ADVERTISEMENT

ಯುವ ಧ್ವನಿ ಅಭಿಯಾನಕ್ಕೆ ಇಂದು ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2012, 19:30 IST
Last Updated 15 ಆಗಸ್ಟ್ 2012, 19:30 IST

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಮುಂದುವರಿಯಬೇಕೆ ಬೇಡವೇ ಎಂಬ ಪ್ರಶ್ನೆಗಳ ಮೂಲಕ ಜನಾಭಿಪ್ರಾಯ ಸಂಗ್ರಹಿಸಲು ರಾಜ್ಯ ಯುವ ಕಾಂಗ್ರೆಸ್, `ಯುವ ಧ್ವನಿ~ ಅಭಿಯಾನವನ್ನು ಹಮ್ಮಿಕೊಂಡಿದೆ. ಇದೇ ಗುರುವಾರದಿಂದ (ಆ. 16) ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್, `ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಜನಾಭಿಪ್ರಾಯ ಸಂಗ್ರಹ ನಡೆಯಲಿದೆ.

ಮಿಸ್ ಕಾಲ್, ಎಸ್‌ಎಂಎಸ್, ಇ-ಮೇಲ್ ಮತ್ತು ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಲ್ಲಿ ನೇರ ಮತದಾನದ ಮೂಲಕ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇರುವ ಬಿಜೆಪಿ, ರಾಜ್ಯಕ್ಕೆ ನೀಡಿರುವ ಕೊಡುಗೆ ಮತ್ತು ಈ ಅವಧಿಯಲ್ಲಿ ಆಗಿರುವ ಲೋಪಗಳನ್ನು ಪರಿಗಣಿಸಿ ಅಭಿಪ್ರಾಯ ವ್ಯಕ್ತಪಡಿಸುವಂತೆ ಜನತೆಗೆ ಮನವಿ ಮಾಡಲಾಗುವುದು~ ಎಂದರು.

`ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಭ್ರಷ್ಟಾಚಾರ, ದುರಾಡಳಿತಕ್ಕೆ ಸಂಬಂಧಿಸಿದ ಭಿತ್ತಿಪತ್ರಗಳ ಮೂಲಕ ರಾಜ್ಯದಾದ್ಯಂತ ಜನಜಾಗೃತಿ ಮೂಡಿಸಲಾಗುವುದು. ಅಭಿಯಾನಕ್ಕಾಗಿಯೇ `ಯುವಧ್ವನಿ.ಕಾಮ್~ ಎಂಬ ಅಂತರ್ಜಾಲ ತಾಣ  ಸಜ್ಜುಗೊಳಿಸಲಾಗಿದೆ. ಬಿಜೆಪಿ ನಾಯಕರ ವಿರುದ್ಧದ ವಿವಿಧ ಆರೋಪಗಳ ಪಟ್ಟಿಯನ್ನು ಈ ತಾಣದಲ್ಲಿ ಪ್ರಕಟಿಸಲಾಗುವುದು~ ಎಂದರು.

ಮಂಗಳೂರಿನಲ್ಲಿ ಇತ್ತೀಚೆಗೆ ಯುವಕ-ಯುವತಿಯರ ಮೇಲೆ ನಡೆದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಬೇಜವಾಬ್ದಾರಿ ನಡವಳಿಕೆ ಪ್ರದರ್ಶಿಸುತ್ತಿದೆ. ಪೊಲೀಸರು, ಅದು ಜನ್ಮದಿನಾಚರಣೆ ಪಾರ್ಟಿ ಎನ್ನುತ್ತಿದ್ದಾರೆ.

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ, ದಾಂದಲೆ ನಡೆಸಿದ್ದಾರೆ. ರಾಜ್ಯ ಮಹಿಳಾ ಆಯೋಗ ಅಲ್ಲಿ ಮಾದಕ ವಸ್ತುಗಳ ಬಳಕೆ ಆಗಿದೆ ಎನ್ನುತ್ತಿದೆ. ಸರ್ಕಾರ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ ಎಂದು ದೂರಿದರು.

`ಉತ್ತಮ ಆಡಳಿತ, ಭ್ರಷ್ಟಾಚಾರ ನಿಯಂತ್ರಣ ಮತ್ತು ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ಯುವ ಕಾಂಗ್ರೆಸ್‌ನ ನಿಲುವು. ಈ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಯುವ ಜನರನ್ನು ಸಜ್ಜುಗೊಳಿಸಲು ಯುವ ಧ್ವನಿ ಅಭಿಯಾನ ಆಯೋಜಿಸಲಾಗಿದೆ.
 
ಶುದ್ಧ ಮತ್ತು ಸಚ್ಚಾರಿತ್ರ್ಯದ ರಾಜಕಾರಣ ಈ ಅಭಿಯಾನದ ಗುರಿ. ಮುಂದೆ ಮತ್ತಷ್ಟು ವಿಷಯಗಳನ್ನು ಆಧರಿಸಿ ಅಭಿಯಾನ ಮುಂದುವರಿಸುತ್ತೇವೆ~ ಎಂದು ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರಿಯಾಂಕ ಖರ್ಗೆ ಹೇಳಿದರು.

ಅಭಿಯಾನ ಹೇಗೆ?
ಬಿಜೆಪಿ ಸರ್ಕಾರ ಮುಂದುವರಿಯಬೇಕೆ? ಬೇಡವೆ? ಎಂಬುದು ಪ್ರಶ್ನೆ.
www.yuvadhwani.com  ಮೂಲಕ ಆನ್‌ಲೈನ್ ಮತದಾನ
56767 ಸಂಖ್ಯೆಗೆ `ಹೌದು~ ಅಥವಾ `ಇಲ್ಲ~ ಎಂಬ ಎಸ್‌ಎಂಎಸ್ ಕಳುಹಿಸಬಹುದು.

`ಬೇಡ~ ಎನ್ನುವವರು ದೂರವಾಣಿಸಂಖ್ಯೆ 080-67006531ಗೆ ಮಿಸ್ ಕಾಲ್ ನೀಡಬಹುದು.
ಯುವ ಕಾಂಗ್ರೆಸ್ ಸ್ಥಾಪಿಸುವ ಮತಗಟ್ಟೆಗಳಿಗೆ ತೆರಳಿ ನೇರ ಮತದಾನ ಮಾಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.