ADVERTISEMENT

ಮುಚ್ಚಳಿಕೆ ಬರೆದುಕೊಟ್ಟರೂ ಮದುವೆ!

ಬಾಲ್ಯ ವಿವಾಹ, ಗುಜ್ಜರ್ ಕಿ ಶಾದಿ ತಡೆಗೆ ಅಧಿಕಾರಿಗಳಿಂದ ವ್ಯಾಪಕ ಯತ್ನ

ಸುಭಾಸ ಎಸ್.ಮಂಗಳೂರ
Published 30 ನವೆಂಬರ್ 2016, 19:30 IST
Last Updated 30 ನವೆಂಬರ್ 2016, 19:30 IST
ಮುಚ್ಚಳಿಕೆ ಬರೆದುಕೊಟ್ಟರೂ ಮದುವೆ!
ಮುಚ್ಚಳಿಕೆ ಬರೆದುಕೊಟ್ಟರೂ ಮದುವೆ!   

ಕಲಬುರ್ಗಿ: ಬಾಲ್ಯ ವಿವಾಹ, ಗುಜ್ಜರ್ ಕಿ ಶಾದಿ ತಡೆಗಟ್ಟಿದ ಸಂದರ್ಭದಲ್ಲಿ ಮುಚ್ಚಳಿಕೆ ಪತ್ರ ಬರೆದುಕೊಟ್ಟ ಪೋಷಕರು ಮತ್ತೆ ವಿವಾಹ ಮಾಡಿರುವ ನಾಲ್ಕು ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿವೆ. ಇದರಿಂದ ಎಚ್ಚೆತ್ತುಕೊಂಡಿರುವ ಅಧಿಕಾರಿಗಳ ತಂಡ ತಡೆಗಟ್ಟಿದ ಬಾಲ್ಯ ವಿವಾಹಗಳ ಮರು ವಿಚಾರಣೆಯನ್ನು ಆರಂಭಿಸಿದೆ.

ಜಿಲ್ಲೆಯಾದ್ಯಂತ ಎಲ್ಲೇ ಬಾಲ್ಯ ವಿವಾಹ ನಡೆಯುತ್ತಿದ್ದರೂ ಮಾಹಿತಿ ಕಲೆ ಹಾಕುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ, ಡಾನ್ ಬಾಸ್ಕೊ ಹಾಗೂ ಚೈಲ್ಡ್ ಲೈನ್ ಸಂಸ್ಥೆಗಳ ಪದಾಧಿಕಾರಿಗಳು ದಾಳಿ ಮಾಡಿ ಬಾಲ್ಯ ವಿವಾಹಗಳನ್ನು ತಡೆಗಟ್ಟುತ್ತಾರೆ. ಇಷ್ಟೇ ಅಲ್ಲ ಪೋಷಕರಿಂದ ಬಾಲ್ಯ ವಿವಾಹ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುತ್ತಾರೆ. ಆದರೆ ಇಂಥ ಪ್ರಕರಣಗಳಲ್ಲಿ ಪೋಷಕರು ಸ್ವಲ್ಪ ದಿನಗಳ ನಂತರ ಗುಟ್ಟಾಗಿ ಮದುವೆ ಮಾಡುತ್ತಿದ್ದಾರೆ.

ತಂಡ ರಚನೆ: ಈ ವಿಷಯವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾರ್ಗದರ್ಶನದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೂ ಆದ ಬಾಲ್ಯ ವಿವಾಹ ನಿಷೇಧ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯ ಅಧಿಕಾರಿ, ಪೊಲೀಸ್ ಸಬ್ ಇನ್‌ಸ್ಪೆಕ್ಟರ್, ಇಬ್ಬರು ಪುರುಷ ಕಾನ್‌ಸ್ಟೆಬಲ್, ಇಬ್ಬರು ಮಹಿಳಾ ಕಾನ್‌ಸ್ಟೆಬಲ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಒಬ್ಬರು ಸದಸ್ಯರು, ಚೈಲ್ಡ್ ಲೈನ್‌ನ ಇಬ್ಬರು ಸದಸ್ಯರನ್ನು ಒಳಗೊಂಡ ಎಂಟು ಪ್ರತ್ಯೇಕ ತಂಡಗಳನ್ನು ರಚಿಸಿದ್ದಾರೆ.

ಈ ತಂಡವು ಸಾಕಷ್ಟು ಅಧ್ಯಯನ ಮಾಡಿ, ಮಂಗಳವಾರ ದಿಢೀರ್‌ ಭೇಟಿ ನೀಡಿ 37 ಪ್ರಕರಣಗಳನ್ನು ಮರು ವಿಚಾರಣೆಗೆ ಒಳಪಡಿಸಿದೆ. ಈ ಪೈಕಿ ಎರಡು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿದೆ.

‘2015ರಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ಒಟ್ಟು 83 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಗಟ್ಟಲಾಗಿದೆ. ಈ ಪೈಕಿ 37 ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಕಿ, ಆಕೆಯ ಪೋಷಕರನ್ನು ಕರೆ ತಂದು ಮರು ವಿಚಾರಣೆಗೆ ಒಳಪಡಿಸಲಾಗಿದೆ. 28 ಪ್ರಕರಣಗಳಲ್ಲಿ ಬಾಲಕಿ ಮತ್ತು ಪೋಷಕರಿಗೆ ತಿಳಿವಳಿಕೆ ನೀಡಿ, ಕೌನ್ಸೆಲಿಂಗ್ ಮಾಡಿ ವಾಪಸು ಕಳುಹಿಸಲಾಗಿದೆ.

9 ಪ್ರಕರಣಗಳು ಸಂಶಯದಿಂದ ಕೂಡಿರುವುದರಿಂದ ಆ ಬಾಲಕಿಯರಿಗೆ ಆಳಂದ ರಸ್ತೆಯ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ಪುನರ್ವಸತಿ ಕಲ್ಪಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ’ ಎಂದು ತಂಡದಲ್ಲಿದ್ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೈರಿ ತುಂಬ ಗುಜರಾತ್ ವಿಳಾಸ!: ಅಂಕಲಗಾದಲ್ಲಿ ‘ಗುಜ್ಜರ್ ಕಿ ಶಾದಿ’ ಮಾಡಿಸುವಲ್ಲಿ ಯಶಸ್ವಿಯಾಗಿದ್ದ ಮಧ್ಯವರ್ತಿ ಮಹಿಳೆಯ ಪತ್ತೆಗೆ ಅಧಿಕಾರಿಗಳು ಮುಂದಾಗಿದ್ದರು. ಆಕೆ ಆಳಂದ ಬೋಳೆವಾಡ ಗ್ರಾಮದಲ್ಲಿ ಇದ್ದಾಳೆ ಎಂಬ ಮಾಹಿತಿ ಪಡೆದು  ಅಲ್ಲಿಗೆ ಹೋದಾಗ, ವಿಷಯ ಅರಿತ ಆಕೆ ತಲೆಮರೆಸಿಕೊಂಡಳು. ಆಕೆ ಮನೆಯಲ್ಲಿ ದೊರೆತ ಡೈರಿಯಲ್ಲಿ ಗುಜರಾತ್ ರಾಜ್ಯದ ವಿವಿಧ ವ್ಯಕ್ತಿಗಳ, ಸ್ಥಳಗಳ ವಿಳಾಸ, ಮೊಬೈಲ್ ಸಂಖ್ಯೆಗಳು ಇದ್ದವು.

ಮನೆಗೆ ಹೋದಾಗ ತಾಳಿ ತೆಗೆಸಿದರು!
ಕಲಬುರ್ಗಿ ತಾಲ್ಲೂಕು ಗೊಬ್ಬೂರವಾಡಿಯಲ್ಲಿ ವರ್ಷದ ಹಿಂದೆ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳ ತಂಡ ತಡೆದಿತ್ತು. ಖಚಿತ ಮಾಹಿತಿ ಆಧರಿಸಿ ಆ ಗ್ರಾಮಕ್ಕೆ ಈಚೆಗೆ ಭೇಟಿ ನೀಡಿದ ಅಧಿಕಾರಿಗಳನ್ನು ಕಂಡ ತಕ್ಷಣವೇ ಬಾಲಕಿಯ ಪೋಷಕರು ಆಕೆಯ ತಾಳಿ ತೆಗೆಸಿದರು!

ADVERTISEMENT

ಅದೇ ಗ್ರಾಮದ ಇನ್ನೊಂದು ಪ್ರಕರಣದಲ್ಲಿ ಬಾಲಕಿಗೆ ಮದುವೆ ಮಾಡಲಾಗಿದ್ದು, ಆಕೆ ಪತಿಯ ಮನೆಯಲ್ಲಿ ಇರುವುದು ಬೆಳಕಿಗೆ ಬಂದಿತು.
ತಪ್ಪದ ‘ಗುಜ್ಜರ್ ಕಿ’ ಶಾದಿ:  ಕಲಬುರ್ಗಿ ತಾಲ್ಲೂಕು ಅಂಕಲಗಾದಲ್ಲಿ ಒಂದೂವರೆ ವರ್ಷದ ಹಿಂದೆ ನಡೆಯುತ್ತಿದ್ದ ‘ಗುಜ್ಜರ್ ಕಿ ಶಾದಿ’ಯನ್ನು ಅಧಿಕಾರಿಗಳ ತಂಡ ತಡೆಗಟ್ಟಿತ್ತು. ಮುಚ್ಚಳಿಕೆ ಪತ್ರ ಬರೆದುಕೊಟ್ಟ ಪೋಷಕರು ಬಾಲಕಿಯನ್ನು ಮನೆಗೆ ಕರೆದೊಯ್ದಿದ್ದರು.

ಈಗ ಬೆಳಕಿಗೆ ಬಂದಿರುವ ಸಂಗತಿ ಎಂದರೆ ಆ ಬಾಲಕಿಗೆ ಗುಜ್ಜರ್ ಜತೆಯೇ ಮದುವೆ ಮಾಡಲಾಗಿದ್ದು, ಆಕೆ ಈಗ ಮುಂಬೈನಲ್ಲಿ ನೆಲೆಸಿದ್ದಾಳೆ. ಇಷ್ಟೇ ಅಲ್ಲದೆ ಆಕೆಗೆ ಹೆರಿಗೆಯೂ ಆಗಿದ್ದು, ತಾಯಿ ಬಾಣಂತನಕ್ಕೆ ತೆರಳಿದ್ದಾರೆ. ವಿಷಯ ಅರಿತ ಅಧಿಕಾರಿಗಳು ಸದ್ಯ
ಬಾಲಕಿಯ ತಂದೆಯನ್ನು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.