ADVERTISEMENT

ಮೊಯಿಲಿ ಪ್ರಮಾಣ ಪತ್ರ ಬೇಡ: ಸಂತೋಷ್ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 13:30 IST
Last Updated 20 ಮಾರ್ಚ್ 2011, 13:30 IST

ಬೆಂಗಳೂರು (ಪಿಟಿಐ): ’ ನಾನು ಮಾಡಿದ ಕೆಲಸಕ್ಕೆ ರಾಜ್ಯದ ಜನತೆಯ ಪ್ರಮಾಣ ಪತ್ರವೇ ಸಾಕು.  ಕೇಂದ್ರದ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ಅವರ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ’ ಎಂದು ಕರ್ನಾಟಕ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಅವರು ಭಾನುವಾರ ಖಾರವಾದ ಪ್ರತಿಕ್ರಿಯೆ ನೀಡಿದ್ದಾರೆ. 

ಕಾಂಗ್ರೆಸ್ ನಾಯಕರಾಗಿರುವ ಸಚಿವ ಮೊಯಿಲಿ ಅವರು ಶನಿವಾರ, ~ಕರ್ನಾಟಕ ಲೋಕಾಯುಕ್ತರು ಭ್ರಷ್ಟಾಚಾರದ ವಿರುದ್ಧ ತೋರಿಕೆಯ ಕ್ರಮ ಕೈಗೊಳ್ಳದೇ, ಇನ್ನೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬಹುದಿತ್ತು~ ಎಂದು ಅವರ ಕಾರ್ಯವೈಖರಿ ಕುರಿತು ಮಾಡಿದ ಟೀಕೆಗೆ ಲೋಕಾಯುಕ್ತ ಸಂತೋಷ್ ಹೆಗ್ಡೆ  ಅವರು ಹೀಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಲೋಕಾಯುಕ್ತರು, ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ~ಪತ್ರಿಕಾ ಹೇಳಿಕೆ ನೀಡುವುದನ್ನು ಬಿಟ್ಟು ಲೋಕಾಯುಕ್ತರು ಹೆಚ್ಚೇನು ಮಾಡಿದ್ದಾರೆ?~ ಎಂಬ ವೀರಪ್ಪ ಮೊಯಿಲಿ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು

ADVERTISEMENT

~ಯಾವ ಸನ್ನಿವೇಶದಲ್ಲಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ, ಲೋಕಾಯುಕ್ತ  ಕೈಗೊಂಡ ಕ್ರಮಗಳ ಕುರಿತ ಮಾಹಿತಿಯನ್ನು ಸಚಿವರಿಗೆ ನಾಳೆ ಕಳುಹಿಸಲಾಗುವುದು~ ಎಂದು ಅವರು ಹೇಳಿದರು.

ಹಿಂದೆ 1993ರಲ್ಲಿ ಕೇಂದ್ರದಲ್ಲಿ ಪಿ. ವಿ. ನರಸಿಂಹರಾವ್ ಸರ್ಕಾರವಿದ್ದಾಗ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಮೊಯಿಲಿ ಅವರು 3.5 ಕೋಟಿ ಲಂಚದ ಜೆಎಂಎಂ (ಜಾರ್ಕಾಂಡ್ ಮುಕ್ತಿ ಮೊರ್ಚ್) ಹಗರಣದಲ್ಲಿ ಸಿಲುಕಿಕೊಂಡಿದ್ದರು. ಅವರಿಂದ ಒಂದು ರೂಪಾಯಿ ಶುಲ್ಕ  ಪಡೆಯದೇ ದೆಹಲಿ ನ್ಯಾಯಾಲಯದಲ್ಲಿ  ಅವರ ಪರ ವಾದಿಸಿ  ಆರೋಪಮುಕ್ತಗೊಳಿಸಿದ್ದನ್ನು ಅವರು ಮರೆತಿರಬಹುದು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.