ADVERTISEMENT

ಮನೆ ಸಮೀಪದಲ್ಲೇ ವಾಸವಿದ್ದು ಗೌರಿ ಲಂಕೇಶ್‌ ಹತ್ಯೆ!

ಎಸ್‌ಐಟಿ ಅಧಿಕಾರಿಗಳ ಅನುಮಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST
ಮನೆ ಸಮೀಪದಲ್ಲೇ ವಾಸವಿದ್ದು ಗೌರಿ ಲಂಕೇಶ್‌ ಹತ್ಯೆ!
ಮನೆ ಸಮೀಪದಲ್ಲೇ ವಾಸವಿದ್ದು ಗೌರಿ ಲಂಕೇಶ್‌ ಹತ್ಯೆ!   

ಬೆಂಗಳೂರು: ಗೌರಿ ಲಂಕೇಶ್‌ ಅವರನ್ನು ಹತ್ಯೆಗೈದ ಹಂತಕರು, ಹತ್ಯೆಗೂ ಒಂದು ವಾರ ಮುನ್ನ ಗೌರಿ ಅವರ ಮನೆಯ ಸಮೀಪದಲ್ಲೇ ವಾಸವಿದ್ದಿರಬಹುದು ಎಂದು ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌, ‘ಶಂಕಿತ ಆರೋಪಿಗಳು ಗೌರಿ ಅವರ ಮನೆಯ ಸುತ್ತಮುತ್ತಲಲ್ಲಿ ವಾಸವಿದ್ದು ಕೃತ್ಯ ಎಸಗಿ ಪರಾರಿಯಾಗಿರುವ ಶಂಕೆ ಇದೆ. ಈ ಸಂಬಂಧ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದು, ಆ ಆಯಾಮದಲ್ಲಿ ಪ್ರತ್ಯೇಕ ತಂಡವು ತನಿಖೆ ಮುಂದುವರಿಸಿದೆ’ ಎಂದರು.

‘ರಾಜರಾಜೇಶ್ವರಿನಗರ, ಮೈಸೂರು ರಸ್ತೆ ಹಾಗೂ ಸುತ್ತಮುತ್ತಲಿನ ವಸತಿಗೃಹಗಳಲ್ಲಿ ಸೆ. 5ಕ್ಕೂ ಮುನ್ನ ಒಂದು ತಿಂಗಳ ಅವಧಿಯಲ್ಲಿ ವಾಸವಿದ್ದವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೇವೆ. 25ಕ್ಕೂ ಹೆಚ್ಚು ವಸತಿಗೃಹಗಳ ಮಾಲೀಕರ ಹೇಳಿಕೆ ಪಡೆದಿದ್ದು, ಅವರ ವಸತಿಗೃಹದಲ್ಲಿ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾ ಡಿ.ವಿ.ಆರ್‌ ವಶಕ್ಕೆ ಪಡೆದು ಪರಿಶೀಲಿಸಿದ್ದೇವೆ’

ADVERTISEMENT

‘ಪ್ರಕರಣದಲ್ಲಿ ಸನಾತನ ಸಂಘಟನೆ ಕೈವಾಡವಿದೆಯಾ’ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಂಗ್‌, ’ಹತ್ಯೆಯಲ್ಲಿ ಸಂಘ–ಸಂಸ್ಥೆ, ಸಂಘಟನೆ ಕೈವಾಡವಿರುವ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಇಲ್ಲ. ಆದರೆ, ಆ ವಿಷಯವನ್ನು ನಿರ್ಲಕ್ಷಿಸಿಲ್ಲ. ಆ ಆಯಾಮದಲ್ಲೂ ತನಿಖೆ ನಡೆದಿದೆ’ ಎಂದು ಹೇಳಿದರು.

ಪಿಸ್ತೂಲ್‌ನಲ್ಲಿ ಸಾಮ್ಯತೆ ಇಲ್ಲ

‘ಗೌರಿ ಹತ್ಯೆಗೆ 7.65 ಎಂ.ಎಂ ನಾಡ ಪಿಸ್ತೂಲ್‌ ಬಳಸಲಾಗಿದೆ. ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ ಹಾಗೂ ಧಾರವಾಡದ ಎಂ.ಎಂ.ಕಲಬುರ್ಗಿ ಅವರ ಹತ್ಯೆಗೂ ಹಾಗೂ ಗೌರಿ ಲಂಕೇಶ್‌ ಅವರ ಹತ್ಯೆಗೆ ಬಳಸಿರುವ ಪಿಸ್ತೂಲ್‌ಗಳು ಬೇರೆ ಬೇರೆ. ಅವುಗಳಲ್ಲಿ ಯಾವುದೇ ಸಾಮ್ಯತೆ ಕಂಡುಬಂದಿಲ್ಲ’ ಎಂದು ಎಂದು ಸಿಂಗ್‌ ಹೇಳಿದರು.

250 ಮಂದಿ ವಿಚಾರಣೆ

‘ಪ್ರಕರಣದ ಸಂಬಂಧ ಇದುವರೆಗೂ 250 ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದೇವೆ. ಅವರ ಹೇಳಿಕೆ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದೇವೆ’ ಎಂದು ಸಿಂಗ್‌ ಹೇಳಿದರು.

‘ಇದುವರೆಗೂ ಸಿ.ಸಿ.ಟಿ.ವಿ ಕ್ಯಾಮೆರಾದ 7.5 ಟಿ.ಬಿಯಷ್ಟು ದೃಶ್ಯಗಳನ್ನು ಸಂಗ್ರಹಿಸಿದ್ದೇವೆ. ಕೆಲವು ದೃಶ್ಯಗಳಲ್ಲಿ ಆರೋಪಿಗಳ ಚಲನವಲನ ಸೆರೆಯಾಗಿದೆ. ಹಲವು ಬಾರಿ ಹೆಲ್ಮೆಟ್‌ ಧರಿಸಿರುವ ಆರೋಪಿಗಳು, ಕೆಲ ಬಾರಿ ಮಾತ್ರ ಹೆಲ್ಮೆಟ್‌ ತೆಗೆದಿದ್ದಾರೆ. ಅವರ ಮುಖ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಅದನ್ನು ಪತ್ತೆಹಚ್ಚಲು ತಜ್ಞರ ನೆರವು ಪಡೆಯುತ್ತಿದ್ದೇವೆ’ ಎಂದು ಸಿಂಗ್‌ ತಿಳಿಸಿದರು. 

ವೈಸರ್‌ನಲ್ಲಿ ಚಹರೆ ಸ್ಪಷ್ಟ

‘ಸೆ. 5ರಂದು ಗೌರಿ ಅವರ ಮೇಲೆ ಗುಂಡು ಹಾರಿಸಿದ್ದ ಹಂತಕ, ಕಪ್ಪು ಬಣ್ಣದ ಹೆಲ್ಮೆಟ್‌ ಧರಿಸಿದ್ದಾನೆ. ಆತ ಹೆಲ್ಮೆಟ್‌ನ ವೈಸರ್‌ ತೆಗೆದಿದ್ದು,  ಆತನ ಕಣ್ಣು ಹಾಗೂ ಅರ್ಧ ಮೂಗು ಗೋಚರಿಸಿದೆ. ಅದನ್ನು ರೇಖಾಚಿತ್ರ ಸಿದ್ಧಪಡಿಸಲು ಬಳಸಿಕೊಂಡಿದ್ದೇವೆ’ ಎಂದು ಸಿಂಗ್‌ ಹೇಳಿದರು.

ವೃತ್ತಿ ವೈಷಮ್ಯದಿಂದ ಹತ್ಯೆ ನಡೆದಿಲ್ಲ

‘ಗೌರಿ ಲಂಕೇಶ್‌ ಅವರ ಹತ್ಯೆಯು ವೃತ್ತಿ ವೈಷಮ್ಯದಿಂದ ನಡೆದಿಲ್ಲ ಎಂಬುದು ಇದುವರೆಗಿನ ತನಿಖೆಯಿಂದ ಸ್ಪಷ್ಟವಾಗಿದೆ’ ಎಂದು ಸಿಂಗ್‌ ತಿಳಿಸಿದರು.

‘ವೃತ್ತಿಗೆ ಸಂಬಂಧಪಟ್ಟ ಹಲವರ ಹೇಳಿಕೆ ಪಡೆದಿದ್ದೇವೆ. ಅವರ ಮೇಲೆ ಯಾವುದೇ ಅನುಮಾನ ಬಂದಿಲ್ಲ. ಹೀಗಾಗಿ ವೃತ್ತಿ ಆಯಾಮದ ತನಿಖೆಯನ್ನು ಕೈಬಿಟ್ಟಿದ್ದೇವೆ. ಅದನ್ನು ಹೊರತುಪಡಿಸಿ ಉಳಿದೆಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ’ ಎಂದು ಹೇಳಿದರು.

ಕೆಂಪು ಪಲ್ಸರ್‌ ಬೈಕ್‌ಗಾಗಿ ಶೋಧ

ಬಿಳಿ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ತೊಟ್ಟಿರುವ ವ್ಯಕ್ತಿಯು ಕೆಂಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಸೆ.5ರಂದು ಗೌರಿ ಲಂಕೇಶ್‌ ಅವರ ಮನೆಯ ಸುತ್ತಲೂ ಓಡಾಡಿದ್ದಾನೆ. ಆ ಬೈಕ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.

‘ಹತ್ಯೆಗೂ ಮುನ್ನ ಸಂಚರಿಸಿದ್ದ ಬೈಕ್‌ ಸವಾರ, ಹತ್ಯೆಯ ಬಳಿಕ ಈ ಪ್ರದೇಶದಲ್ಲಿ ಓಡಾಡಿಲ್ಲ. ಜತೆಗೆ ಬೈಕ್‌ನಲ್ಲಿ ಒಬ್ಬನೇ ಇದ್ದು. ಈತ ಆರೋಪಿಗಳ ಪರ ಕೆಲಸ ಮಾಡಿರಬಹುದು ಎಂಬ ಅನುಮಾನವಿದೆ. ಬೈಕ್‌ ಯಾರದ್ದು ಎಂಬುದು ಗೊತ್ತಾದ ಬಳಿಕ ಆರೋಪಿ ಬಗ್ಗೆ ಮಾಹಿತಿ ಸಿಗಬಹುದು’ ಎಂದು ಎಸ್‌ಐಟಿ ಅಧಿಕಾರಿ ಹೇಳಿದರು.

ಅನುಮಾನ ಬಂದವರನ್ನು ವಶಕ್ಕೆ ಪಡೆದು ವಿಚಾರಣೆ

ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಅನುಮಾನ ಬಂದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದಾದ ಬಳಿಕ ಅವರನ್ನು ಮನೆಗೆ ಕಳುಹಿಸುತ್ತಿದ್ದಾರೆ.

‘ಈಗಾಗಲೇ ಹಲವರನ್ನು ವಶಕ್ಕೆ ಪಡೆದು, ಒಂದಕ್ಕಿಂತ ಹೆಚ್ಚು ದಿನ ಇಟ್ಟುಕೊಂಡು ವಾಪಸ್‌ ಕಳುಹಿಸಿದ್ದೇವೆ. ಇದರಿಂದ ಸದ್ಯಕ್ಕೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಮುಂದೆಯೂ ಹಲವರನ್ನು ವಶಕ್ಕೆ ಪಡೆಯಲೂಬಹುದು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.