ADVERTISEMENT

ರಾಜ್ಯದಾದ್ಯಂತ ಬಿಪಿಎಲ್ ಗಣತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 18:55 IST
Last Updated 15 ಸೆಪ್ಟೆಂಬರ್ 2011, 18:55 IST

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳನ್ನು ಗುರುತಿಸುವ ಉದ್ದೇಶದಿಂದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಆಧಾರಿತ ಗಣತಿಯನ್ನು ರಾಜ್ಯದಲ್ಲಿ ಕೈಗೆತ್ತಿಕೊಳ್ಳುವ ಪ್ರಸ್ತಾವಕ್ಕೆ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ಇದು ಕೇಂದ್ರ ಸರ್ಕಾರದ ಯೋಜನೆ. ಇದಕ್ಕೆ 105 ಕೋಟಿ ರೂಪಾಯಿ ಖರ್ಚಾಗಲಿದೆ. ಪೂರ್ಣ ಮೊತ್ತವನ್ನು ಕೇಂದ್ರವೇ ಭರಿಸಲಿದೆ ಎಂದು ಸಂಪುಟದ ತೀರ್ಮಾನಗಳನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್.ಸುರೇಶ್‌ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಗಣತಿ ಕಾರ್ಯ ಅಕ್ಟೋಬರ್ ಮೊದಲ ವಾರದಿಂದ ಆರಂಭವಾಗಲಿದೆ. ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಅವರು ವಿವರಿಸಿದರು.

2004ರಲ್ಲಿ ಕೂಡ ಈ ರೀತಿಯ ಗಣತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆ ಸಂದರ್ಭದಲ್ಲಿ 67 ಲಕ್ಷ ಗ್ರಾಮೀಣ ಕುಟುಂಬಗಳ ಸಮೀಕ್ಷೆ ನಡೆದಿತ್ತು. ಅದರಲ್ಲಿ 18 ಲಕ್ಷ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿರುವುದನ್ನು ಗುರುತಿಸಲಾಗಿತ್ತು. ಈ ಬಾರಿಯೂ ಇದೇ ಮಾಹಿತಿಯನ್ನು ಕಲೆಹಾಕಲು ಗಣತಿ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆಯುವ ಈ ಗಣತಿಗೆ ಕಂದಾಯ ಇಲಾಖೆ ಮತ್ತು ಅಂಗನವಾಡಿ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ವಿವರಿಸಿದರು.

ಸಣ್ಣ ಕೈಗಾರಿಕೆಗಳ ಬಡ್ಡಿ ಮನ್ನಾ: ರಾಜ್ಯ ಹಣಕಾಸು ನಿಗಮದಿಂದ ಸಾಲ ಪಡೆದ ಸಣ್ಣ ಕೈಗಾರಿಕೆಗಳ ಮಾಲೀಕರು ಡಿಸೆಂಬರ್ 31ರ ಒಳಗೆ ಅಸಲು ಪಾವತಿಸಿದರೆ, ಸಾಲದ ಮೇಲಿನ ಬಡ್ಡಿಯನ್ನು ಸಂಪೂರ್ಣ ಮನ್ನಾ ಮಾಡಲು ಸಂಪುಟ ನಿರ್ಧರಿಸಿದೆ.

1982ರ ಕೈಗಾರಿಕಾ ನೀತಿ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ. ಸುಮಾರು 847 ಘಟಕಗಳಿಗೆ ಇದರ ಉಪಯೋಗ ಆಗಲಿದೆ. ಈ ಘಟಕಗಳ ಮಾಲೀಕರು 23 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಇದರ ಬಡ್ಡಿ ರೂ 78 ಕೋಟಿ ಮತ್ತು ಸುಸ್ತಿ ಬಡ್ಡಿ ರೂ 4.87 ಕೋಟಿ ಆಗಿದೆ. ಒಟ್ಟು 106.82 ಕೋಟಿ ಬಾಕಿ ಇದ್ದು, ಅಸಲು ಪಾವತಿ ಮಾಡಿದವರಿಗೆ ಏಕಗಂಟು ತೀರುವಳಿ ಯೋಜನೆ ಜಾರಿ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

2012ರ ಜನವರಿ 1ರಿಂದ ಮಾರ್ಚ್ 31ರ ಒಳಗೆ ಅಸಲು ಪಾವತಿ ಮಾಡುವವರಿಗೆ ಸಾಲದ ಮೇಲಿನ ಶೇ 75ರಷ್ಟು ಬಡ್ಡಿಯನ್ನು ಮನ್ನಾ ಮಾಡಲಾಗುವುದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರು ತಮ್ಮ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸುವ ತೀರ್ಮಾನ ತೆಗೆದುಕೊಂಡರೆ ಅಂತಹವರಿಗೆ ಅಸಲು ಪಾವತಿಸಲು ಒಂಬತ್ತು ತಿಂಗಳ ಸಮಯ ನೀಡಲಾಗುವುದು ಎಂದೂ ಅವರು ಹೇಳಿದರು.

ಇತರ ಪ್ರಮುಖ ತೀರ್ಮಾನಗಳು
 2007-08ನೇ ಸಾಲಿನಲ್ಲಿ ಸ್ಥಾಪಿಸಿದ್ದ ಒಂಬತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಪೈಕಿ ಇನ್ನೂ ನಾಲ್ಕು ಕಾಲೇಜುಗಳಿಗೆ ಕಟ್ಟಡ ಸೇರಿದಂತೆ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಈ ಕಾಲೇಜುಗಳನ್ನು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಾಗಿ ವರ್ಗಾಯಿಸಲು ಸಂಪುಟ ಅನುಮೋದನೆ ನೀಡಿದೆ.

ಕಾರವಾರ, ರಾಯಚೂರು, ಹೂವಿನಹಡಗಲಿ ಮತ್ತು ಗಂಗಾವತಿಯಲ್ಲಿನ ಕಾಲೇಜುಗಳನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ ವ್ಯಾಪ್ತಿಗೆ ವಹಿಸಲಾಗುವುದು. ಈ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಎರಡು ಅವಕಾಶಗಳನ್ನು ನೀಡಿದ್ದು, ಮಾತೃ ಇಲಾಖೆ ಅಥವಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಬಹುದಾಗಿದೆ ಎಂದರು.

 ಗುಲ್ಬರ್ಗದಲ್ಲಿನ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಕುಡಿಯುವ ನೀರು ಒದಗಿಸುವ 4 ಕೋಟಿ ರೂಪಾಯಿ ವೆಚ್ಚದ ಯೋಜನೆಗೂ ಸಂಪುಟ ಒಪ್ಪಿಗೆ ನೀಡಿದೆ. ಪ್ರತಿನಿತ್ಯ ಒಂದು ದಶಲಕ್ಷ ಲೀಟರ್ ನೀರು ಬೇಕಿದೆ. ಈ ನೀರನ್ನು ಮಾಂಜ್ರಾ ನದಿಯಿಂದ ಸರಬರಾಜು ಮಾಡಲು ತೀರ್ಮಾನಿಸಲಾಗಿದೆ.

ಕೇಂದ್ರ ಸರ್ಕಾರದ ಸ್ವರ್ಣ ಜಯಂತಿ ಗ್ರಾಮ ರೋಜಗಾರ್ ಯೋಜನೆಯನ್ನು 2012ರ ಜನವರಿಯಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ) ಎಂದು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ. ಈ ಯೋಜನೆ ಬೆಳಗಾವಿ, ಧಾರವಾಡ, ಗುಲ್ಬರ್ಗ, ಮೈಸೂರು ಮತ್ತು ತುಮಕೂರು ಜಿಲ್ಲೆಯ 20 ತಾಲ್ಲೂಕುಗಳಲ್ಲಿ ಮೊದಲು ಆರಂಭವಾಗಲಿದೆ. ಬಡ ಕುಟುಂಬಗಳಿಗೆ ಲಾಭದಾಯಕ ಸ್ವಯಂ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ.

ಕೃಷಿ ಯಂತ್ರಗಳಿಗೆ ಸಬ್ಸಿಡಿ ಮಿತಿ ಸಡಿಲ
ಕೃಷಿ ಯಂತ್ರೋಪಕರಣಗಳ ಖರೀದಿಗೆ ನಿಗದಿಪಡಿಸಿದ್ದ ಗರಿಷ್ಠ 50 ಸಾವಿರ ರೂಪಾಯಿ ಸಬ್ಸಿಡಿ ಹಣದ ಮಿತಿಯನ್ನು ಗುರುವಾರ ರಾಜ್ಯ ಸಚಿವ ಸಂಪುಟ ಸಡಿಲಗೊಳಿಸಿದೆ. ಟ್ರಾಕ್ಟರ್‌ಗಳಿಗೆ ಸಬ್ಸಿಡಿ ನೀಡುವುದನ್ನು ಸ್ಥಗಿತಗೊಳಿಸುವ ತೀರ್ಮಾನ ತೆಗೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.