ADVERTISEMENT

ಮೊಕದ್ದಮೆ ವಾಪಸ್‌: ಕೈಚೆಲ್ಲಿದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2016, 0:30 IST
Last Updated 11 ಆಗಸ್ಟ್ 2016, 0:30 IST
ಮೊಕದ್ದಮೆ ವಾಪಸ್‌: ಕೈಚೆಲ್ಲಿದ ರಾಜ್ಯ ಸರ್ಕಾರ
ಮೊಕದ್ದಮೆ ವಾಪಸ್‌: ಕೈಚೆಲ್ಲಿದ ರಾಜ್ಯ ಸರ್ಕಾರ   

ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿ ಮಧ್ಯಂತರ ಆದೇಶದ ವಿರುದ್ಧ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಹಾಗೂ ಅಮಾಯಕರ ಮೇಲೆ ಹೂಡಿದ್ದ ಮೊಕದ್ದಮೆ ವಾಪಸ್‌ ಪಡೆಯುವುದಾಗಿ ಘೋಷಿಸಿದ್ದ  ಸರ್ಕಾರ ಕಾನೂನಿನ ನೆಪವೊಡ್ಡಿ ಈಗ ಹಿಂದೆ ಸರಿದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೊಕದ್ದಮೆ ವಾಪಸ್‌ ಪಡೆಯುವ ಬಗ್ಗೆ ಎರಡು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಕಾನೂನಿನ ವ್ಯಾಪ್ತಿ ಮೀರಿ ಮೊಕದ್ದಮೆಗಳನ್ನು ವಾಪಸ್‌ ಪಡೆಯಲು ಸಾಧ್ಯವಿಲ್ಲ. ಆದರೆ, ಬಂಧಿತರು ಜಾಮೀನು ಪಡೆಯಲು ಅವಕಾಶ ಕಲ್ಪಿಸಬೇಕೆಂದು ಸಭೆ ತೀರ್ಮಾನಿಸಿತು.

‘ಮಹಾದಾಯಿ ಪ್ರತಿಭಟನೆ  ಸಂಬಂಧ ಒಟ್ಟು 25 ಎಫ್‌ಐಆರ್‌ ದಾಖಲಿಸಿ, 187 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ. ಇದರಲ್ಲಿ 7 ಜಾಮೀನುರಹಿತ ಮೊಕದ್ದಮೆಗಳು. ಸಿಆರ್‌ಪಿಸಿ 321ನೇ  ಸೆಕ್ಷನ್‌ ಪ್ರಕಾರ, ಇಂತಹ ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸದೇ ಯಾವುದೇ ಪ್ರಕ್ರಿಯೆ ಮುಂದುವರಿಸುವಂತಿಲ್ಲ’  ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಬಂಧಿತರು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಸರ್ಕಾರದಿಂದ ಆಕ್ಷೇಪಣೆ ಸಲ್ಲಿಸದಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಈ ಸಂಬಂಧ ಮೇಲಸ್ತುವಾರಿ ಹೊಣೆಯನ್ನು ನನಗೆ ಹಾಗೂ ಸಚಿವ ಜಯಚಂದ್ರ ಅವರಿಗೆ ವಹಿಸಲಾಗಿದೆ’ ಎಂದರು.

‘ಗಲಭೆ, ಆಸ್ತಿಪಾಸ್ತಿಗೆ ಹಾನಿ ಎಸಗಿದ ಪ್ರಕರಣಗಳಲ್ಲಿ ಒಳಹಾದಿ ಮೂಲಕ ಮೊಕದ್ದಮೆ ವಾಪಸ್‌ ಪಡೆಯಲು ಕಾನೂನಿನಲ್ಲಿ ಅವಕಾಶವಿಲ್ಲ. ಮೊಕದ್ದಮೆ ಸಂಬಂಧ ತನಿಖೆ ನಡೆದು, ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಬೇಕು. ಆರೋಪಿಗಳು ನ್ಯಾಯಾಂಗ ಬಂಧನದಲ್ಲಿರುವುದರಿಂದ ಕೋರ್ಟ್‌ನಲ್ಲಿ ವಿಚಾರಣೆ ನಡೆಯಬೇಕು. ಎಲ್ಲ ಪ್ರಕ್ರಿಯೆ ಮುಗಿದ ಬಳಿಕವೇ ಮೊಕದ್ದಮೆ ವಾಪಸ್‌ ಪಡೆಯಲು ಸಾಧ್ಯ’ ಎಂದರು.

‘ಅಮಾಯಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ’ ಎಂದು ಪರಮೇಶ್ವರ್‌ ಪ್ರತಿಕ್ರಿಯಿಸಿದರು.
‘ಪೊಲೀಸರ ದೌರ್ಜನ್ಯ ಕುರಿತು ತನಿಖೆ ನಡೆಸುತ್ತಿರುವ ಎಡಿಜಿಪಿ ಕಮಲಪಂತ್‌ ವರದಿ ಸಲ್ಲಿಸಲು ಒಂದು ತಿಂಗಳು ಸಮಯ ಕೇಳಿದ್ದಾರೆ ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಕಂಡುಬಂದರೆ  ಶಿಕ್ಷೆಗೆ ಗುರಿಪಡಿಸುತ್ತೇವೆ’ ಎಂದೂ ಅವರು ಹೇಳಿದರು.

ರೈತರ ಮೇಲೆ ಯಾವ ಸೆಕ್ಷನ್‌ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ ಎಂಬ ಮಾಹಿತಿ ನೀಡುವಂತೆ  ರಾಘವೇಂದ್ರ ಔರಾದ್‌ಕರ ಅವರಿಗೆ ಸೂಚಿಸಲಾಗಿತ್ತು. ಅವರು ಸಲ್ಲಿಸಿದ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಿದರು.

ಕೃಷಿಗೆ ನೀರು ಖೋತಾ
ಬೆಂಗಳೂರು: ರಾಜ್ಯದ ಕೆಲವು ಭಾಗಗಳಲ್ಲಿ ಮತ್ತೊಮ್ಮೆ ಭೀಕರ ಬರಗಾಲ ಕಾಣಿಸಿಕೊಳ್ಳಬಹುದೆಂಬ ಮುನ್ಸೂಚನೆ ಇರುವುದರಿಂದ ಕಾವೇರಿ ಮತ್ತು ತುಂಗಭದ್ರಾ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು  ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸರ್ಕಾರ ತೀರ್ಮಾನಿಸಿದೆ.

ಭತ್ತ, ಕಬ್ಬು ಸೇರಿದಂತೆ ಯಾವುದೇ ಬೆಳೆಗಳಿಗೂ ನೀರು ಬಿಡುಗಡೆ ಮಾಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟದ ಸಭೆ ತೀರ್ಮಾನಿಸಿದೆ.

ಎರಡೂ ನದಿಪಾತ್ರದ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ ಉದ್ದೇಶಕ್ಕೆ ಬಿಟ್ಟು  ಕೃಷಿ ಉದ್ದೇಶಕ್ಕೆ ಬಳಸಬಾರದು ಎಂದು ಸಂಬಂಧಿತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲು ಸಂಪುಟ ಸಭೆ ನಿರ್ಧರಿಸಿದೆ.

ಕೃಷ್ಣರಾಜಸಾಗರ, ಹೇಮಾವತಿ, ಕಬಿನಿ, ಹಾರಂಗಿ, ತುಂಗಭದ್ರಾ, ಭದ್ರಾ ಮತ್ತು ತುಂಗಾ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಅತ್ಯಂತ ಕಡಿಮೆ ಇದೆ. ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ನೀರಿದೆ. ಈ ಕಾರಣದಿಂದ ತುಂಗಭದ್ರಾ, ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತದ ಬೆಳೆಗೆ ನೀರು ಬಿಡದೇ ಇರಲು ತೀರ್ಮಾನಿಸಲಾಗಿದೆ  ಎಂದು  ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT