ದಾವಣಗೆರೆ: ಕಡಿಮೆ ವೇತನಕ್ಕೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗಳಲ್ಲಿ ದುಡಿಯುವ ತಮಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬ್ಯಾಂಕ್‌ನ ನೌಕರರ ಒಕ್ಕೂಟ ಮಾನವ ಹಕ್ಕು ಆಯೋಗದ ಮೊರೆ ಹೋಗಿದೆ.
‘ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಅಧಿಕಾರಿಗಳು ‘ಮೆಸೆಂಜರ್’ (ಸಿಪಾಯಿ)ಗಳನ್ನು ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಕೆಲಸ ತೆಗೆಸಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸುತ್ತಾರೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಎನ್.ಆಂಜನೇಯ.
ಬೆಳಿಗ್ಗೆ ಕಸಗುಡಿಸುವುದು, ಶೌಚಾಲಯ ಸ್ವಚ್ಛಗೊಳಿಸುವುದು, ಕಂಪ್ಯೂಟರ್ ಆಪರೇಟಿಂಗ್, ಅಧಿಕಾರಿಗಳು ಹೇಳಿದ ಕಡತಗಳನ್ನೂ ತಂದುಕೊಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಸುತ್ತಾರೆ ಎನ್ನುತ್ತಾರೆ ಅವರು.
ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ರಾಯಚೂರು, ಕಲಬುರ್ಗಿ, ಬೀದರ್, ಯಾದಗಿರಿ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ– ಹೀಗೆ ಒಟ್ಟು 11 ಜಿಲ್ಲೆಯಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ 645 ಶಾಖೆಗಳನ್ನು ಹೊಂದಿದೆ. 700ಕ್ಕೂ ಹೆಚ್ಚು ಜನ ಮೆಸೆಂಜರ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಅವರನ್ನು ಬ್ಯಾಂಕಿನ ಅಧ್ಯಕ್ಷ, ವ್ಯವಸ್ಥಾಪಕರು ‘ಕೂಲಿ’ ಗಳೆಂದು ಕರೆದು ಅವಮಾನಿಸುತ್ತಿದ್ದಾರೆ. ಸರಿಯಾಗಿ ವೇತನ ನೀಡುತ್ತಿಲ್ಲ. ಸಹಿ ಹಾಕಲು ಹಾಜರಿ ಪುಸ್ತಕ ನೀಡುವುದಿಲ್ಲ. ಈ ಬಗ್ಗೆ ನ್ಯಾಯ ಕೇಳಿದರೆ ಹೈಕೋರ್ಟ್‌ನಲ್ಲಿ ಹೋಗಿ ನ್ಯಾಯ ಕೇಳುವಂತೆ ಉತ್ತರಿಸುತ್ತಾರೆ ಎಂದು ಅವರು ಆರೋಪಿಸುತ್ತಾರೆ.
ವಾರದಲ್ಲಿ 7 ದಿನವೂ ಕೆಲಸ ಮಾಡಿಸಿಕೊಳ್ಳುತ್ತಾರೆ. ಪ್ರತಿ ದಿನ ₹ 250 ನಂತೆ ತಿಂಗಳಿಗೆ ₹ 7,500 ನೀಡಬೇಕು. ಆದನ್ನು ಕೊಡಲೂ ಸತಾಯಿಸುತ್ತಾರೆ. ವೇತನ ಪುಸ್ತಕದಲ್ಲಿ ಅಧಿಕಾರಿಗಳೇ ಸಹಿ ಹಾಕಿಸಿಕೊಂಡು ವಾರದಲ್ಲಿ ಕೇವಲ ಮೂರು ದಿನ ಕೆಲಸದ ಸಂಬಳ ಅಂದರೆ ₹3,000 ಮಾತ್ರ ನೀಡುತ್ತಿದ್ದಾರೆ ಎಂದು ಮಾನವ ಹಕ್ಕು ಆಯೋಗಕ್ಕೆ ಸಲ್ಲಿಸಿರುವ ದೂರಿನಲ್ಲಿ ಅವರು ವಿವರಿಸಿದ್ದಾರೆ.
ಪಿಎಫ್ ಹಣದಲ್ಲಿ ಅಕ್ರಮ–ಆರೋಪ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಈ ಬ್ಯಾಂಕ್‌ನಲ್ಲಿ 30 ವರ್ಷಗಳಿಂದ ಕೆಲಸ ಮಾಡುತ್ತಿರುವ 700ಕ್ಕೂ ಹೆಚ್ಚು ಮೆಸೆಂಜರ್ (ಸಿಪಾಯಿ)ಗಳ ಭವಿಷ್ಯ ನಿಧಿ (ಪಿಎಫ್) ಹಣ ₹ 20 ಕೋಟಿ ಆಗಿದೆ. ಅದನ್ನೆಲ್ಲ ಅಧಿಕಾರಿಗಳು ನುಂಗಿಹಾಕಿದ್ದಾರೆ ಎಂದು ಬ್ಯಾಂಕಿನ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಎಂ. ರಾಮರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.
ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಾಮಾನು ಹೊರುವ ಕೆಲಸ ಮಾಡುವವರನ್ನು ಕೇಂದ್ರ ಸರ್ಕಾರ ‘ಸಹಾಯಕ’ ಎಂದು ಕರೆದಿದೆ. ಆದರೆ, ಬ್ಯಾಂಕಿನಲ್ಲಿ ಮೆಸೆಂಜರ್‌ಗಳನ್ನು ‘ಕೂಲಿ’ಗಳೆಂದು ಕರೆದು ಅವಮಾನಿಸಲಾಗುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎನ್ನುತ್ತಾರೆ ಅವರು.
‘1970–80ರ ದಶಕದಲ್ಲಿ ಅಸ್ತಿತ್ವಕ್ಕೆ ಬಂದ ಪ್ರಗತಿ ಗ್ರಾಮೀಣ ಬ್ಯಾಂಕ್ ವಿವಿಧ ಬ್ಯಾಂಕುಗಳನ್ನು ಒಳಗೊಂಡು ‘ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್’ ಆಗಿ ಬದಲಾವಣೆಗೊಂಡಿದೆ. ನಮ್ಮ ಒಕ್ಕೂಟ 2012ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದ ಮೇಲೆ ಬ್ಯಾಂಕಿನಲ್ಲಿ ನಡೆಯುತ್ತಿರುವ ಅನೇಕ ಅವ್ಯವಹಾರ, ಭ್ರಷ್ಟಾಚಾರಗಳನ್ನು ಹೊರಗೆಳೆಯಲಾಗಿದೆ’ ಎಂದು ರಾಮರಾವ್ ತಿಳಿಸಿದರು.
* * *
ಮೆಸೆಂಜರ್‌ಗಳನ್ನು ‘ಸಹಾಯಕ’ ರೆಂದು ಘೋಷಿಸಿ, ಅವರ ಹುದ್ದೆ ಕಾಯಂಗೊಳಿಸಬೇಕು. ಅವರಿಗೆ ಕನಿಷ್ಠ ವೇತನ, ಸೌಲಭ್ಯ ನೀಡಬೇಕು.
-ಎನ್. ಆಂಜನೇಯ, ಅಧ್ಯಕ್ಷ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ
* * *
ಕೇಂದ್ರ ಸರ್ಕಾರದ ನಿರ್ದೇಶನಗಳನ್ನು ಬ್ಯಾಂಕ್ ಪಾಲಿಸಬೇಕು. ಮೆಸೆಂಜರ್‌ಗಳನ್ನು ಕಾಯಂಗೊಳಿಸುವ, ಹೊಸ ನೇಮಕಾತಿ ಅಧಿಕಾರ ನಮಗೆ ಇಲ್ಲ.
-ಪಿ.ವಿಠ್ಠಲರಾವ್, ಜಿ.ಎಂ, ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.