ADVERTISEMENT

ಮನೆ ಕುಸಿದು ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 19:30 IST
Last Updated 14 ನವೆಂಬರ್ 2012, 19:30 IST

ಕೆಜಿಎಫ್: ಮನೆಯ ಚಾವಣಿ ಕುಸಿದು ಇಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡ ದುರ್ಘಟನೆ ಬುಧವಾರ ಮುಂಜಾನೆ ನಗರದ ರಾಬರ್ಟ್‌ಸನ್‌ಪೇಟೆ ಆರನೇ ಕ್ರಾಸ್‌ನಲ್ಲಿ ಸಂಭವಿಸಿದೆ.

ಗುತ್ತಿಗೆದಾರರಾದ  ನಾರಾಯಣಮೂರ್ತಿ ಅವರಿಗೆ ಈ ಮನೆ ಸೇರಿದೆ. ಘಟನೆ ವೇಳೆ ನಾರಾಯಣಮೂರ್ತಿ ಮನೆಯಲ್ಲಿ ಇರಲಿಲ್ಲ.

ಮನೆಯ ಮೇಲ್ಚಾವಣಿ ಕುಸಿದು ಕೆಳಗೆ ಸಿಲುಕಿ ನಾರಾಯಣಮೂರ್ತಿ ಅವರ ಅಕ್ಕನ ಮಗ ಅಶೋಕ ಲೇಲ್ಯಾಂಡ್ ಕಂಪೆನಿಯ ಎಂಜಿನಿಯರ್ ಹರೀಶ್ (24) ಹಾಗೂ  ನಾರಾಯಣಮೂರ್ತಿ ತಮ್ಮನ ಪತ್ನಿ ಸುಮ ಆಲಿಯಾಸ್ ಸುಜಾತಾ (34) ಮತ್ತು  ಸ್ಥಳದಲ್ಲೇ ಮೃತಪಟ್ಟವರು. ಸಂಬಂಧಿಕರಾದ ಅವಿನಾಶ್, ಪುಷ್ಪಲತಾ ಗಾಯಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಮತ್ತು ರಾಬರ್ಟ್‌ಸನ್‌ಪೇಟೆ ಪೊಲೀಸರು ಧಾವಿಸಿ, ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಅವಿನಾಶ್ ಮತ್ತು ಪುಷ್ಪಲತಾ ಅವರನ್ನು ಹೊರತೆಗೆದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದರು. ಈ ಇಬ್ಬರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ಅಡುಗೆ ಅನಿಲ ಸಿಲಿಂಡರ್ ಸೋರಿಕೆ ಕಾರಣ ಎಂದು ಹೇಳಲಾಗಿದೆ.

ಇದೊಂದು ಅವಿಭಕ್ತ ಕುಟುಂಬವಾಗಿದ್ದು ಒಟ್ಟು ಹನ್ನೊಂದು ಮಂದಿ ಈ ಮನೆಯಲ್ಲಿ ವಾಸವಿದ್ದರು. ಹೆಂಚಿನ ಮನೆ ಹಾಗೂ ಆರ್‌ಸಿಸಿ ಮನೆಗಳು ಹಂಚಿಕೊಂಡಂತೆ ಇದ್ದು, ಹೆಂಚಿನ ಮನೆಯಲ್ಲಿ ಮಲಗಿದ್ದವರು ಸುರಕ್ಷಿತರಾಗಿದ್ದಾರೆ.

ಶಾಸಕ ವೈ.ಸಂಪಂಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮನಿವಾಸ್ ಸಪೆಟ್, ಮಾಜಿ ಶಾಸಕರಾದ ಎಂ.ಭಕ್ತವತ್ಸಲಂ, ಎಸ್.ರಾಜೇಂದ್ರನ್, ಡಿವೈಎಸ್ಪಿ ರಾಜಣ್ಣ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  ರಾಬರ್ಟ್‌ಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೇವಾನಾಗಹಳ್ಳಿಯಲ್ಲಿ ದುರ್ಘಟನೆ: ಇದೇ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಎಸ್.ದೇವಾನಾಗಹಳ್ಳಿಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯೊಂದರ ಗೋಡೆ ಕುಸಿದು ಒಬ್ಬ ಸಾವಿಗೀಡಾಗಿ, ಮತ್ತೊಬ್ಬ ಗಾಯಗೊಂಡ ಘಟನೆ ನಡೆದಿದೆ.  ನಾಟಕ ಕಲಾವಿದ ನರಸಿಂಹಪ್ಪ (35) ಮೃತಪಟ್ಟವರು.

ಗಾಯಗೊಂಡ ವ್ಯಕ್ತಿಯನ್ನು ಕೂಲಿಕಾರ್ಮಿಕ ಮಂಜುನಾಥ್ (38) ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.