ADVERTISEMENT

ಮೈಸೂರಲ್ಲಿ 1800 ಹಾಸಿಗೆ ಆಸ್ಪತ್ರೆ

₨ 450 ಕೋಟಿ ಖರ್ಚು: ರಾಷ್ಟ್ರಪತಿಗಳಿಂದ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2013, 19:59 IST
Last Updated 23 ಸೆಪ್ಟೆಂಬರ್ 2013, 19:59 IST

ಮೈಸೂರು: ಒಂದೇ ಸೂರಿನಡಿ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಜೆಎಸ್‌ಎಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಸೋಮವಾರ ಇಲ್ಲಿ ಲೋಕಾರ್ಪಣೆ ಮಾಡಿದರು.

ಅಗ್ರಹಾರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ₨ 450 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಸಾಮಾನ್ಯ ಮತ್ತು ವಿಶೇಷ ವಾರ್ಡ್‌ಗಳು ಸೇರಿದಂತೆ ಒಟ್ಟು 1,800 ಹಾಸಿಗೆಗಳಿದ್ದು, ಅತ್ಯಾಧುನಿಕ ತರ್ತು ನಿಗಾ ಘಟಕವಿದೆ. 24 ಗಂಟೆ ಕಾರ್ಯನಿರ್ವಹಿಸುವ ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವಾ ಸೌಲಭ್ಯವಿದೆ. 55 ವಿವಿಧ ವೈದ್ಯಕೀಯ ಸೇವೆಗಳು, 37 ಸ್ಪೆಷಾಲಿಟಿ ಸೌಲಭ್ಯಗಳು ಆಸ್ಪತ್ರೆಯಲ್ಲಿ ಲಭ್ಯ ಇವೆ.

ಅತ್ಯಾಧುನಿಕ ಕ್ಯಾತ್‌ಲ್ಯಾಬ್‌, ಹೃದ್ರೋಗ ಸೇವಾ ಸೌಲಭ್ಯಗಳು, ರಕ್ತ ನಿಧಿ ಕೇಂದ್ರ, ಸುಟ್ಟಗಾಯ ಚಿಕಿತ್ಸಾ ವಿಭಾಗ, ಫಿಸಿಯೋಥೆರಪಿ, ಕೃತಕ ಅಂಗಜೋಡಣಾ, ನೇತ್ರ ನಿಧಿ ಕೇಂದ್ರಗಳಿವೆ. ಸಂಪೂರ್ಣ ಡಿಜಿಟಲ್‌ ಆಧಾರಿತ, ಜರ್ಮನ್‌ ನಿರ್ಮಿತ ತಂತ್ರಜ್ಞಾನ. ಎಂಐಆರ್‌ ತಂತ್ರಜ್ಞಾನದಿಂದ ಕೂಡಿದ ಸಿಟಿ ಸ್ಕ್ಯಾನರ್‌ಗಳು ಇಲ್ಲಿವೆ.

ಮೈಸೂರಿನ ಪಾರಂಪರಿಕ ವಾಸ್ತುಶೈಲಿಗೆ ಅನುಗುಣವಾಗಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. 12.5 ಎಕರೆ ವಿಸ್ತೀರ್ಣದಲ್ಲಿ ಮೈದಳೆದಿರುವ ಕಟ್ಟಡಕ್ಕೆ ಇಂಡೋ ಸಾರ್ಸೆನಿಕ್ ವಿನ್ಯಾಸ ಬಳಸಲಾಗಿದೆ. ಮಳೆನೀರು ಸಂಗ್ರಹ, ಸೌರಶಕ್ತಿ ಸೇರಿದಂತೆ ಪರಿಸರಸ್ನೇಹಿ ಕಟ್ಟಡವಾಗಿ ರೂಪಿಸಲಾಗಿದೆ. ಕಟ್ಟಡದ ಮೇಲಿನ 16 ಗೋಪುರಗಳ ತಳಭಾಗದಲ್ಲಿ 6 ಲಕ್ಷ ಲೀಟರ್‌ ನೀರು ಸಂಗ್ರಹಣ ಸಾಮರ್ಥ್ಯದ ಟ್ಯಾಂಕರ್‌ಗಳಿವೆ. ಆಸ್ಪತ್ರೆಯ ಎಲ್ಲ ವಿಭಾಗಗಳಿಗೆ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುತ್ತದೆ. ಆಸ್ಪತ್ರೆಯ ನಿರ್ಮಾಣಕ್ಕೆ 2008ರಲ್ಲಿ ಭೂಮಿಪೂಜೆ ಮಾಡಲಾಗಿತ್ತು.

ವಾಜಪೇಯಿ, ಯಶಸ್ವಿನಿ ಆರೋಗ್ಯ ಸೇವಾ ಯೋಜನೆ ವ್ಯಾಪ್ತಿಗೆ ಈ ಆಸ್ಪತ್ರೆ ಒಳಪಡಲಿದೆ.

ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಜಿಲ್ಲೆಗಳ ಸಾಮಾನ್ಯ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಆರೋಗ್ಯ ವಿಮೆ ಆರಂಭಿಸುವ ಯೋಜನೆ ರೂಪಿಸಿದೆ.

ಪರದೆ ಸರಿಸಿ ಉದ್ಘಾಟನೆ:ಮಧ್ಯಾಹ್ನ 3 ಗಂಟೆಗೆ ನಿಗದಿತ ಸಮಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಆಗಮಿಸಿದ ರಾಷ್ಟ್ರಪತಿಗೆ ಕಲಾತಂಡಗಳು ಸ್ವಾಗತ ಕೋರಿದವು.

ಪ್ರಣವ್‌ ಅವರು ಶಿವರಾತ್ರೀಶ್ವರ ಮಂತ್ರ ಮಹರ್ಷಿ, ಆದಿ ಜಗದ್ಗುರು ಶಿವರಾತ್ರೀಶ್ವರ ಭಗವತ್ಪಾದರು, ಡಾ.ಶಿವರಾತ್ರೀಶ್ವರ ರಾಜೇಂದ್ರ ಸ್ವಾಮೀಜಿ ಮೂರ್ತಿಗಳಿಗೆ ಪುಷ್ಪಾರ್ಚನೆ ಮಾಡಿದರು.

ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್‌ ಫರ್ನಾಂಡಿಸ್‌, ರಾಜ್ಯಪಾಲ ಡಾ.ಹಂಸರಾಜ ಭಾರ ದ್ವಾಜ್‌, ಸಿದ್ಧಗಂಗಾ ಸ್ವಾಮೀಜಿ, ಶಿವರಾತ್ರೀಶ್ವರ ಸ್ವಾಮೀಜಿ,  ಸಚಿವರಾದ ಶ್ರೀನಿವಾಸ­ಪ್ರಸಾದ್‌, ಯು.ಟಿ. ಖಾದರ್‌, ಡಾ.ಶರಣ್‌ ಪ್ರಕಾಶ್‌ ಪಾಟೀಲ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.