಿಕ ಆಲಿಕಲ್ಲು ಮಳೆಯಿಂದ ರಾಜ್ಯ­ದಲ್ಲಿ ಆಗಿರುವ ಬೆಳೆ ಹಾನಿಯ ಗಂಭೀ­ರತೆ ಮನದಟ್ಟಾಗಿದೆ’ ಎಂದು ಕೇಂದ್ರ ಅಧ್ಯಯನ ತಂಡದ ಮುಖ್ಯಸ್ಥ­ರಾದ ಯೋಜನಾ ಆಯೋಗದ ಉಪ ಸಲ­ಹೆ­ಗಾರ ಮಾನಸ್‌ ಚೌಧರಿ ತಿಳಿಸಿದರು.

ಬಾಗಲಕೋಟೆ ತಾಲ್ಲೂಕಿನ ಸೀಮಿ­ಕೇರಿ, ತುಳಸಿಗೇರಿ, ಕಲಾದಗಿ ವ್ಯಾಪ್ತಿ­ಯಲ್ಲಿ ಮಳೆಯಿಂದ ಹಾನಿಗೊಳ­ಗಾದ ಹೊಲಗಳಿಗೆ ಭೇಟಿ ನೀಡಿ ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

‘ತೊಂದರೆಗೊಳಗಾದ ಕೃಷಿಕರಿಗೆ ತಕ್ಷಣ ಪರಿಹಾರ ಒದಗಿಸುವುದು ಅಸಾಧ್ಯ. ಆದರೆ, ನಷ್ಟ ಅನುಭವಿಸಿರುವ ರೈತ­ರಿಗೆ ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿ­ಹಾರ ನಿಧಿಯ ಮಾನದಂಡ ಆಧರಿಸಿ ಹೆಚ್ಚಿನ ನೆರವು ಒದಗಿಸುವಂತೆ ಕೇಂದ್ರ ಸರ್ಕಾ­ರಕ್ಕೆ ಆದಷ್ಟು ಬೇಗ ವರದಿ ನೀಡ­ಲಾಗುವುದು’ ಎಂದು ಚೌಧರಿ  ಅವರು ಹೇಳಿದರು.

ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ರೂ. 193 ಕೋಟಿ ಮೌಲ್ಯದ ತೋಟ­ಗಾ­ರಿಕೆ ಬೆಳೆ ಮತ್ತು ರೂ. 17.75 ಕೋಟಿ ಮೌಲ್ಯದ ಕೃಷಿ ಬೆಳೆ ಹಾನಿಗೊಳಲಾಗಿದೆ ಎಂಬ ವಿಷಯವನ್ನು ಬಾಗಲಕೋಟೆ ಜಿಲ್ಲಾಧಿಕಾರಿ ಮನೋಜ್‌ ಜೈನ್‌ ಅವರು ಕೇಂದ್ರ ಅಧ್ಯಯನ ತಂಡದ ಗಮನಕ್ಕೆ ತಂದರು.

ಇನ್ನೊಂದು ತಂಡ: ರಾಷ್ಟ್ರೀಯ ಸಹಕಾರ ಅಭಿ­ವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇ­ಶಕಿ ವಸುಧಾ ಮಿಶ್ರಾ ನೇತೃತ್ವದ ಇನ್ನೊಂದು ತಂಡ ವಿಜಾಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಚಡಚಣ, ಹತ್ತಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿತು.
ಬೆಳೆ ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿದ ತಂಡವು, ಸಂತ್ರಸ್ತ ರೈತ­ರೊಂದಿಗೆ ಚರ್ಚೆ ನಡೆಸಿತು.

ಜಿಲ್ಲಾಧಿ­ಕಾರಿ ರಿತ್ವಿಕ್‌ ರಂಜನ್‌ ಪಾಂಡೆ, ತೋಟ­ಗಾರಿಕೆ ಇಲಾಖೆ ಜಂಟಿ  ನಿರ್ದೇ­ಶಕ ಮಂಜು­ನಾಥ ನಾರಾಯಣ ಮತ್ತು ಸಹಾಯಕ ನಿರ್ದೇಶಕ ಎಚ್‌.ಎಸ್‌. ಪಾಟೀಲ ಅವರು ಬೆಳೆ ಹಾನಿ ಕುರಿತು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ಯಾದಗಿರಿ ವರದಿ: ಕೇಂದ್ರ ಗ್ರಾಮೀಣಾ­ಭಿ­ವೃದ್ಧಿ ಇಲಾಖೆಯ  ಸಹಾಯಕ ಆಯುಕ್ತ ಪ್ರಸನ್ನ ವಿ.ಸಾಲಿಯನ್ ನೇತ್ವ­ತ್ವದ ತಂಡವು ಯಾದಗಿರಿ ಜಿಲ್ಲೆಯ ವಿವಿ­ಧೆ­ಡೆಗಳಿಗೆ ಭಾನುವಾರ ಭೇಟಿ ನೀಡಿ  ಆಲಿಕಲ್ಲು ಮಳೆಯಿಂದಾದ ಹಾನಿ ಬಗ್ಗೆ ಪರಿಶೀಲನೆ ನಡೆಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.