ADVERTISEMENT

ಮೌಢ್ಯ ಪ್ರತಿಬಂಧಕ ಮಸೂದೆ ಜಾರಿಯಾಗಲಿ

ರಾಜ್ಯ ಸರ್ಕಾರಕ್ಕೆ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2013, 19:30 IST
Last Updated 15 ಡಿಸೆಂಬರ್ 2013, 19:30 IST

ದಾವಣಗೆರೆ: ಮುಗ್ಧ ಜನರನ್ನು ಶೋಷಿ­ಸುತ್ತಿರುವ ಅಮಾನವೀಯ ಆಚರಣೆ­ಗಳನ್ನು ನಿಷೇಧಿಸುವ ‘ಮೂಢನಂಬಿಕೆ ಪ್ರತಿಬಂಧಕ ಮಸೂದೆ’ ಜಾರಿಗೆ ತರಬೇಕು ಎಂದು ನಿಡುಮಾಮಿಡಿ ಮಠ ಮತ್ತು ಮಾನವ ಧರ್ಮ ಪೀಠದ ಅಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾ­ಸಭಾ ಜಿಲ್ಲಾ ಘಟಕ ಮತ್ತು ಮಾನ­ವ ಹಕ್ಕುಗಳ ವೇದಿಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿ­ಕೊಂಡಿದ್ದ ‘ನಂಬಿಕೆ­–ಮೂಢನಂಬಿಕೆ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಉರುಳು ಸೇವೆ ಎಂಬುದು ದೇವರ ಮೇಲಿನ ಸಾಮಾನ್ಯ ನಂಬಿಕೆ. ಆದರೆ, ಎಂಜಲೆಲೆಯ ಮೇಲೆ ಉರುಳುವುದು ಮೂಢನಂಬಿಕೆ. ಒಂದು ಸಮು­ದಾಯ­ದ ಜನರು ತಿಂದುಬಿಟ್ಟ ಎಂಜಲೆಲೆಯ ಮೇಲೆ ಬಡ ಸಮುದಾಯದ ಜನರು ಉರುಳುವುದು ಶೋಷಣೆಯಲ್ಲವೇ ಎಂದು ಪ್ರಶ್ನಿಸಿದ ಅವರು, ಪಂಚ­ಸೂತ್ರಗಳನ್ನು ಬೋಧಿಸುವಾಗ ಎಂಜಲು ಮೈಲಿಗೆ ಎಂದು ಹೇಳುವ ಪುರೋಹಿತಶಾಹಿ ವರ್ಗದವರು ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಮಡೆ ಮಡೆಸ್ನಾನದ ವಿಷಯಕ್ಕೆ ಬಂದಾಗ ಎಂಜಲು ಪವಿತ್ರ ಎಂದು ಹೇಳುತ್ತಾರೆ. ಈ ರೀತಿ ಗೊಂದಲವನ್ನು ಸೃಷ್ಟಿಸಿ ಜನರನ್ನು ಶೋಷಣೆ ಮಾಡುತ್ತಿದ್ದಾರೆ. ಇಂಥ ಆಚರಣೆಯನ್ನು ಧಾರ್ಮಿಕ ನಂಬಿಕೆಯ ನೆಲೆಯಲ್ಲಿ ಸಮರ್ಥಿಸುವ ಮನಸ್ಥಿತಿ­ಗಳು ಹೊಂದಿರುವ ಉದ್ದೇಶಗಳ ಬಗ್ಗೆ  ಜನರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದರು.

ಆಯುರ್ವೇದ ತಜ್ಞೆಯೊಬ್ಬರು ರೋಗಿ­ಯೊಬ್ಬರಿಗೆ ಚರ್ಮರೋಗ ನಿವಾ­ರಣೆಗಾಗಿ ಮಡೆ ಮಡೆಸ್ನಾನ ಆಚರಿಸುವಂತೆ ಸಲಹೆ ಕೊಟ್ಟಿ­ರು­ವುದಾಗಿ ಮಾಧ್ಯಮ­ದಲ್ಲಿ ಪ್ರಸಾರ­ವಾಗಿದೆ. ಚಿಕಿತ್ಸೆಗಾಗಿ ಬರುವ ಮುಗ್ಧ ಜನರ­ನ್ನು ಅಮಾನವೀಯ ಆಚರಣೆಗೆ ಪ್ರಚೋದಿ­ಸು­ವ ಇಂಥ ತಜ್ಞವೈದ್ಯರ ಪರವಾನಗಿಯನ್ನು ಕೂಡಲೇ ಸರ್ಕಾರ ರದ್ದುಗೊಳಿಸಬೇಕು ಎಂದರು.

ಉತ್ತರ ಕರ್ನಾಟಕದಲ್ಲಿನ ಕೆಲವು ಮಠಗಳಲ್ಲಿ ತೀರ್ಥ, ಪ್ರಸಾದದ ರೂಪದಲ್ಲಿ ಭಕ್ತರಿಗೆ ಸಾರಾಯಿ ಕುಡಿಸುವ ಕೆಲಸ ನಡೆದಿದೆ. ಧರ್ಮಗುರು ಕುಡುಕ­ನಾಗಿದ್ದರೆ ಭಕ್ತರೆಲ್ಲ ಕುಡುಕರಾಗಬೇಕೇ ಎಂದು ಪ್ರಶ್ನಿಸಿದರು.

ಮಟ್ಕಾದಂಧೆ ನಡೆಸಿ ಕೋಟಿಗಟ್ಟಲೆ ಕಮಿಷನ್ ಪಡೆಯುತ್ತಿರುವ ಹಲವು ಮಠಗಳೂ ಸಹ ಇವೆ! ದರ್ಗಾಗಳಲ್ಲಿ ಪ್ರಾರ್ಥನೆಯ ಹೆಸರಲ್ಲಿ ಬಡವರು ಮಕ್ಕಳನ್ನು ಕಳೆದುಕೊಳ್ಳುತ್ತಿದ್ದಾರೆ. ಇಂಥ ಅನಾಹುತ ನಡೆಯುತ್ತಿರುವ ದರ್ಗಾ, ಚರ್ಚ್, ಮಸೀದಿಗಳಲ್ಲಿ ಸರ್ಕಾರ ಮನೋವೈದ್ಯರನ್ನು ನೇಮಿಸಬೇಕು ಎಂದು ನಿಡುಮಾಮಿಡಿ ಸ್ವಾಮೀಜಿ ಸಲಹೆ ನೀಡಿದರು.

ಪ್ರಜ್ಞೆಗೆ ಎಟುಕಬೇಕಾದ್ದು ಎಟುಕದೇ ಹೋದಾಗ ಮನುಷ್ಯ ಮೌಢ್ಯಕ್ಕೆ ಬಲಿಯಾಗುತ್ತಾನೆ. ಮಾಧ್ಯಮ­ಗಳಲ್ಲಿ (ಟಿವಿ) ನಕಲಿ ವಾಸ್ತುತಜ್ಞರು, ಜ್ಯೋತಿಷಿಗಳು ಮಾರುಕಟ್ಟೆಯನ್ನು ಸೃಷ್ಟಿಸಿ­ಕೊಂಡಿ­ದ್ದಾರೆ. ಇಂಥವ­ರಿಂದ ಸಮಾಜ ರೋಗಗ್ರಸ್ಥವಾಗುತ್ತಿದೆ. ನೋವು–ಸಂಕಷ್ಟ­ಗಳನ್ನೇ ಭಕ್ತಿ, ಸಂಪ್ರದಾಯ–ನಂಬಿಕೆಗಳ ಹೆಸರ­ಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಇದನ್ನು ಪ್ರಶ್ನಿಸಿದ ನನ್ನನ್ನು ಖಳನಾಯಕನನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ವಿಷಾದಿಸಿದರು.

‘ಭಾವಕೋಶ’ ಮತ್ತು ‘ಬುದ್ಧಿ­ಕೋಶ’ ಎರಡರ ಸಮಾನ ಸಮೀಕರಣದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಆದರೆ, ಪರಿಸ್ಥಿತಿಗೆ ಅನುಗುಣವಾಗಿ ಯಾವುದಕ್ಕೆ ಹೆಚ್ಚು ಮನ್ನಣೆ ನೀಡಬೇಕು ಎಂಬುದನ್ನು ಗ್ರಹಿಸಿ ನಡೆಯಬೇಕಾ­ಗುತ್ತದೆ. ಯಾವುದೇ ಧರ್ಮ ಮತ್ತು ಆಚರಣೆಯಲ್ಲಿ ನಾಗರಿಕ ಸಮಾಜ ವಿಕಾಸವಾಗುವಂತಹ ಮತ್ತು ಬೇರೆಯವರಿಗೆ ಹಾನಿಕಾರಕವಾಗದ ನಂಬಿಕೆಗಳಿದ್ದರೆ ಅದನ್ನು ಸ್ವೀಕರಿಸೋಣ. ಇಲ್ಲದಿದ್ದರೆ ಅಂಥ ಆಚರಣೆಗಳನ್ನು ಮಸೂದೆ ಜಾರಿಗೆ ತರುವ ಮೂಲಕ ನಿಷೇಧಿಸುವುದೇ ಉತ್ತಮ ಎಂದರು.

ಕಾನೂನು ಚಿಂತಕ ಪ್ರೊ.­ಎಸ್.­ಎಚ್.ಪಟೇಲ್ ಪ್ರಾಸ್ತಾವಿಕ ಮಾತ­ನಾಡಿದರು. ಚಿಂತಕರಾದ ಡಾ.ಕೆ.­ಮರುಳಸಿದ್ದಪ್ಪ,  ಪ್ರೊ.ಬಿ.ವಿ.­ವೀರಭದ್ರಪ್ಪ, ಎಲ್.ಎಚ್. ಅರುಣ್‌­ಕುಮಾರ್‌, ಅಥಣಿ ಎಸ್. ವೀರಣ್ಣ, ಎಂ.ಶಿವಕುಮಾರ್, ಅಣಬೇರು ರಾಜಣ್ಣ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.