ADVERTISEMENT

ಮುಂದುವರಿದ ಮಳೆ: ಸಿಡಿಲಿನಿಂದ ಹಾನಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 19:30 IST
Last Updated 4 ಜೂನ್ 2011, 19:30 IST

ಬೆಂಗಳೂರು: ರಾಜ್ಯದ ವಿವಿಧೆಡೆ ಮುಂಗಾರು ಮಳೆ ಶನಿವಾರ ಮುಂದುವರಿದಿದೆ. ಉಡುಪಿ ಜಿಲ್ಲೆಯಲ್ಲಿ ಸಿಡಿಲಿನಿಂದ ಮನೆಗಳಿಗೆ ಹಾನಿ ಆಗಿದೆ. ಲಿಂಗನಮಕ್ಕಿ, ಭದ್ರಾ ಹಾಗೂ ಹಾರಂಗಿ ಅಣೆಕಟ್ಟೆಗಳ ಒಳ ಹರಿವಿನಲ್ಲಿ ಏರಿಕೆಯಾಗಿದೆ.

ಒಳಹರಿವಿನ ಪ್ರಮಾಣ ಲಿಂಗನಮಕ್ಕಿ ಜಲಾಶಯಕ್ಕೆ   4,296 ಕ್ಯೂಸೆಕ್,  ಭದ್ರಾ ಜಲಾಶಯಕ್ಕೆ 1,153 ಕ್ಯೂಸೆಕ್ ಇತ್ತು . ಹಾರಂಗಿ ಜಲಾಶಯದಲ್ಲಿ ಶನಿವಾರ ನೀರಿನ ಮಟ್ಟ 2837 ಅಡಿ ತಲುಪಿತ್ತು. ಜಲಾಶಯದ ಗರಿಷ್ಠ ಮಟ್ಟ 2,859 ಅಡಿ.

ತೀರ್ಥಹಳ್ಳಿ, ಹೊಸನಗರ, ಸಾಗರದಲ್ಲಿ ಶುಕ್ರವಾರ ಇಡೀ ರಾತ್ರಿ ಹಾಗೂ ಶನಿವಾರ ಮಧ್ಯಾಹ್ನದವರೆಗೆ ಮಳೆ ಸುರಿದಿದೆ. ತೀರ್ಥಹಳ್ಳಿ ನಗರದಲ್ಲಿ 48 ಮಿ.ಮೀ., ಆಗುಂಬೆಯಲ್ಲಿ 65 ಮಿ.ಮೀ. ಮಳೆಯಾಗಿದೆ. ಜೋಗದಲ್ಲೂ ಬೆಳಿಗ್ಗೆ ಗುಡುಗು, ಸಿಡಿಲಿನಿಂದ ಕೂಡಿದ ಭಾರೀ ಮಳೆಯಾಗಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಬೆಳಿಗ್ಗೆಯಿಂದಲೇ ಬಿಸಿಲಿತ್ತು. ಸಂಜೆ ಸಾಧಾರಣ ಮಳೆಯಾಯಿತು.

ಮಂಗಳೂರಿನಲ್ಲಿ 31.2 ಮೀ.ಮೀ, ಮೂಡುಬಿದಿರೆ- 32.8 ಮೀ.ಮೀ, ಬಂಟ್ವಾಳ- 23.8 ಮೀ.ಮೀ, ಪುತ್ತೂರು- 59.6 ಮೀ.ಮೀ, ಕಡಬ- 30.2 ಮೀ.ಮೀ, ಸುಳ್ಯ- 21.8 ಮೀ.ಮೀ, ಬೆಳ್ತಂಗಡಿ- 17 ಮೀ.ಮೀ. ಮಳೆ ಸುರಿದಿದೆ.

ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಧಾರಾಕಾರ ಸುರಿದ ಮಳೆ ಶನಿವಾರ ಕ್ಷೀಣಿಸಿದೆ. ಜಿಲ್ಲೆಯ ವಿವಿಧೆಡೆ ಸಿಡಿಲು ಬಡಿದು 3 ಲಕ್ಷ ಮೌಲ್ಯದ ಸ್ವತ್ತು ಹಾನಿಗೊಳಗಾಗಿದೆ. ಕುಂದಾಪುರ ಕುಂಭಾಶಿಯಲ್ಲಿ ಗಾಳಿ-ಮಳೆಯಿಂದಾಗಿ ಆರು ಮನೆಗಳು ಭಾಗಶಃ ಹಾನಿಗೊಳಗಾಗಿವೆ. 70 ಬಡಗುಬೆಟ್ಟು ಗ್ರಾಮದಲ್ಲಿ ಸಿಡಿಲಿನಿಂದ ಅಂಗಡಿಗೆ ಹಾನಿಯಾಗಿದೆ. ಉಡುಪಿ 24.2 ಮಿ.ಮೀ, ಕುಂದಾಪುರ 90.2, ಕಾರ್ಕಳದಲ್ಲಿ 29.2 ಮಿ.ಮೀ ಮಳೆಯಾಗಿದೆ.

ಕಡೂರು, ತರೀಕೆರೆ ತಾಲ್ಲೂಕು ಹೊರತುಪಡಿಸಿ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶನಿವಾರವೂ ಮಳೆಯಾಗಿದೆ. ಮೂಡಿಗೆರೆಯ ಮುದ್ರೆಮನೆ ಬಳಿ ಬೃಹತ್ ಮರ ಹೆದ್ದಾರಿಗೆ ಉರುಳಿದ್ದು ಸಂಚಾರಕ್ಕೆ ಅಡಚಣೆಯಾಗಿತ್ತು. ಕಳಸ ಹೋಬಳಿಯಾದ್ಯಂತ 3 ದಿನಗಳಿಂದಲೂ ಮಳೆ ಅಬ್ಬರಿಸುತ್ತಿದೆ. ಕೊಪ್ಪ ತಾಲ್ಲೂಕಿನಲ್ಲಿ ಹದವಾದ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹದ ಮಳೆಯಾಗಿದೆ.

ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಹಾವೇರಿ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಕೃಷಿ ಚಟುವಟಿಕೆಗಳಿಗೆ ಜೀವ ಬಂದಿದೆ. ಮಳೆ ಆಗಾಗ ಬಿಡುವು ನೀಡುತ್ತಿರುವುದರಿಂದ ಕೃಷಿ ಕಾರ್ಯಗಳಿಗೆ ಅನುಕೂಲವಾಗಿದೆ. ಹುಬ್ಬಳ್ಳಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಸತತವಾಗಿ ಮಳೆ ಸುರಿಯಿತು.

ಕೊಡಗು ಜಿಲ್ಲೆಯಾದ್ಯಂತ ಶನಿವಾರ ಕೂಡ ಮಳೆ ಬಿರುಸಿನಿಂದ ಸುರಿಯಿತು. ಜಿಲ್ಲೆಯಲ್ಲಿ ಸರಾಸರಿ 35.09ಮಿ.ಮೀ.ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 42.60 ಮಿ.ಮೀ, ವಿರಾಜಪೇಟೆ ತಾಲ್ಲೂಕಿನಲ್ಲಿ 49.12 ಮಿ.ಮೀ. ಹಾಗೂ ಸೋಮವಾರಪೇಟೆ ತಾಲ್ಲೂಕಿನಲ್ಲಿ 13.55ಮಿ.ಮೀ.ನಷ್ಟು ಮಳೆ ಸುರಿದಿದೆ.

ಹದ ಮಳೆ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಶಿರಸಿ, ಯಲ್ಲಾಪುರ, ಸಿದ್ದಾಪುರ ಹಾಗೂ ಕರಾವಳಿ ಪ್ರದೇಶಗಳಲ್ಲಿ ಶನಿವಾರ ಮಳೆ ಮುಂದುವರಿದಿದೆ. ಕಾರವಾರ, ಶಿರಸಿ, ಅಂಕೋಲಾ, ಹೊನ್ನಾವರ, ಭಟ್ಕಳ ಮತ್ತಿತರ ಕಡೆಗಳಲ್ಲಿ ಬೆಳಿಗ್ಗೆಯಿಂದ ಹದವಾದ ಮಳೆ ಆಗುತ್ತಿದ್ದು ಯಾವುದೇ ಹಾನಿ ಸಂಭವಿಸಿಲ್ಲ.

ಘಟ್ಟ ಪ್ರದೇಶದಲ್ಲಿ ಚಳಿಯ ವಾತಾವರಣವಿದ್ದು, ಕರಾವಳಿಯ ನದಿಗಳಿಗೆ ನೀರಿನ ಹರಿವು ಹೆಚ್ಚುತ್ತಿದೆ. ಕರಾವಳಿ ಪ್ರದೇಶದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಈಗಾಗಲೇ ಆದೇಶ ಹೊರಡಿಸಿದೆ. ಜೂನ್ 15ರಿಂದ ಅನ್ವಯವಾಗುವಂತೆ ನಿಷೇಧ ಜಾರಿಗೆ ಬರಲಿದೆ. ಆದರೂ ಮಳೆ ಸುರಿಯುತ್ತಿರುವ ಈ ಸಂದರ್ಭದಲ್ಲಿ ಸಮುದ್ರದಲ್ಲಿ ಇಳಿಯುವಾಗ ಎಚ್ಚರದಿಂದ ಇರುವಂತೆ ಮೀನುಗಾರರಿಗೆ ಸೂಚಿಸಲಾಗಿದೆ.

ತೆಪ್ಪ ಮಗುಚಿ ಮೂವರು ನೀರು ಪಾಲು

ADVERTISEMENT

ರಾಣೆಬೆನ್ನೂರ: ತುಂಗಭದ್ರಾ ನದಿಯಲ್ಲಿ ತೆಪ್ಪ ಮಗುಚಿದ ಪರಿಣಾಮ ಒಂದೇ ಕುಟುಂಬದ ಮೂವರು ಮಹಿಳೆಯರು ಮೃತಪಟ್ಟ ಘಟನೆ ಶನಿವಾರ ರಾಣಿಬೆನ್ನೂರು ತಾಲ್ಲೂಕಿನ ಸೋಮಲಾಪುರ ಬಳಿ ನಡೆದಿದೆ.
ಮೃತಪಟ್ಟವರನ್ನು ಸೋಮಲಾಪುರ ಗ್ರಾಮದ ಗಂಗಮ್ಮ ನೀಲಪ್ಪ ಹಳ್ಳೇರ (45), ಕೆಂಚಮ್ಮ ನಿಂಗಪ್ಪ ಹಳ್ಳೇರ (65) ಹಾಗೂ ಪಾರಮ್ಮ ಚಂದ್ರಪ್ಪ ಹಳ್ಳೇರ (30) ಎಂದು ಗುರುತಿಸಲಾಗಿದೆ. ಗಂಗಮ್ಮ ಹಾಗೂ ಕೆಂಚಮ್ಮ ಎಂಬುವವರ ಶವಗಳು ಪತ್ತೆಯಾಗಿವೆ.

ಪಾರಮ್ಮಳ ಶವಕ್ಕಾಗಿ ತೀವ್ರ ಶೋಧ ನಡೆದಿದೆ. ಹಳ್ಳೇರ ಕುಟುಂಬ ಸಂಬಂಧಿಯೊಬ್ಬರು ನದಿಯಾಚೆ ಇರುವ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ನಿಟ್ಟೂರ ಬಸಾಪುರ ಗ್ರಾಮದಲ್ಲಿ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರಕ್ಕಾಗಿ ತೆಪ್ಪದಲ್ಲಿ ತೆರಳಿದ್ದ ಇವರು, ಶವ ಸಂಸ್ಕಾರ ಮುಗಿಸಿಕೊಂಡು ಸೋಮಲಾಪುರಕ್ಕೆ ವಾಪಸ್ಸು ಬರುತ್ತಿದ್ದಾಗ ಮಳೆಗಾಳಿ ಜೋರಾಗಿ ಬೀಸಿದ ಪರಿಣಾಮ ತೆಪ್ಪ ಮಗುಚಿ ಈ ದುರ್ಘಟನೆ ಸಂಭವಿಸಿದೆ.

ತೆಪ್ಪದಲ್ಲಿ ನಾವಿಕ ಸೇರಿ ಏಳು ಜನರಿದ್ದರು. ಅವರಲ್ಲಿ ನಾವೀಕ ಗುಡ್ಡಪ್ಪ ಹೀನದಳ್ಳಿ (50) ಸೇರಿದಂತೆ ಶಾಂತವ್ವ ಮಲ್ಲಪ್ಪ ಕೊಕ್ಕನವರ (40), ದ್ಯಾಮವ್ವ ಮಲ್ಲಪ್ಪ ಕೊಕ್ಕನವರ (25), ಮಂಜಪ್ಪ ಕೊಕ್ಕನವರ (58) ಈಜಿ ದಡ ಸೇರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.