ADVERTISEMENT

ರಾಜ್ಯಕ್ಕೆ ಐಐಟಿ ಸದ್ಯಕ್ಕಿಲ್ಲ: ಪಲ್ಲಂರಾಜು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:53 IST
Last Updated 21 ಸೆಪ್ಟೆಂಬರ್ 2013, 19:53 IST

ಬೆಂಗಳೂರು: ‘ಕರ್ನಾಟಕದಲ್ಲಿ ಸದ್ಯ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು (ಐಐಟಿ) ಸ್ಥಾಪಿಸುವ ಭರವಸೆ ನೀಡಲು ಸಾಧ್ಯವಿಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಎಂ.ಪಲ್ಲಂ ರಾಜು ಹೇಳಿದರು.

ರಾಷ್ಟ್ರೀಯ ಸಂಯೋಜನಾ ಮಂಡಳಿ ಯು (ಎನ್‌ಬಿಎ) ನಾಗರಬಾವಿಯಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲ ಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಎನ್‌ಬಿಎ ದಕ್ಷಿಣ ಪ್ರಾದೇಶಿಕ ಕೇಂದ್ರ’ದ ಉದ್ಘಾಟನಾ ಕಾರ್ಯಕ್ರಮದ ನಂತರ ಸುದ್ದಿಗಾರ ರೊಂದಿಗೆ ಮಾತನಾಡಿದರು.

‘ಹನ್ನೊಂದನೇ ಪಂಚವಾರ್ಷಿಕ ಯೋಜನೆಯಲ್ಲಿಯೇ ದೇಶದಲ್ಲಿ ಎಷ್ಟು ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನು ಸ್ಥಾಪಿಸ ಬೇಕೆಂದು ಘೋಷಣೆಯಾಗಿದೆ. ಇದರಿಂದ ಕರ್ನಾಟಕದಲ್ಲಿ ಸದ್ಯಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುವ ಭರವಸೆ ನೀಡಲು ಸಾಧ್ಯವಿಲ್ಲ. ಕೇರಳವೂ ಇದೇ ರೀತಿಯ ಬೇಡಿಕೆಯನ್ನು ಸಲ್ಲಿಸಿದೆ’ ಎಂದರು.

‘ರಾಜ್ಯದಲ್ಲಿಯೂ ಭಾರತೀಯ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂಬ ರಾಜ್ಯ ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಅವರ ಮನವಿಗೆ ಅವರು ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಲ್ಲಂರಾಜು, ‘ದೇಶದಲ್ಲಿ ಗುಣಮಟ್ಟದ ಶಿಕ್ಷಣ ಕೊರತೆ ಕಂಡುಬರುತ್ತಿದೆ. ಎಂಜಿನಿಯರಿಂಗ್‌ ಅಥವಾ ತಾಂತ್ರಿಕ ಕೋರ್ಸ್‌ಗಳಲ್ಲಿ ಪಠ್ಯ ವಿಷಯಕ್ಕಿಂತ ಪ್ರಾಯೋಗಿಕ ವಿಚಾರಗಳ ಕಡೆಗೆ ಹೆಚ್ಚು ಗಮನ ನೀಡಬೇಕು’ ಎಂದರು.

‘ದೇಶದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಕರ ಕೊರತೆಯೂ ಇದೆ. ಅದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು. ಒಳ್ಳೆಯ ವಿದ್ಯಾರ್ಥಿಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದೆ’ ಎಂದು ಹೇಳಿದರು.
ಆರ್‌.ವಿ.ದೇಶಪಾಂಡೆ ಮಾತನಾಡಿ, ‘ರಾಜ್ಯದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಎಂಜಿನಿಯರ್‌ಗಳನ್ನು ಉತ್ಪಾದನೆ ಮಾಡುತ್ತಿವೆ. ಆದರೆ, ರಾಜ್ಯಕ್ಕೆ ಬೇಕಿರುವುದು ಉತ್ತಮ ತಿಳಿವಳಿಕೆಯ ಗುಣಮಟ್ಟದ ಎಂಜಿನಿಯರ್‌ಗಳು. ಆ ನಿಟ್ಟಿನಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು ಶ್ರಮಿಸಬೇಕು’ ಎಂದರು.

ರಾಷ್ಟ್ರೀಯ ಸಂಯೋಜನಾ ಮಂಡಳಿಯ ದಕ್ಷಿಣ ಭಾರತ ವಲಯ ಕೇಂದ್ರವು ಬೆಂಗಳೂರಿನಲ್ಲಿ ಕಾರ್ಯಾ ರಂಭ ಮಾಡಿತು. ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಸಂಬಂಧಿಸಿದಂತೆ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ.

ಆರ್‌ಟಿಇ ಸರಿಯಾಗಿ ಜಾರಿಯಾಗಿಲ್ಲ
‘ಕೇಂದ್ರ ಸರ್ಕಾರವು ಕಡ್ಡಾಯ ಶಿಕ್ಷಣ ಕಾಯ್ದೆಯನ್ನು (ಆರ್‌ಟಿಇ) ಜಾರಿಗೊಳಿಸಿ ಎಲ್ಲರಿಗೂ ಶಿಕ್ಷಣ ದೊರೆಯಬೇಕೆಂಬ ಮಹದಾಸೆ ಯನ್ನು ಹೊಂದಿದೆ. ಆದರೆ, ಇದುವರೆಗೂ ಕಡ್ಡಾಯ ಶಿಕ್ಷಣ ಕಾಯ್ದೆಯು ಸರಿಯಾಗಿ ಜಾರಿ ಯಾಗಿಲ್ಲ’ ಎಂದು ಎಂ.ಪಲ್ಲಂರಾಜು ವಿಷಾದಿಸಿದರು.

‘ಕಾಯ್ದೆ ಅನುಷ್ಠಾನಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳ ಸಹಕಾರ ಅಗತ್ಯವಿದೆ. ಆದರೆ, ಕೆಲವು ರಾಜ್ಯಗಳಲ್ಲಿನ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆಯಿದೆ. ಉತ್ತಮ ಗುಣಮಟ್ಟದ ಶಿಕ್ಷಕರ ಕೊರತೆಯೂ ಇದೆ. ಇದನ್ನು ನೀಗಿಸಲು ಕ್ರಮ ಕೈಗೊಳ್ಳಲಾಗು ವುದು. 2015ರೊಳಗೆ ಕಡ್ಡಾಯ ಶಿಕ್ಷಣ ಕಾಯ್ದೆಯನ್ನು ಸಂಪೂರ್ಣ ವಾಗಿ ದೇಶದೆಲ್ಲೆಡೆ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.