ADVERTISEMENT

ರಾಜ್ಯಗಳ ನಡುವೆ ತಾರತಮ್ಯದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ

ನಾವು ಭಿಕ್ಷುಕರಲ್ಲ: ಪ್ರಧಾನಿ ಮೋದಿಗೆ ದೇವೇಗೌಡ ತರಾಟೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ರಾಜ್ಯಗಳ ನಡುವೆ ತಾರತಮ್ಯದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ
ರಾಜ್ಯಗಳ ನಡುವೆ ತಾರತಮ್ಯದಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ– ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿರುವುದರಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಆಗಲಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಗುಡುಗಿದ್ದಾರೆ.

ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಡಿಶಾ ಮತ್ತು ಆಂಧ್ರದಲ್ಲಿ ಚಂಡಮಾರುತ ಬಂದು ಅಪಾರ ನಷ್ಟ ಆದಾಗ ಒಡಿಶಾಗೆ ಪರಿಹಾರದ ಪ್ಯಾಕೇಜ್ ನೀಡಲಿಲ್ಲ. ಆಂಧ್ರಕ್ಕೆ ನೀಡಿದರು ಎಂದು ಆರೋಪಿಸಿದರು.

ಮಮತಾ ಬ್ಯಾನರ್ಜಿಗೆ ಮೊದಲಿನಿಂದಲೂ ಏನೇನು ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ಗುಜರಾತ್‌ನಲ್ಲಿ ಚುನಾವಣೆ ಬರುತ್ತಿರುವುದರಿಂದ ₹ 5000 ಕೋಟಿಯ ಸೂಪರ್‌ ಎಕ್ಸ್‌ಪ್ರೆಸ್‌ ಹೆದ್ದಾರಿ ಘೋಷಿಸಿದ್ದಾರೆ. ಕರ್ನಾಟಕ ಏನು ತಪ್ಪು ಮಾಡಿದೆ. ನಾವೇನು ತೆರಿಗೆ ಕಟ್ಟುವುದಿಲ್ಲವೆ, ಭಿಕ್ಷುಕರೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

ADVERTISEMENT

ನರೇಂದ್ರ ಮೋದಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಬಂದರೆ ಹೆದರುವುದಿಲ್ಲ. ದಿಟ್ಟವಾಗಿ ಎದುರಿಸುತ್ತೇನೆ ಎಂದರು.

ಮೀಸಲಾತಿ ಸಿಎಂ ಪೊಳ್ಳು ಭರವಸೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಸಮಾವೇಶಗಳನ್ನು ನಡೆಸಿ, ಮೀಸಲಾತಿ ಕೊಡಿಸುವುದಾಗಿ ಪೊಳ್ಳು ಭರವಸೆ ನೀಡುತ್ತಿದ್ದಾರೆ ಎಂದು ದೇವೇಗೌಡ ದೂರಿದರು.

‘ಮೀಸಲಾತಿ ಕೊಡಿಸುವುದು ಸಭೆ– ಸಮಾರಂಭಗಳಲ್ಲಿ ಘೋಷಣೆ ಮಾಡಿದಷ್ಟು ಸುಲಭವಲ್ಲ. ಸುಪ್ರೀಂ ಕೋರ್ಟ್‌ ಇದಕ್ಕೆ ಒಪ್ಪುವುದಿಲ್ಲ. ಮುಖ್ಯಮಂತ್ರಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ಆಂಧ್ರ, ಮಹಾರಾಷ್ಟ್ರ, ಉತ್ತರಪ್ರದೇಶ ರಾಜ್ಯಗಳು ಮೀಸಲಾತಿ ಪ್ರಮಾಣ ಹೆಚ್ಚಿಸಿದಾಗ ಸುಪ್ರೀಂಕೋರ್ಟ್‌ ಅದನ್ನು ತಿರಸ್ಕರಿಸಿತು. ‘ಇಲ್ಲಿ ಸಚಿವ ಆಂಜನೇಯ ಜನಗಣತಿ ಮಾಡಿಸ್ತಾರೆ, ಮುಖ್ಯಮಂತ್ರಿ ಮೀಸಲಾತಿ ಕೊಡುವುದಾಗಿ ಘೋಷಣೆ ಮಾಡ್ತಾರೆ. ಸುಪ್ರೀಂಕೋರ್ಟ್‌ ಆದೇಶ ಏನಿದೆ ಎಂಬುದು ಇವರಿಗೆ ಗೊತ್ತೆ’ ಎಂದು ಕುಟುಕಿದರು.

‘ಕಾಂಗ್ರೆಸ್‌ ಮತ್ತು ಬಿಜೆಪಿ ಪೈಪೋಟಿಗೆ ಬಿದ್ದವರಂತೆ ಜಾತಿ ಸಮಾವೇಶಗಳನ್ನು ಮಾಡುತ್ತಿವೆ. ನಮ್ಮದು ಸಣ್ಣ ಪಕ್ಷ, ನಮ್ಮದೇ ಆದ ರೀತಿಯಲ್ಲಿ ಸಣ್ಣ– ಪುಟ್ಟ ಜಾತಿಗಳನ್ನು ಸಂಘಟನೆ ಮಾಡುತ್ತಿದ್ದೇವೆ. ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆ ನಡೆಸಲು ಪ್ರಧಾನಿ ಮೋದಿ, ಕಾಂಗ್ರೆಸ್‌ ನಾಯಕಿ ಸೋನಿಯಾಗಾಂಧಿ ಒಂದೇ ವೇದಿಕೆಗೆ ಬರಲಿ. ಅದಕ್ಕೆ ನಾನು ಸಿದ್ಧನಿದ್ದೇನೆ’ ಎಂದರು.

‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಅಸ್ತಿತ್ವ ತೋರಿಸುತ್ತೇವೆ. ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬುದು ಮುಖ್ಯವಲ್ಲ. ಆದರೆ, ಎಲ್ಲ ಕ್ಷೇತ್ರಗಳಲ್ಲೂ ಪಕ್ಷವನ್ನು ಸಕ್ರಿಯಗೊಳಿಸುತ್ತೇವೆ’ ಎಂದು ಅವರು ತಿಳಿಸಿದರು.

ಪ್ರತಿಯೊಂದು ಕ್ಷೇತ್ರದಲ್ಲಿ ಟಿಕೆಟ್‌ ಆಕಾಂಕ್ಷಿಗಳು ಜನ ಸಂಪರ್ಕ ಮಾಡಬೇಕು. ಇದಕ್ಕಾಗಿ ಒಂದು ತಿಂಗಳ ಸಮಯ ನೀಡಲಾಗುವುದು. ಇದೇ 11ರಂದು ಆಕಾಂಕ್ಷಿಗಳ ಸಭೆ ಕರೆಯಲಾಗಿದೆ ಎಂದರು.

ಬೆಂಗಳೂರಿನ ಸಮಸ್ಯೆಗೆ ಸಿಎಂ ಕಾರಣ

ನಗರದ ಎಲ್ಲ ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

‘ರಸ್ತೆ ಗುಂಡಿಗಳು, ಕಸದ ಸಮಸ್ಯೆ ಬಗೆಹರಿಸುವಲ್ಲಿ ಸಿದ್ದರಾಮಯ್ಯ ಸರ್ಕಾರ ವಿಫಲವಾಗಿದೆ. ಅಧಿಕಾರದಲ್ಲಿ ಹಿಡಿತವಿಲ್ಲ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆದ್ಯತೆ ಮೇರೆಗೆ ಆರು ತಿಂಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ. ಕುಮಾರಸ್ವಾಮಿಗೆ ಗ್ರಾಮ ವಾಸ್ತವ್ಯದ ಮಾದರಿಯಲ್ಲಿ ಪ್ರತಿ ವಾರ ನಗರ ಪ್ರದಕ್ಷಿಣೆ ಮಾಡಲು ಸೂಚಿಸುತ್ತೇನೆ’ ಎಂದು ಅವರು ತಿಳಿಸಿದರು.

ಅ.11 ರಂದು ಆಕಾಂಕ್ಷಿಗಳ ಸಭೆ

224 ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಆಕಾಂಕ್ಷಿಗಳ ಸಭೆಯನ್ನು ಇದೇ 11 ರಂದು ಕರೆಯಲಾಗಿದೆ. ಟಿಕೆಟ್‌ ಆಕಾಂಕ್ಷಿಗಳು ಅವರವರ ಕ್ಷೇತ್ರಗಳಲ್ಲಿ ಜನ ಸಂಪರ್ಕ ಸಭೆ ಮಾಡಬೇಕು. ಪರಿಣಾಮಕಾರಿಯಾಗಿ ಜನಸಂಪರ್ಕ ಮಾಡಿದವರಿಗಷ್ಟೇ ಟಿಕೆಟ್‌ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.