ADVERTISEMENT

ಮರಣೋತ್ತರ ಪರೀಕ್ಷೆ ಮಾಡಿದ ವೈದ್ಯರೇ ನಾಪತ್ತೆ: ಶೋಭಾ ಆರೋಪ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಬೆಂಗಳೂರು: ‘ಪರೇಶ ಮೇಸ್ತ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರೇ ನಾಪತ್ತೆ ಆಗಿದ್ದು, ಸರ್ಕಾರದ ಒತ್ತಡ ಇರುವುದರಿಂದಲೇ ಅವರು ಮಣಿಪಾಲ ಬಿಟ್ಟು ತೆರಳಿದ್ದಾರೆ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

‘ವೈದ್ಯರು ಮೂರು ದಿನಗಳಿಂದ ಮಣಿಪಾಲದಲ್ಲಿ ಇಲ್ಲ. ಅವರ ಮೊಬೈಲ್‌ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿದೆ. ಅವರು ಎಲ್ಲಿಗೆ ಹೋಗಿದ್ದಾರೆ ಎಂಬುದು ಮಣಿಪಾಲ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಯಾರಿಗೂ ಗೊತ್ತಿಲ್ಲ’ ಎಂದು ಅವರು ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಮರಣೋತ್ತರ ಪರೀಕ್ಷೆಗೆ ಸಂಬಂಧಿಸಿದ ಏನೆಲ್ಲ ಮಾಹಿತಿ ಇದೆಯೋ ಅವೆಲ್ಲವನ್ನೂ ಬಹಿರಂಗಪಡಿಸಬೇಕು. ಈ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದ ಸರ್ಕಾರ ಪೊಲೀಸರ ಮೂಲಕ ತಮಗೆ ಬೇಕಾದಂತೆ ಪ್ರಶ್ನೆಗಳನ್ನು ಕೇಳಿ ವೈದ್ಯರಿಂದ ಉತ್ತರ ಪಡೆದಿದ್ದಾರೆ. ಸತ್ಯಾಂಶವನ್ನು ಆಸ್ಪತ್ರೆಯವರೇ ಬಹಿರಂಗಪಡಿಬೇಕು’ ಎಂದು ಅವರು ಹೇಳಿದರು.

ADVERTISEMENT

‘ಹಿಂದುಗಳ ಸಾವಿನ ಬಗ್ಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಬೇಜವಾಬ್ದಾರಿಯ ಮಾತುಗಳನ್ನು ಆಡುತ್ತಿದ್ದಾರೆ. ಪರೇಶ ಮೇಸ್ತ ಹತ್ಯೆಯನ್ನು ಸಣ್ಣ ಸಂಗತಿ ಎಂದು ವ್ಯಾಖ್ಯಾನಿಸಿದ್ದಾರೆ. ರಾಜ್ಯದ ಜನರಿಗೆ ರಕ್ಷಣೆ ನೀಡಬೇಕಾದ ಸಚಿವರೇ ಈ ರೀತಿಯ ಮಾತನ್ನು ಆಡಿದರೆ, ಜನ ಸಾಮಾನ್ಯರ ಗತಿ ಏನು’ ಎಂದು ಪ್ರಶ್ನಿಸಿದರು.

ಪರೇಶ ಮೇಸ್ತ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರನ್ನು ಇದೇ 15 ರಂದು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ಅವರು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪುವೇ ಪುನರ್‌ ಜನ್ಮ ಎತ್ತಿ ಬಂದಂತೆ ವರ್ತಿಸುತ್ತಿದ್ದಾರೆ. ಐಸಿಸ್‌ ಜೊತೆ ನಂಟು ಹೊಂದಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಕಾರ್ಯಕರ್ತರಿಗೆ ಸಿದ್ದರಾಮಯ್ಯ  ಎಲ್ಲಿಲ್ಲದ ಆದ್ಯತೆ ನೀಡುತ್ತಿದ್ದಾರೆ ಎಂದು ಶೋಭಾ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.