ADVERTISEMENT

ಮುಖ್ಯಮಂತ್ರಿ ವಿರುದ್ಧ ಮೊಕದ್ದಮೆ: ವಕೀಲ ಸಿರಾಜಿನ್ ಬಾಷಾ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2011, 19:30 IST
Last Updated 28 ಫೆಬ್ರುವರಿ 2011, 19:30 IST

ಬೆಂಗಳೂರು: ಮುಖ್ಯಮಂತ್ರಿ ವಿರುದ್ಧ ಹೂಡಿರುವ ಖಾಸಗಿ ಮೊಕದ್ದಮೆಗೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರ ಹೇಳಿಕೆ ದಾಖಲು ಮಾಡುವ ಪ್ರಕ್ರಿಯೆಗೆ ವಿಶೇಷ ನ್ಯಾಯಾಲಯ ಸೋಮವಾರ ಚಾಲನೆ ನೀಡಿದೆ. ಮೊದಲ ಮೊಕದ್ದಮೆಯಲ್ಲಿ ಉಲ್ಲೇಖಿಸಿರುವ ಎರಡು ಡಿನೋಟಿಫಿಕೇಶನ್ ಪ್ರಕರಣಗಳ ಸಂಬಂಧ ಅರ್ಜಿದಾರರು ಸೋಮವಾರ ಹೇಳಿಕೆ ನೀಡಿದರು.

ಇದೇ ವೇಳೆ ಮಾಜಿ ಪ್ರಧಾನಿ ಎಚ್.ಡಿ,ದೇವೇಗೌಡ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವಕೀಲ ವಿನೋದ್‌ಕುಮಾರ್ ಸಲ್ಲಿಸಿದ್ದ ಖಾಸಗಿ ಮೊಕದ್ದಮೆಯನ್ನೂ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ. ಮಾರ್ಚ್ 9ರಂದು ಅರ್ಜಿದಾರರ ಹೇಳಿಕೆ ದಾಖಲಿಸಲು ದಿನಾಂಕ ನಿಗದಿ ಮಾಡಲಾಗಿದೆ.

ರೂ 28 ಕೋಟಿ ನಷ್ಟ: ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ’ ಪ್ರಕರಣಗಳ ವಿಶೇಷ ನ್ಯಾಯಾಲಯವೂ ಆಗಿರುವ ನಗರದ 23ನೇ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಹಾಜರಾದ ಸಿರಾಜಿನ್ ಬಾಷಾ, ಜನವರಿ 22ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಿಸಿದ್ದ ಮೊದಲ ಮೊಕದ್ದಮೆಯ ಸಂಬಂಧ ಹೇಳಿಕೆ ನೀಡಿದರು. 

ಒಂದೂವರೆ ಗಂಟೆಗಳ ಕಲಾಪದಲ್ಲಿ ನ್ಯಾಯಾಧೀಶರಾದ ಸಿ.ಬಿ.ಹಿಪ್ಪರಗಿ, ಮೊದಲ ಮೊಕದ್ದಮೆಯಲ್ಲಿ ಉಲ್ಲೇಖಿಸಿದ್ದ ಎರಡು ಪ್ರಕರಣಗಳ ಬಗ್ಗೆ ಅರ್ಜಿದಾರರ ಹೇಳಿಕೆ ಪಡೆದರು.

‘ಅರ್ಕಾವತಿ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಬೆಂಗಳೂರಿನ ರಾಚೇನಹಳ್ಳಿಯ ಸರ್ವೇ ನಂಬರ್ 55/2ರ 1.12 ಎಕರೆ ಮತ್ತು ಸರ್ವೇ ನಂಬರ್ 56ರ 16 ಗುಂಟೆ ಭೂಮಿಯನ್ನು ಮುಖ್ಯಮಂತ್ರಿಯವರ ಕುಟುಂಬದವರ ಲಾಭಕ್ಕಾಗಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಲಾಗಿದೆ. ಈ ಎರಡೂ ಪ್ರಕರಣಗಳಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 28 ಕೋಟಿ ರೂಪಾಯಿ ನಷ್ಟ ಉಂಟಾಗಿದೆ’ ಎಂದು ಬಾಷಾ ನ್ಯಾಯಾಲಯಕ್ಕೆ ತಿಳಿಸಿದರು.

ಛಾಯಾಪ್ರತಿಗೆ ಆಕ್ಷೇಪ: ಅರ್ಜಿಯಲ್ಲಿ ಕೆಲವು ದಾಖಲೆಗಳ ಛಾಯಾಪ್ರತಿಗಳನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಾಧೀಶರು, ದೃಢೀಕೃತ ದಾಖಲೆಗಳನ್ನೇ ಸಲ್ಲಿಸಬೇಕು. ಆಗ ಮಾತ್ರ ಅವುಗಳನ್ನು ಸಾಕ್ಷ್ಯ ಎಂದು ಪರಿಗಣಿಸಲು ಸಾಧ್ಯ ಎಂದರು.

ಆಗ ಅರ್ಜಿದಾರರ ಪರ ವಕೀಲ ಸಿ.ಎಚ್.ಹನುಮಂತರಾಯ, ‘ದಾಖಲೆಗಳ ಛಾಯಾಪ್ರತಿಗಳನ್ನು ಸಾಕ್ಷ್ಯವಾಗಿ ಸಲ್ಲಿಸಲು ‘ಸಾಕ್ಷಿ ಕಾಯ್ದೆ’ಯಲ್ಲಿ ಅವಕಾಶವಿದೆ. ದೃಢೀಕೃತ ಪ್ರತಿಯನ್ನು ಪ್ರಾಥಮಿಕ ಸಾಕ್ಷ್ಯ ಎಂಬುದಾಗಿಯೂ, ಛಾಯಾಪ್ರತಿಗಳನ್ನು ಪೂರಕ ಸಾಕ್ಷ್ಯ ಎಂಬುದಾಗಿಯೂ ಪರಿಗಣಿಸಲಾಗುತ್ತದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ದೃಢೀಕೃತ ದಾಖಲೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು. ಅವುಗಳನ್ನು ಶೀಘ್ರದಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ವಾದಿಸಿದರು.

ಆದರೆ ಅರ್ಜಿದಾರರ ವಾದವನ್ನು ಪೂರ್ಣವಾಗಿ ಒಪ್ಪದ ನ್ಯಾಯಾಲಯ, ಈ ಬಗ್ಗೆ ಪರಿಶೀಲನೆ ನಡೆಸಿ ಆದೇಶ ನೀಡುವುದಾಗಿ ತಿಳಿಸಿದೆ.

 ಗೌಡರ ವಿರುದ್ಧವೂ ಹೇಳಿಕೆ ದಾಖಲು
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ವಕೀಲ ಎಂ.ವಿನೋದ್‌ಕುಮಾರ್ ದಾಖಲಿಸಿರುವ ಖಾಸಗಿ ಮೊಕದ್ದಮೆಯನ್ನೂ ವಿಶೇಷ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ. ಈ ಸಂಬಂಧ ಮಾರ್ಚ್ 9ರಂದು ಅರ್ಜಿದಾರರ ಹೇಳಿಕೆ ದಾಖಲಿಸಿಕೊಳ್ಳಲಿದೆ.

ಫೆಬ್ರುವರಿ 4ರಂದು ವಿನೋದ್‌ಕುಮಾರ್ ದಾಖಲಿಸಿರುವ ಖಾಸಗಿ ಮೊಕದ್ದಮೆಯ ವಿಚಾರಣೆ ಸೋಮವಾರ ನಡೆಯಿತು. ಈ ಮೊಕದ್ದಮೆಯನ್ನು ಖಾಸಗಿ ಮೊಕದ್ದಮೆಗಳ ಪಟ್ಟಿಯಲ್ಲಿ ದಾಖಲಿಸುವಂತೆ ನ್ಯಾಯಾಧೀಶರು, ರಿಜಿಸ್ಟ್ರಾರ್‌ಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT