ಶ್ರೀರಂಗಪಟ್ಟಣ: ಒಂದೂವರೆ ತಿಂಗಳ ಹಿಂದೆ ಇವರ ಹೆಸರು ಅಲೆಕ್ಸಾಂಡರ್. ಈಗ ವೆಂಕಟೇಶ ಶರ್ಮಾ ಎಂದು ತಮ್ಮ ಹೆಸರು ಬದಲಿಸಿಕೊಂಡಿದ್ದಾರೆ.
ರಷ್ಯಾ ದೇಶದ ಅಲೆಕ್ಸಾಂಡರ್ ಹಿಂದೂ ಧರ್ಮದ ಬಗ್ಗೆ ಒಲವು ಬೆಳೆಸಿಕೊಂಡ ನಂತರ ತಮ್ಮ ಹೆಸರು, ಆಚಾರ, ವಿಚಾರಗಳನ್ನು ಬದಲಿಸಿಕೊಂಡಿದ್ದಾರೆ. 40 ದಿನಗಳಿಂದ ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ಮನೆಯಲ್ಲಿ ತಮ್ಮ ಗೆಳತಿ ಮರಿಯಾ ಜತೆ ಅಲೆಗ್ಸಾಂಡರ್ ನೆಲೆಸಿದ್ದಾರೆ.
ವೇದ ಹಾಗೂ ಸಂಸ್ಕೃತ ಅಧ್ಯಯನ ಮಾಡುತ್ತಿದ್ದಾರೆ. ಸಂಸ್ಕೃತ ಓದುವುದನ್ನು ಸ್ವಲ್ಪ ಮಟ್ಟಿಗೆ ಈಗಾಗಲೇ ಕಲಿತಿದ್ದಾರೆ. ಅಲ್ಲದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು ಅಭ್ಯಾಸ ಮಾಡುತ್ತಿದ್ದಾರೆ. ಪಟ್ಟಣದ ವೈದಿಕರ ತಂಡ ವೆಂಕಟೇಶ ಶರ್ಮಾ ಅವರಿಗೆ ಉಪನಯನ ಕರ್ಮ ಕೂಡ ನೆರವೇರಿಸಿದೆ. ಅಂದಿನಿಂದ ಜನಿವಾರ, ಪಂಚೆಯನ್ನೂ ಇವರು ಧರಿಸುತ್ತಿದ್ದಾರೆ. ಬುಧವಾರ ಕಾವೇರಿ ನದಿ ದಂಡೆಯಲ್ಲಿ ರಘುರಾಂ ಭಟ್ ನೇತೃತ್ವದ ತಂಡ ನಡೆಸಿದ ನವಗ್ರಹ ಹೋಮದಲ್ಲಿ ಅಲೆಕ್ಸಾಂಡರ್ ಮತ್ತು ಮರಿಯಾ ಪಾಲ್ಗೊಂಡಿದ್ದರು.
ರಷ್ಯಾದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಲೆಕ್ಸಾಂಡರ್ ಕೆಲ ವರ್ಷಗಳ ಹಿಂದೆ ದೆಹಲಿಯ ಮಹರ್ಷಿ ಮಹಾಯೋಗಿ ಅವರ ಸಂಪರ್ಕಕ್ಕೆ ಬಂದ ನಂತರ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಹಾಲೆಂಡ್ ಮೂಲದ ಮಹರ್ಷಿ ಮಹಾಯೋಗಿಗಳು ವೇದ ಮತ್ತು ಸಂಸ್ಕೃತ ಅಧ್ಯಯನ ಮಾಡುವಂತೆ ಅಲೆಕ್ಸಾಂಡರ್‌ಗೆ ಸಲಹೆ ನೀಡಿದ್ದರು.
ವೇದಾಧ್ಯಯನಕ್ಕೆ ಶ್ರೀರಂಗಪಟ್ಟಣ ಸೂಕ್ತ ಸ್ಥಳವಾಗಿದ್ದು, ಅದನ್ನೇ ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದರು. ಹಾಗಾಗಿ ಕಳೆದ ಮೂರು ವರ್ಷಗಳಲ್ಲಿ ನಾಲ್ಕು ಬಾರಿ ಇಲ್ಲಿಗೆ ಬಂದಿದ್ದ ಅಲೆಕ್ಸಾಂಡರ್ ಕೆಲವು ದಿನಗಳಿಂದ ಇಲ್ಲಿಯೇ ಉಳಿದುಕೊಂಡಿದ್ದಾರೆ.
ಮಂಗಳವಾರ ಮತ್ತು ಶನಿವಾರ ಅರ್ಧ ದಿನ ಉಪವಾಸ ಕೈಗೊಂಡು ಪೂಜೆ ನಡೆಸುತ್ತಾರೆ. ಹಿಂದೂ ಸಂಪ್ರದಾಯದಂತೆ ತಮ್ಮ ಗೆಳತಿಯನ್ನು ವಿವಾಹ ಆಗಲಿದ್ದಾರೆ~ ಎಂದು ವಿಜಯಸಾರಥಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ. ಕಾವೇರಿ ನದಿ ತೀರದಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಬುಧವಾರ ಪಾಲ್ಗೊಂಡಿದ್ದ ವೆಂಕಟೇಶ ಶರ್ಮಾ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಲು ನಿರಾಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.