ADVERTISEMENT

ಮಾರಾಟವಾಗಿದ್ದವರು ಹೆತ್ತವರ ಮಡಿಲಿಗೆ

16 ಮಕ್ಕಳ ಪೈಕಿ 11 ಮಕ್ಕಳು ದತ್ತು ಪ್ರಕ್ರಿಯೆಗೆ ಒಳಪಡುವ ಸಾಧ್ಯತೆ

ಜಿ.ಬಿ.ನಾಗರಾಜ್
Published 21 ಏಪ್ರಿಲ್ 2018, 19:54 IST
Last Updated 21 ಏಪ್ರಿಲ್ 2018, 19:54 IST
ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.   

ಮೈಸೂರು: ಮಾರಾಟ ಜಾಲದಿಂದ ಪೊಲೀಸರು ರಕ್ಷಿಸಿದ 16 ಮಕ್ಕಳ ಪೈಕಿ ಮೂವರು ಹೆತ್ತವರ ಮಡಿಲು ಸೇರಿದ್ದಾರೆ. ಇನ್ನೂ ಒಂದು ಮಗುವಿನ ಹೆತ್ತ ತಾಯಿಯನ್ನು ಮಕ್ಕಳ ಕಲ್ಯಾಣ ಸಮಿತಿ ಗುರುತಿಸಿದ್ದು, ಹಸ್ತಾಂತರ ಪ್ರಕ್ರಿಯೆ ಚುರುಕುಗೊಂಡಿದೆ.

ಮಾರಾಟವಾಗಿದ್ದ ಕರುಳ ಕುಡಿಯನ್ನು ಮರಳಿ ಪಡೆದ ಅವಿವಾಹಿತೆಯೊಬ್ಬರು ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ. ಸಮಾಜಕ್ಕೆ ಅಂಜುತ್ತಿರುವ ಯುವತಿಗೆ ಆಪ್ತ ಸಮಾಲೋಚನೆ ನಡೆಸಿ ಮಗು ನೀಡಲಾಗಿದೆ. ಮಕ್ಕಳನ್ನು ಸಾಕುವ ಸಾಮರ್ಥ್ಯ ಇಲ್ಲದ ಏಕಪೋಷಕಿ ಭಿಕ್ಷುಕಿಗೆ ಮಗುವನ್ನು ನೀಡಲು ಸಮಿತಿ ಹಿಂದೇಟು ಹಾಕುತ್ತಿದೆ. ಆರ್ಥಿಕ ಸ್ಥಿತಿಗತಿಯನ್ನು ಅರಿತು ಹಸ್ತಾಂತರಿಸಲು ಸಮಿತಿ ನಿರ್ಧರಿಸಿದೆ.

ಹೆತ್ತವರು ಪತ್ತೆಯಾಗದ ಕಾರಣ ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಯಲ್ಲಿ 11 ಮಕ್ಕಳು ಉಳಿದಿದ್ದಾರೆ. ವಾರ ಹಾಗೂ 15 ದಿನಗಳಿಗೊಮ್ಮೆ ಇವರನ್ನು ಭೇಟಿಯಾಗಲು ಸಾಕು ಪೋಷಕರಿಗೆ ಹೈಕೋರ್ಟ್‌ ಹಾಗೂ ಒಂದನೇ ಪ್ರಧಾನ ಕಿರಿಯ ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಮಾರಾಟ ಜಾಲದಿಂದ ಖರೀದಿಸಿದ್ದ ಮಕ್ಕಳನ್ನು ತಮಗೇ ದತ್ತು ನೀಡುವಂತೆ ಸಾಕು ಪೋಷಕರು ನಡೆಸುತ್ತಿರುವ ಕಾನೂನು ಹೋರಾಟ ಮುಂದುವರಿದಿದೆ.

ADVERTISEMENT

ಶಿಶು ಸತ್ತಿರುವುದಾಗಿ ನಂಬಿಸಿದ್ದರು: ‘ನವಜಾತ ಶಿಶು ಮೃತಪಟ್ಟಿದೆ’ ಎಂಬ ವೈದ್ಯಕೀಯ ಸಿಬ್ಬಂದಿಯ ಮಾತಿನಿಂದ ಆಘಾತಗೊಂಡು ಮನೆಗೆ ಮರಳಿದ್ದ ದಂಪತಿಗೆ ಕೊನೆಗೂ ಕರುಳ ಕುಡಿ ಸಿಕ್ಕಿದೆ.

ಕೆ.ಆರ್‌.ನಗರದ ಗರ್ಭಿಣಿಯೊಬ್ಬರು ಮಂಡಿ ಮೊಹಲ್ಲಾದ ‘ನಸೀಮಾ ಆಸ್ಪತ್ರೆ’ಗೆ ದಾಖಲಾಗಿದ್ದರು. ಹೆರಿಗೆಯ ಬಳಿಕ ಶಿಶು ಮೃತಪಟ್ಟಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಬಾಣಂತಿಯನ್ನು ನಂಬಿಸಿದ್ದರು. ತಾವೇ ಅಂತ್ಯಕ್ರಿಯೆ ನೆರವೇರಿಸುವುದಾಗಿ ಭರವಸೆ ನೀಡಿ ಸಾಗಹಾಕಿದ್ದರು. ಮಾನಸಿಕ ಅಘಾತಕ್ಕೆ ಒಳಗಾಗಿದ್ದ ತಾಯಿ, ಶಿಶು ಮುಖ ನೋಡದೇ ಮನೆಗೆ ಹಿಂದಿರುಗಿದ್ದರು. ಆ ಬಳಿಕ ಶಿಶುವನ್ನು ಆರೋಪಿಗಳು ದಕ್ಷಿಣ ಕನ್ನಡದ ಶ್ರೀಮಂತ ಕುಟುಂಬವೊಂದಕ್ಕೆ ಮಾರಾಟ ಮಾಡಿದ್ದರು.

‘ಮಕ್ಕಳ ಮಾರಾಟ ಜಾಲದಲ್ಲಿ ಆಸ್ಪತ್ರೆಯ ಹೆಸರು ತಳುಕು ಹಾಕಿಕೊಂಡಿದ್ದರಿಂದ ಅನುಮಾನಗೊಂಡ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದರು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಈ ಶಿಶು ಮಾರಾಟವಾಗಿದ್ದ ಸಂಗತಿ ಖಚಿತವಾಗಿತ್ತು. ಡಿಎನ್‌ಎ ಪರೀಕ್ಷೆಯ ಮೂಲಕ ಮಗುವಿನ ತಂದೆ–ತಾಯಿಯನ್ನು ಪತ್ತೆಹಚ್ಚಲಾಯಿತು. ಎರಡು ವರ್ಷದ ಕಂದನನ್ನು ಮೂರು ತಿಂಗಳ ಹಿಂದೆ ಹೆತ್ತವರ ಮಡಿಲಿಗೆ ನೀಡಲಾಯಿತು’ ಎಂದು ಮೂಲಗಳು ಮಾಹಿತಿ ನೀಡಿವೆ.

ಪುನರ್ವಸತಿ ಕೇಂದ್ರದಲ್ಲಿ ಆಶ್ರಯ: 2016ರಲ್ಲಿ ಮಕ್ಕಳ ಮಾರಾಟ ಜಾಲವನ್ನು ಭೇದಿಸಿದ ಜಿಲ್ಲಾ ಪೊಲೀಸರು 11 ಆರೋಪಿಗಳನ್ನು ಬಂಧಿಸಿ 16 ಮಕ್ಕಳನ್ನು ರಕ್ಷಿಸಿದ್ದರು. 9 ಹೆಣ್ಣು ಹಾಗೂ 7 ಗಂಡು ಮಕ್ಕಳನ್ನು ಮೈಸೂರಿನ ಬಾಪೂಜಿ ಮಕ್ಕಳ ಮನೆ, ಜೀವೋದಯ ಸಂಸ್ಥೆ, ಮಂಡ್ಯ ಜಿಲ್ಲೆಯ ವಿಕಸನ ಸಂಸ್ಥೆ ಹಾಗೂ ಮೇಲುಕೋಟೆಯ ಜನಪದ ಸೇವಾ ಟ್ರಸ್ಟ್‌ನಲ್ಲಿ ಪುನರ್ವಸತಿ ಕಲ್ಪಿಸಲಾಗಿತ್ತು. ಈ ಪೈಕಿ ಒಂದು ಮಗು ಆಕಸ್ಮಿಕವಾಗಿ ಮೃತಪಟ್ಟಿದೆ.

ತೊಡಕಾದ ಭಾಷೆ
ಪೊಲೀಸರು ರಕ್ಷಿಸಿದ ಬಾಲಕ ಹಾಗೂ ಆತನನ್ನು ಸಾಕುತ್ತಿದ್ದ ಪೋಷಕರ ನಡುವಿನ ಸಂವಹನಕ್ಕೆ ಭಾಷೆ ತೊಡಕಾಗಿ ಪರಿಣಮಿಸಿದೆ.

5 ವರ್ಷ 5 ತಿಂಗಳ ಮಗುವನ್ನು ಕೇರಳದ ತ್ರಿಶೂರ್ ಜಿಲ್ಲೆಯಿಂದ 2016ರ ನ.14ರಂದು ರಕ್ಷಣೆ ಮಾಡಲಾಗಿತ್ತು. ಮಾರಾಟ ಜಾಲದಿಂದ ಖರೀದಿಸಿದ 20 ದಿನಗಳ ಹಸುಗೂಸನ್ನು ಐದೂವರೆ ವರ್ಷ ಪೋಷಣೆ ಮಾಡಿದ್ದವರಿಗೆ ತೀವ್ರ ಸಂಕಟವುಂಟಾಗಿತ್ತು. ವಿಚಾರಣೆ ನಡೆಸಿದ ಮಕ್ಕಳ ಕಲ್ಯಾಣ ಸಮಿತಿ, ಬಾಲಕನನ್ನು ಬಾಲಮಂದಿರಕ್ಕೆ ಹಸ್ತಾಂತರಿಸಿತ್ತು.

ಒಂದೂವರೆ ವರ್ಷದಿಂದ ಕರ್ನಾಟಕದಲ್ಲಿರುವ ಬಾಲಕ ಕನ್ನಡ ಕಲಿತಿದ್ದಾನೆ. ಮಾತೃಭಾಷೆಯಾಗಿದ್ದ ಮಲಯಾಳಂ ಮರೆಯುತ್ತಿದ್ದಾನೆ. ವಾರಕ್ಕೊಮ್ಮೆ ಭೇಟಿಯಾಗಲು ಬರುವ ಪೋಷಕರು ಮಾತನಾಡುವ ಮಲಯಾಳಂ ಈತನಿಗೆ ಅರ್ಥವಾಗುತ್ತಿಲ್ಲ.

ಸಮಾಜಕ್ಕೆ ಅಂಜಿದ ಯುವತಿ
ಸಮಾಜವನ್ನು ಎದುರಿಸಲು ಅಂಜುತ್ತಿರುವ ಅವಿವಾಹಿತೆಯೊಬ್ಬರು ಕರುಳಬಳ್ಳಿಯನ್ನು ತನ್ನೊಂದಿಗೆ ಇಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿಯಿಂದ ಮಗುವನ್ನು ಸ್ವಾಧೀನಕ್ಕೆ ಪಡೆದಿರುವ ಯುವತಿ, ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಿದ್ದಾರೆ.

ಅವಿವಾಹಿತೆ ಮಗುವಿಗೆ ಜನ್ಮ ನೀಡಿದ್ದ ಸಂಗತಿ ಮಕ್ಕಳ ಮಾರಾಟ ಜಾಲ ಪತ್ತೆಯಾದ ಬಳಿಕ ಬೆಳಕಿಗೆ ಬಂದಿತ್ತು. ಜಾಲದ ಪ್ರಮುಖ ಆರೋಪಿ ರವಿಚಂದ್ರ ಎಂಬಾತ ಯುವತಿಯನ್ನು ವಂಚಿಸಿದ್ದ ರೀತಿಯೂ ಪೊಲೀಸರಿಗೆ ಅಚ್ಚರಿ ಮೂಡಿಸಿತ್ತು.

ರವಿಚಂದ್ರನೊಂದಿಗೆ ಯುವತಿಗೆ ಪ್ರೇಮಾಂಕುರವಾಗಿತ್ತು. ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ ಆರೋಪಿ ದೈಹಿಕ ಸಂಪರ್ಕ ಬೆಳೆಸಿದ್ದ. ಮೋಸಕ್ಕೆ ಒಳಗಾದ ಪ್ರಿಯತಮೆ ಗರ್ಭಿಣಿಯಾಗಿದ್ದು, ಸುರಕ್ಷಿತ ಗರ್ಭಪಾತ ಸಾಧ್ಯವಿಲ್ಲವೆಂದು ಮನದಟ್ಟಾದ ಬಳಿಕ ಬಾಡಿಗೆ ಮನೆಯೊಂದರಲ್ಲಿ ಪ್ರೇಮಿಗಳು ವಾಸವಾಗಿದ್ದರು. ಹೆರಿಗೆಯ ಬಳಿಕ ಈ ಮಗುವನ್ನು ರಾಜೀವನಗರದ ದಂಪತಿಗೆ ಪ್ರಿಯಕರ ಮಾರಾಟ ಮಾಡಿದ್ದ.

*
ಹೆತ್ತವರು ಪತ್ತೆಯಾಗದ ಮಕ್ಕಳನ್ನು ಸಾಕುಪೋಷಣೆಗೆ ಒಪ್ಪಿಸದೇ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಕಪ್ಪುಬಣ್ಣದ ಟೇಪಿನಿಂದ ಸುತ್ತಿದ ಕಡತಗಳ ನಡುವೆ ಮಕ್ಕಳ ಭವಿಷ್ಯ ಬಂದಿಯಾಗಿದೆ.
–ಪಿ.ಪಿ.ಬಾಬುರಾಜ್‌, ಮಕ್ಕಳ ಹಕ್ಕುಗಳ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.