ಬೆಂಗಳೂರು: ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ಜಾಮೀನು ದೊರಕಿಸಲು ನ್ಯಾಯಾಧೀಶರಿಗೆ ಲಂಚ ನೀಡಲಾಗಿದೆ ಎಂಬ ಆರೋಪ ಕುರಿತು ಸಿಬಿಐ ರಾಜ್ಯದಲ್ಲೂ ತನಿಖೆ ತೀವ್ರಗೊಳಿಸಿದೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿರುವ ಸಿಬಿಐ ತಂಡ, ರೆಡ್ಡಿ ಜೊತೆ ನಿರಂತರ ಸಂಪರ್ಕದಲ್ಲಿದ್ದ ವ್ಯಕ್ತಿಗಳ ಮಾಹಿತಿ ಕಲೆಹಾಕಿದೆ.
ಓಬಳಾಪುರಂ ಮೈನಿಂಗ್ ಕಂಪೆನಿ ಮೂಲಕ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಹೈದರಾಬಾದ್‌ನ ನಾಂಪಲ್ಲಿಯ ಸಿಬಿಐ ಒಂದನೇ ಹೆಚ್ಚುವರಿ ವಿಶೇಷ ನ್ಯಾಯಾಲಯ ಮೇ 11ರಂದು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿತ್ತು. ಜಾಮೀನು ಅರ್ಜಿಗೆ ಸಂಬಂಧಿಸಿದ ಆದೇಶ ಪ್ರಕಟಣೆ ಸಮಯದಲ್ಲಿ ನ್ಯಾಯಾಧೀಶ ಪಟ್ಟಾಭಿ ರಾಮರಾವ್ ಅವರ ವರ್ತನೆಯನ್ನು ಗಮನಿಸಿದ್ದ ಸಿಬಿಐ ಅಧಿಕಾರಿಗಳು, ಜಾಮೀನು ನೀಡಿಕೆ ಹಿಂದೆ ಕರಾಮತ್ತು ನಡೆದಿದೆ ಎಂಬ ಸಂಶಯ ತಾಳಿದ್ದರು. ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದರು.
ಜಾಮೀನು ನೀಡುವ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರಿಗೇ ಲಂಚ ನೀಡಲಾಗಿತ್ತು ಎಂಬ ವರದಿಯನ್ನು ಆಂಧ್ರಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮದನ್ ಬಿ.ಲೋಕುರ್ ಅವರಿಗೆ ನೀಡುವ ಮುನ್ನವೇ ಹೈದರಾಬಾದ್ ಮತ್ತು ಬೆಂಗಳೂರು ಸಿಬಿಐ ಅಧಿಕಾರಿಗಳು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಕೆಲ ಮಾಹಿತಿ ಸಂಗ್ರಹಿಸಿದ್ದರು. ಮೇ 30ರಂದು ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ ಪ್ರಕರಣದಲ್ಲಿ ಬೆಂಗಳೂರು ಸಿಬಿಐ ಅಧಿಕಾರಿಗಳು ರೆಡ್ಡಿ ಸೇರಿದಂತೆ ಏಳು ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು. ಅದೇ ದಿನ ಹೈದರಾಬಾದ್‌ನ ಒಂದು ತಂಡ ಕಾರಾಗೃಹಕ್ಕೆ ಭೇಟಿ ನೀಡಿ ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಸಹೋದರರತ್ತ ಚಿತ್ತ: ಜನಾರ್ದನ ರೆಡ್ಡಿ ಅವರ ಸಹೋದರರಾದ ಜಿ.ಕರುಣಾಕರ ರೆಡ್ಡಿ ಮತ್ತು ಜಿ.ಸೋಮಶೇಖರ ರೆಡ್ಡಿ ಕಾರಾಗೃಹಕ್ಕೆ ಎಷ್ಟು ಬಾರಿ ಭೇಟಿ ನೀಡಿದ್ದರು ಎಂಬ ಮಾಹಿತಿಯನ್ನು ಸಿಬಿಐ ಕಲೆಹಾಕಿದೆ.
ರೆಡ್ಡಿ ಪರ ವಕೀಲರು, ಗಣಿ ಉದ್ಯಮ ಮತ್ತು ರಾಜಕಾರಣದಲ್ಲಿ ರೆಡ್ಡಿ ಜೊತೆ ನಿಕಟವಾಗಿದ್ದ ಕೆಲವು ವ್ಯಕ್ತಿಗಳ ಭೇಟಿಯ ಬಗ್ಗೆಯೂ ಮಾಹಿತಿ ಪಡೆದಿದೆ. ಕಾರಾಗೃಹದ ಕಚೇರಿಯಲ್ಲಿರುವ ಸಂದರ್ಶಕರ ದಿನಚರಿಯ ವಿವರಗಳನ್ನೂ ಸಿಬಿಐ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ ಎಂದು ಗೊತ್ತಾಗಿದೆ.
ಕಾರಾಗೃಹದ ಪ್ರವೇಶ ದ್ವಾರ ಮತ್ತು ರೆಡ್ಡಿ ಅವರನ್ನು ಇರಿಸಿರುವ ಅತಿ ಭದ್ರತಾ ವಿಭಾಗದಲ್ಲಿ ಅಳವಡಿಸಿರುವ ಸಿ.ಸಿ. ಟಿವಿಯಲ್ಲಿ ಸೆರೆಯಾಗಿರುವ ವಿವರವನ್ನೂ ಸಿಬಿಐ ಪಡೆದುಕೊಂಡಿದೆ. ಕಾರಾಗೃಹದಲ್ಲಿ ಇರುವ ದೂರವಾಣಿಯಿಂದ ಹೊರಹೋಗಿರುವ, ಅಲ್ಲಿಗೆ ಬಂದಿರುವ ಕರೆಗಳು ಮತ್ತು ಸುತ್ತಲಿನ ಮೊಬೈಲ್ ಗೋಪುರಗಳ ಮೂಲಕ ಹೊರಹೋಗಿರುವ ಕರೆಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದೆ ಎಂದು ತಿಳಿದುಬಂದಿದೆ.
ಹಣದ ಮೂಲ ಪತ್ತೆಗೆ ಸಜ್ಜು: ಜನಾರ್ದನ ರೆಡ್ಡಿ ಅವರ ಕುಟುಂಬ ನ್ಯಾಯಾಧೀಶರಿಗೆ ನೀಡಿದೆ ಎನ್ನಲಾದ ಹಣದ ಮೂಲ ಪತ್ತೆಗೆ ಸಿಬಿಐ ಹಲವು ತಂಡಗಳನ್ನು ನಿಯೋಜಿಸಿದೆ. ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ತಲಾ ಒಂದು ಸ್ಥಳದಿಂದ ಹೈದರಾಬಾದ್‌ಗೆ ಹಣ ಸಾಗಿಸಲಾಗಿತ್ತು ಎಂಬ ಮಾಹಿತಿ ಸಿಬಿಐ ಅಧಿಕಾರಿಗಳ ಬಳಿ ಇದೆ. ಹಣ ಸಾಗಿಸಿದ ವ್ಯಕ್ತಿಗಳು ಮತ್ತು ವಾಹನಗಳ ಬಗ್ಗೆಯೂ ಸುಳಿವು ದೊರೆತಿದೆ. ಹಣದ ಮೂಲ ಪತ್ತೆಗೆ ಸಿಬಿಐನ ಹೈದರಾಬಾದ್ ಜಂಟಿ ನಿರ್ದೇಶಕ ವಿ.ವಿ.ಲಕ್ಷ್ಮೀನಾರಾಯಣ ನೇತೃತ್ವದಲ್ಲೇ ಕಾರ್ಯಾಚರಣೆ ನಡೆಯುತ್ತಿದೆ. ಸಿಬಿಐನ ಬೆಂಗಳೂರು ಡಿಐಜಿ ಆರ್.ಹಿತೇಂದ್ರ ಮತ್ತು ಎಸ್‌ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಕೂಡ ಕಾರ್ಯಾಚರಣೆಯಲ್ಲಿ ನೆರವು ನೀಡುತ್ತಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಲವರ ಮೇಲೆ ಸಿಬಿಐ ತೀವ್ರ ನಿಗಾ ಇರಿಸಿದೆ. ಲಂಚ ಪ್ರಕರಣ ಬಹಿರಂಗವಾಗುತ್ತಿದ್ದಂತೆಯೇ ಹಲವರು ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಚಲನವಲನದ ಮೇಲೆ ಕಣ್ಗಾವಲು ಇಡುವಂತೆ ಸಿಬಿಐ ರಾಜ್ಯ ಪೊಲೀಸರನ್ನು ಕೋರಿದೆ. ವಿಮಾನ ನಿಲ್ದಾಣಗಳಿಗೂ ಈ ಮಾಹಿತಿ ರವಾನೆಯಾಗಿದೆ ಎಂದು ಮೂಲಗಳು ಹೇಳಿವೆ.
ಸಿಬಿಐ ಷಡ್ಯಂತ್ರ: ಆರೋಪ
`ನ್ಯಾಯಾಧೀಶರಿಗೆ ಲಂಚ~ ಆರೋಪ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಜನಾರ್ದನ ರೆಡ್ಡಿ ಸಹೋದರ, ಶಾಸಕ ಸೋಮಶೇಖರ ರೆಡ್ಡಿ, `ರಾಜಕೀಯ ದುರುದ್ದೇಶದಿಂದ ಸಿಬಿಐ ಹಾಗೂ ಕೆಲ ಮಾಧ್ಯಮಗಳು ನನ್ನ ತಮ್ಮನ ತೇಜೋವಧೆಗೆ ಪ್ರಯತ್ನಿಸಿವೆ. 9 ತಿಂಗಳಿನಿಂದ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ವಿರುದ್ಧ ಸಿಬಿಐ ಷಡ್ಯಂತ್ರ ರೂಪಿಸಿದೆ~ ಎಂದು ಆರೋಪಿಸಿದ್ದಾರೆ.
ಅಜ್ಞಾತ ವಾಸ: ಈ ಪ್ರಕರಣ ಬಯಲಾದ ಬಳಿಕ ಸೋಮಶೇಖರ ರೆಡ್ಡಿ ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಕಾಣಿಸಿಕೊಂಡಿಲ್ಲ. ದೂರವಾಣಿ ಸಂಪರ್ಕಕ್ಕೂ ಲಭ್ಯವಾಗುತ್ತಿಲ್ಲ. ಅವರ ಹೆಸರಿನಲ್ಲಿರುವ ಕೆಲ ದೂರವಾಣಿ ಸಂಖ್ಯೆಗಳು ಸ್ಥಗಿತವಾಗಿವೆ. ಕೆಲವು ಸಂಖ್ಯೆಗಳಿಗೆ ಕರೆ ಮಾಡಿದಾಗ `ಈ ಸಂಖ್ಯೆ ಅವರದ್ದಲ್ಲ~ ಎಂಬ ಉತ್ತರ ದೊರೆಯುತ್ತಿದೆ. ಸಹಾಯಕನೊಬ್ಬನ ಮೂಲಕ ರೆಡ್ಡಿ ತಮ್ಮ ಹೇಳಿಕೆಯನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.