ADVERTISEMENT

ರಾಜ್ಯದ ಜಲಾಶಯಗಳ ಒಳ ಹರಿವು ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 3 ಜುಲೈ 2017, 19:30 IST
Last Updated 3 ಜುಲೈ 2017, 19:30 IST
ರಾಜ್ಯದ ಜಲಾಶಯಗಳ ಒಳ ಹರಿವು ಹೆಚ್ಚಳ
ರಾಜ್ಯದ ಜಲಾಶಯಗಳ ಒಳ ಹರಿವು ಹೆಚ್ಚಳ   

ಆಲಮಟ್ಟಿ / ಜಮಖಂಡಿ/ ಹೊಸಪೇಟೆ/ ಬೆಳಗಾವಿ/ಕಾರವಾರ/ಮಂಗಳೂರು: ಭಾರಿ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಆಲಮಟ್ಟಿಯ ಲಾಲ್‌ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಹೆಚ್ಚಾಗಿದೆ.

ಆಲಮಟ್ಟಿ ಜಲಾಶಯದ ಒಳಹರಿವು ಸೋಮವಾರ 41,901 (3.8 ಟಿಎಂಸಿ ಅಡಿ) ಕ್ಯುಸೆಕ್‌ ಇತ್ತು. ಸತತ ಎರಡನೇ ದಿನವೂ 3 ಟಿಎಂಸಿ ಅಡಿಗಿಂತ ಹೆಚ್ಚಿನ ನೀರು ಹರಿದುಬಂದಿದೆ.

ಎರಡು ದಿನಗಳಲ್ಲಿ ನೀರಿನ ಪ್ರಮಾಣ ಎರಡು ಮೀಟರ್‌ ಏರಿಕೆಯಾಗಿದೆ. ಶನಿವಾರ 506.40 ಮೀಟರ್‌ ಇದ್ದ ಜಲಾಶಯದ ಮಟ್ಟ, ಭಾನುವಾರ 507.40 ಮೀಟರ್‌ಗೆ ಏರಿತ್ತು. ಸೋಮವಾರ ಇದು 508.40 ಮೀಟರ್‌ಗೆ ತಲುಪಿದೆ.

ADVERTISEMENT

ಮಹಾರಾಷ್ಟ್ರದ ಸಾಂಗ್ಲಿ ಬಳಿಯ ರಾಜಾಪುರ ಬ್ಯಾರೇಜ್‌ ಬಳಿ ಕೃಷ್ಣಾ ನದಿಗೆ ಸೋಮವಾರ 32.880 (3 ಟಿಎಂಸಿ ಅಡಿ) ಕ್ಯುಸೆಕ್‌, ಕೊಲ್ಲಾಪುರದ ರಾಜಾ ರಾಮ್‌ ಬ್ಯಾರೇಜ್‌ ಬಳಿ 18,261 ಕ್ಯುಸೆಕ್‌ (1.5 ಟಿಎಂಸಿ ಅಡಿ) ನೀರಿನ ಹರಿವಿತ್ತು ಎಂದು ಕೆಬಿಜೆಎನ್‌ಎಲ್‌ ಮೂಲಗಳು ತಿಳಿಸಿವೆ.

ಚಿಕ್ಕೋಡಿ ತಾಲ್ಲೂಕಿನ ಬಾವನ ಸೌಂದತ್ತಿ ಬಳಿ ಮಾಂಜರಿ ನದಿಗೆ ನಿರ್ಮಿಸಿರುವ ಹಳೆಯ ಸೇತುವೆ ಇನ್ನೂ ಮುಳುಗಿದ್ದು, ಸಂಚಾರಕ್ಕೆ ಮುಕ್ತವಾಗಿಲ್ಲ. ಸವದತ್ತಿಯ ನವೀಲುತೀರ್ಥದಲ್ಲಿರುವ ಮಲಪ್ರಭಾ ಜಲಾಶಯಕ್ಕೆ 2,039 ಕ್ಯುಸೆಕ್‌, ಹುಕ್ಕೇರಿ ತಾಲ್ಲೂಕಿನ ಹಿಡಕಲ್‌ ಜಲಾಶಯಕ್ಕೆ 10,091 ಕ್ಯುಸೆಕ್‌ ನೀರು ಹರಿದುಬಂದಿದೆ.

ಹಿಪ್ಪರಗಿ ಜಲಾಶಯ: 6 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಇರುವ ಹಿಪ್ಪರಗಿ ಜಲಾಶಯದ ಒಳಹರಿವು ಸೋಮವಾರ 40,100 (3.8 ಟಿಎಂಸಿ ಅಡಿ) ಕ್ಯುಸೆಕ್‌ನಷ್ಟಿತ್ತು. ಹೊರ ಹರಿವಿನ ಪ್ರಮಾಣ ಅಷ್ಟೇ ಇದೆ.

ಹಿಪ್ಪರಗಿ ಜಲಾಶಯದ ಗರಿಷ್ಠ ನೀರಿನ ಮಟ್ಟ 525 ಮೀಟರ್ ಇದ್ದು, ಸೋಮವಾರ ನೀರಿನ ಮಟ್ಟ 518.80 ಮೀಟರ್‌ ಇತ್ತು ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ವಿ.ಎಸ್‌. ನಾಯ್ಕ ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯ: ಜೂನ್‌ 25ರಿಂದ ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯದಿಂದ ನೀರು ಬಿಡುತ್ತಿರುವುದರಿಂದ ತುಂಗಭದ್ರಾ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಸೋಮವಾರ 9,149 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದು, 155 ಕ್ಯುಸೆಕ್‌ ಹೊರಹರಿವು ಇತ್ತು.

ಕಡಲ್ಕೊರೆತ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ಹೊನ್ನಾವರ ಹಾಗೂ ಕಾರವಾರದಲ್ಲಿ  ಸೋಮವಾರ ಕೆಲ ಹೊತ್ತು ಬಿರುಸಾಗಿ ಮಳೆಯಾಗಿದೆ. ಅಂಕೋಲಾ, ಕುಮಟಾ ಹಾಗೂ ಸಿದ್ದಾಪುರದಲ್ಲಿ ಸೋಮವಾರ ಸಾಧಾರಣ ಮಳೆಯಾಗಿದೆ. 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 31.93 ಸೆಂ.ಮೀ. ಮಳೆ ಬಿದ್ದಿದೆ.

ಅಂಕೋಲಾದ ಬೆಳಂಬಾರದಲ್ಲಿ ಕಡಲ್ಕೊರೆತ ಉಂಟಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ. ತಡೆಗೋಡೆಗೆ ಹಾಕಿದ್ದ ಬಂಡೆಗಲ್ಲುಗಳು ಅಲೆಗಳ ಅಬ್ಬರಕ್ಕೆ ಕುಸಿಯುತ್ತಿದ್ದು, ಮರಗಳೂ ನೀರು ಪಾಲಾಗುವ ಹಂತದಲ್ಲಿವೆ.

ಕರಾವಳಿಯಲ್ಲೂ ವರ್ಷಧಾರೆ:  ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಸೋಮವಾರ ದಿನವಿಡೀ ಜಿಟಿ ಜಿಟಿ ಮಳೆಯಾಗಿದೆ. ಭಾನುವಾರ ರಾತ್ರಿಯೂ ಬಿರುಸಿನ ಮಳೆಯಾಗಿದ್ದು ಬಹುತೇಕ ನದಿಗಳು ತುಂಬಿ ಹರಿಯತೊಡಗಿವೆ. ಚಿಕ್ಕಮಗಳೂರು, ಬಾಳೆಹೊನ್ನೂರು ಮತ್ತು ಮೂಡಿಗೆರೆಗಳಲ್ಲೂ ಉತ್ತಮ ಮಳೆಯಾಗಿದೆ.

***

‘ಕರಾವಳಿ, ಮಲೆನಾಡಿನಲ್ಲಿ ಮಳೆ’

ಬೆಂಗಳೂರು: ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಇದು ಹೀಗೆಯೇ ಮುಂದುವರಿಯಲಿದೆ.

‘ಅರಬ್ಬಿ ಸಮುದ್ರದಲ್ಲಿ ‘ಕಡಿಮೆ ಒತ್ತಡದ ತಗ್ಗು’ ನಿರ್ಮಾಣವಾಗಿದೆ. ಇದರಿಂದ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಎಸ್‌.ಎಸ್‌.ಎಂ.ಗಾವಸ್ಕರ್‌ ತಿಳಿಸಿದರು.

‘ಈ ಭಾಗದಲ್ಲಿ ಪ್ರತಿದಿನ ಸಂಜೆ ಅಥವಾ ರಾತ್ರಿ ವೇಳೆ ಮಳೆ ಬೀಳಲಿದೆ. ಮಲೆನಾಡಿನ ದಟ್ಟ ಕಾಡು ಇರುವ ಪ್ರದೇಶದಲ್ಲಿ ಉತ್ತಮ ಮಳೆ ಆಗಲಿದೆ. ಆದರೆ, ಅರೆ ಮಲೆನಾಡು ಭಾಗದಲ್ಲಿ ಸಾಧಾರಣದಿಂದ ಮಳೆ ಆಗುವ ಸಾಧ್ಯತೆ ಇದೆ’ ಎಂದರು.

‘ದಕ್ಷಿಣ ಹಾಗೂ ಉತ್ತರ ಒಳನಾಡು ಪ್ರದೇಶದಲ್ಲಿ ಶುಷ್ಕ ವಾತಾವರಣ ಮುಂದುವರಿಯಲಿದೆ. ಇನ್ನೂ ಮೂರು ದಿನಗಳು ಮಳೆ ಬೀಳುವ ಮುನ್ಸೂಚನೆ ಇಲ್ಲ’ ಎಂದು ತಿಳಿಸಿದರು.

‘ಬೆಂಗಳೂರಿನಲ್ಲಿ ಸೋಮವಾರ 5 ಮಿ.ಮೀ. ಮಳೆ ಬೀಳುವ ನಿರೀಕ್ಷೆ ಇತ್ತು. ಆದರೆ, 15 ಮಿ.ಮೀ. ಮಳೆಯಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.