ADVERTISEMENT

ಮಾಜಿ ಸಚಿವ ವಿ.ಎಲ್.ಪಾಟೀಲ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಬೆಕ್ಕೇರಿ (ರಾಯಬಾಗ): ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ಹೃದಯಾಘಾತದಿಂದ ನಿಧನರಾದ ಹಿರಿಯ ರಾಜಕಾರಣಿ, `ರಾಯಬಾಗದ ಹುಲಿ' ಎಂದೇ ಹೆಸರಾಗಿದ್ದ ಮಾಜಿ ಸಚಿವ ವಸಂತರಾವ್ ಎಲ್.ಪಾಟೀಲ (92) ಅಂತ್ಯಸಂಸ್ಕಾರ  ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಅವರ ತೋಟದಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.

ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಹಾಜರಿದ್ದರು.ಬೆಂಗಳೂರಿನಿಂದ ಪಾರ್ಥಿವ ಶರೀರ ವನ್ನು ರಾಯಬಾಗ ಪಟ್ಟಣಕ್ಕೆ ಸೋಮವಾರ ಬೆಳಿಗ್ಗೆ ತರಲಾಯಿತು.  ಝೇಂಡಾ ಕಟ್ಟೆ ಬಳಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಾರ್ಥಿವ ಶರೀರಕ್ಕೆ ಹೂಮಾಲೆ ಅರ್ಪಿಸಿ ಅಂತಿಮ ದರ್ಶನ ಪಡೆದರು.

ನಂತರ ಮೆರವಣಿಗೆಯಲ್ಲಿ ಬೆಕ್ಕೇರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು.ಶಿಕ್ಷಣ ಪ್ರೇಮಿ: ವಸಂತರಾವ್ ಎಲ್.ಪಾಟೀಲ ರಾಯಬಾಗದಲ್ಲಿ 1945ರಲ್ಲಿ ಶಿಕ್ಷಣ ಪ್ರಸಾರಕ ಮಂಡಳಿ ಸ್ಥಾಪಿಸಿ, ನಂತರ ಕೆಲವು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು.

1952ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಆಗಿದ್ದರು. ನಂತರ 1957, 1967, 1972, 1983 ಮತ್ತು 1985ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 1962ರಲ್ಲಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದ್ದರು. ವೀರೇಂದ್ರ ಪಾಟೀಲ, ದೇವರಾಜ ಅರಸ್ ಮತ್ತು ರಾಮಕೃಷ್ಣ ಹೆಗಡೆ ಸಚಿವ ಸಂಪುಟದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಪಾಟೀಲರಿಗೆ ಮೂವರು ಪುತ್ರರಿದ್ದಾರೆ. ಅವರಲ್ಲಿ ಅಮರಸಿಂಹ ಪಾಟೀಲ ಕಾಂಗ್ರೆಸ್ ಪಕ್ಷದ ಮಾಜಿ ಸಂಸದರಾಗಿದ್ದು, ಶಿಕ್ಷಣ ಪ್ರಸಾರಕ ಮಂಡಳಿಯ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಇನ್ನೊಬ್ಬ ಪುತ್ರ ವಿವೇಕರಾವ್ ಪಾಟೀಲ ಸಹಕಾರಿ ಧುರೀಣ. ಮತ್ತೊಬ್ಬ ಪುತ್ರ ಪ್ರತಾಪ ರಾವ್ ಪಾಟೀಲ ಇಲ್ಲಿನ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.