ADVERTISEMENT

ಮಾತೃ ಪಕ್ಷಕ್ಕೆ ಮರಳಿದ ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 10:22 IST
Last Updated 9 ಜನವರಿ 2014, 10:22 IST

ಬೆಂಗಳೂರು: ನಾಲ್ಕು ದಶಕದಿಂದ ಒಡನಾಟ ಹೊಂದಿದ್ದ ಮಾತೃ ಪಕ್ಷ ಬಿಜೆಪಿಯನ್ನು ತೊರೆದು ಹೋಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಪುನಃ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡರು.

ಮಲ್ಲೇಶ್ವರದಲ್ಲಿರುವ ಬಿಜೆಪಿಯ ಪ್ರಧಾನ ಕಚೇರಿಯಲ್ಲಿ ನಡೆದ ಮರು ಸೇರ್ಪಡೆ ಕಾರ್ಯಕ್ರಮದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವ ಪಡೆಯಲು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಬಿಜೆಪಿ ರಾಜಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ಸೇರಿದಂತೆ ಹಿರಿಯ ನಾಯಕರು ಸ್ವಾಗತಿಸಿದರು.

ಸದಸ್ಯತ್ವ ಸ್ವೀಕರಿಸಿದ ನಂತರ ಮಾತನಾಡಿದ ಯಡಿಯೂರಪ್ಪ ಅವರು `ಹಳೆ ಘಟನೆಗಳನೆಲ್ಲ ಮರೆಯೋಣ. ಪರಸ್ಪರ ಅನುಮಾನಗಳನ್ನು ತೆಗೆದುಹಾಕಿ ಒಂದೇ ತಾಯಿ ಮಕ್ಕಳಂತೆ ಕೂಡಿ ಕಾರ್ಯನಿರ್ವಹಿಸೋಣ' ಎಂದು ಹೇಳಿದರು.

ಬಿಜೆಪಿಯೊಳಗಿನ ಆಂತರಿಕ ಕಚ್ಚಾಟ ಮತ್ತು ನಮ್ಮ ತಪ್ಪು ತೀರ್ಮಾನಗಳಿಂದ್ದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. `ಇದು ನಾವು ಮಾಡಿದ ಅಕ್ಷಮ್ಯ ಅಪರಾಧ (ಕಾಂಗ್ರೆಸ್‌ಗೆ ಅನುವು ಮಾಡಿಕೊಟ್ಟಿದ್ದು)' ಎಂದು ಯಡಿಯೂರಪ್ಪ ಹೇಳಿದರು.

ಕಾಂಗ್ರೆಸ್‌ನ ನಾಯಕತ್ವ ಭ್ರಷ್ಟಾಚಾರದ ಆರೋಪ ಎದುರಿಸುತ್ತಿದ್ದು, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಪ್ರಧಾನಿ ಆಗಬೇಕೆನ್ನುವುದು ದೇಶದ ಜನರೆಲ್ಲರ ಬಯಕೆಯಾಗಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕಿಂತಲೂ ಅಧಿಕ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ನಾವು ಒಟ್ಟಾಗಿ ಶ್ರಮಿಸುತ್ತೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಹಿನ್ನಲೆ: 2012ರ ನವೆಂಬರ್ 30ರಂದು ಯಡಿಯೂರಪ್ಪ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಸೇರಿ, ಬಿಜೆಪಿ ಮತ್ತು  ಆ ಪಕ್ಷದ ಮುಖಂಡರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದರು.

2013ರ ವಿಧಾನಸಭಾ ಚುನಾವಣೆಯ ಫಲಿತಾಂಶ ಬರುವವರೆಗೂ ಅವರ ಮಾತಿನ ಧಾಟಿಯಲ್ಲಿ ಯಾವ ಬದಲಾವಣೆಯೂ ಇರಲಿಲ್ಲ. ಫಲಿತಾಂಶ ಹೊರ ಬಿದ್ದ ನಂತರ ಮಾತಿನ ಶೈಲಿಯನ್ನು ಬದಲಿಸಿದ್ದ ಅವರು ಬಿಜೆಪಿ ಸೇರಲು ಮಾನಸಿಕವಾಗಿ ಸಿದ್ಧರಾಗಿದ್ದರು. ಆದರೂ ಬಿಜೆಪಿ ಕಡೆಯಿಂದಲೇ ಆಹ್ವಾನ ಬರಲಿ ಎನ್ನುವ ಕಾರಣಕ್ಕೆ ಇತ್ತೀಚಿನವರೆಗೂ ಕೆಜೆಪಿ ಕಟ್ಟುವುದಾಗಿಯೇ ಹೇಳುತ್ತಿದ್ದರು. ಒಂದು ಹಂತದಲ್ಲಿ ಎನ್‌ಡಿಎ ಬೆಂಬಲಿಸುವುದಾಗಿ ಹೇಳಿದ್ದರು. ನರೇಂದ್ರ ಮೋದಿ ಪ್ರಧಾನಿಯಾಗಲು ತಾವು ಅವರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳುತ್ತಾ ನಿಧಾನವಾಗಿ ತಮ್ಮ ನಿಲುವನ್ನು ಮಾರ್ಪಾಡು ಮಾಡಿಕೊಂಡಿದ್ದರು.

ADVERTISEMENT

ಪರಸ್ಪರ ಚರ್ಚೆ ನಂತರ ಜನವರಿ 2ರಂದು ಅವರು ಕೆಜೆಪಿಯನ್ನು ಬಿಜೆಪಿ ಜತೆ ವಿಲೀನಗೊಳಿಸುವ ತೀರ್ಮಾನ ಪ್ರಕಟಿಸಿದರು. ಬಿಜೆಪಿ ಬಿಟ್ಟ ದಿನದಿಂದ ಪುನಃ ವಾಪಸಾಗುವ ಹಿಂದಿನ ದಿನದವರೆಗೆ ಯಡಿಯೂರಪ್ಪ ನೀಡಿದ ಆಯ್ದ ಕೆಲ ಹೇಳಿಕೆಗಳು ಇಲ್ಲಿವೆ; ಯಡಿಯೂರಪ್ಪ ಆಡಿದ ಮಾತುಗಳ ಮೆಲುಕು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.