ADVERTISEMENT

ಮೈಸೂರಿನಿಂದಲೇ ನೈಸ್ ರಸ್ತೆ ಕಾಮಗಾರಿ: ಖೇಣಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 19:30 IST
Last Updated 15 ಅಕ್ಟೋಬರ್ 2012, 19:30 IST

ಮೈಸೂರು: ಡಿಸೆಂಬರ್ ಅಂತ್ಯದೊಳಗೆ ನೈಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳು ಇತ್ಯರ್ಥಗೊಳ್ಳಲಿದ್ದು, ಬಳಿಕ ಮೈಸೂರಿನಿಂದಲೇ ಕೆಲಸವನ್ನು  ಆರಂಭಿಸುತ್ತೇನೆ ಎಂದು ನೈಸ್ ಕಂಪೆನಿ ಪ್ರಧಾನ ನಿರ್ದೇಶಕ ಅಶೋಕ್ ಖೇಣಿ ಸೋಮವಾರ ಹೇಳಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಘ (ಎಂಸಿಸಿಐ) ದವರು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ನೈಸ್ ರಸ್ತೆ ನಿರ್ಮಾಣಕ್ಕೆ  ಹಲವಾರು ಅಡ್ಡಿಗಳು ಎದುರಾದವು. ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಒಟ್ಟು  566 ಪ್ರಕರಣಗಳು ದಾಖಲಾದವು. ಅವುಗಳಲ್ಲಿ 344 ಪ್ರಕರಣಗಳು ಮಾತ್ರ ಬಾಕಿ  ಇವೆ. ಇವುಗಳೆಲ್ಲವೂ ಡಿಸೆಂಬರ್ ಅಂತ್ಯಕ್ಕೆ ಇತ್ಯರ್ಥವಾಗುವ ನಂಬಿಕೆ ಇದೆ. ಒಂದು ವೇಳೆ ಎಲ್ಲ ಅಡೆತಡೆಗಳು ನಿವಾರಣೆಯಾದರೆ ಮೈಸೂರಿನಿಂದಲೇ ಕೆಲಸ  ಆರಂಭಿಸುತ್ತೇನೆ ಎಂದು ಭರವಸೆ ನೀಡಿದರು.

ನೈಸ್ ರಸ್ತೆ ನಿರ್ಮಾಣ ಕಾರ್ಯ ಇನ್ನೂ ಪೂರ್ಣಗೊಳ್ಳದೇ ಇರಲು ರಾಜಕಾರಣಿಗಳು ಮತ್ತು ಅಧಿಕಾರಶಾಹಿಯೇ ಕಾರಣ. ಇವರಿಗೆ ಸಮಾಜದ ಹಿತಕ್ಕಿಂತ ಸ್ವಹಿತವೇ ಮುಖ್ಯವಾಗಿದೆ. ಆದ್ದರಿಂದ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಒಂದಂಶವೂ ಕಾನೂನು ಉಲ್ಲಂಘನೆ ಮಾಡಿಲ್ಲ ಎಂದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದವರು ನೈಸ್ ರಸ್ತೆ ಸುತ್ತಮುತ್ತ ನೂರಾರು ಎಕರೆ ಭೂಮಿಯನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಆದರೂ ತಾವು ಬಡ ರೈತ ಎಂದು ದೇವೇಗೌಡರು ನಾಟಕವಾಗುತ್ತಿದ್ದಾರೆ ಎಂದು ಆರೋಪಿಸಿದರು.

ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆದ ಅಧ್ಯಕ್ಷ ಸುಧಾಕರ ಎಸ್.ಶೆಟ್ಟಿ ಮಾತನಾಡಿ, ನಮಗೆ ನಿಮ್ಮ ರಾಜಕೀಯ, ವಾದ-ವಿವಾದಗಳು ಬೇಡ. ನಿಮ್ಮ ಎಲ್ಲ  ತಾಪತ್ರಯಗಳನ್ನು ಶೀಘ್ರ ಪರಿಹರಿಸಿಕೊಂಡು ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.