ADVERTISEMENT

ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ

ಮಹಾರಾಷ್ಟ್ರ– ಕರ್ನಾಟಕ ನಡುವೆ ಬಸ್‌ ಸಂಚಾರ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ
ರಾಜ್ಯದ ಬಸ್‌ಗಳ ಮೇಲೆ ಕಲ್ಲು ತೂರಾಟ   

ನಿಪ್ಪಾಣಿ (ಬೆಳಗಾವಿ ಜಿಲ್ಲೆ): ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಎಂಎಸ್‌ಆರ್‌ಟಿಸಿ) ನೌಕರರು, ರಾಜ್ಯದ ವಾಯವ್ಯ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳಿಗೆ ಮಂಗಳವಾರ ಕಲ್ಲು ತೂರಿದ್ದಾರೆ.

ಇದರಿಂದಾಗಿ, ಆ ರಾಜ್ಯದತ್ತ ತೆರಳುತ್ತಿದ್ದ ಎಲ್ಲ ಬಸ್‌ಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ನಿಪ್ಪಾಣಿ ಡಿಪೊ ವ್ಯವಸ್ಥಾಪಕ ಸಂದೀಪ ಎಸ್‌. ತಿಳಿಸಿದರು.

ಕೊಲ್ಲಾಪುರದಲ್ಲಿ ಕಾರವಾರ– ಪುಣೆ ಹಾಗೂ ಕಾಗಲ್‌ನಲ್ಲಿ ಬಳ್ಳಾರಿ– ಪುಣೆ ಬಸ್‌ಗೆ ಕಲ್ಲು ತೂರಲಾಗಿದೆ. ಕೆಲವು ಬಸ್‌ಗಳ ಚಕ್ರಗಳ ಗಾಳಿಯನ್ನು ತೆಗೆಯಲಾಗಿದೆ. ಯಾವುದೇ ಸಿಬ್ಬಂದಿ ಅಥವಾ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ನಂತರ ಪುನಃ ಸಂಚಾರ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ADVERTISEMENT

ಪೊಲೀಸರ ನೆರವು:
ಎಂಎಸ್‌ಆರ್‌ಟಿಸಿ ಸಿಬ್ಬಂದಿ ಕಲ್ಲು ತೂರಾಟ ನಡೆಸಿದಾಗ ತಕ್ಷಣ ಅಲ್ಲಿನ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಹೀಗಾಗಿ ಹೆಚ್ಚಿನ ನಷ್ಟ ಉಂಟಾಗಿಲ್ಲ. ಕೇವಲ ಗಾಜುಗಳು ಒಡೆದಿವೆ. ಪೊಲೀಸರ ರಕ್ಷಣೆಯಲ್ಲಿ ಬಸ್‌ಗಳು ವಾಪಸ್ಸಾಗಿವೆ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಗಣೇಶ ರಾಠೋಡ್‌ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯಿಂದ ಶಿರಡಿ, ಸೊಲ್ಹಾಪುರ, ಮುಂಬೈ, ಪುಣೆ, ಕೊಲ್ಲಾಪುರಕ್ಕೆ ಹೊರಟಿದ್ದ 59 ಬಸ್‌ಗಳು ವಾಪಸ್ಸಾಗಿವೆ. ಪ್ರಯಾಣಿಕರಿಗೆ ಟಿಕೆಟ್‌ ಹಣವನ್ನು ಮರಳಿಸಲಾಗಿದೆ ಎಂದು ಬಾಗಲಕೋಟೆ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ. ಮೇತ್ರಿ ತಿಳಿಸಿದರು.

’ಸೋಮವಾರ ರತ್ನಗಿರಿ, ಕೊಲ್ಲಾಪುರ ಬಸ್‌ ನಿಲ್ದಾಣದೊಳಕ್ಕೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಅಲ್ಲಿನ ನೌಕರರು ಬಿಡದೆ ತಡೆ ಹಿಡಿದಿದ್ದಾರೆ. ಬಹುತೇಕ ಬಸ್‌ಗಳು ಪೊಲೀಸ್ ಪಹರೆಯಲ್ಲಿ ರಾಜ್ಯಕ್ಕೆ ಮರಳಿದವು.

ಶೇ 60ರಷ್ಟು ಬಸ್‌ಗಳು ಮಂಗಳವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಸಂಚರಿಸಿದರೆ, ಉಳಿದವು ರಾಜ್ಯದ ಗಡಿಯಿಂದಲೇ ಮರಳಿದವು. ಎನ್‌ಇಕೆಆರ್‌ಟಿಸಿ ಬಸ್‌ಗಳ ಸಂಚಾರವನ್ನು ಪರಿಸ್ಥಿತಿಗೆ ಅನುಗುಣವಾಗಿ ನಿರ್ವಹಿಸಲಾಗುತ್ತಿದೆ’ ಎಂದು ವಿಜಯಪುರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್‌.ಜಿ.ಗಂಗಾಧರ ಮಾಹಿತಿ ನೀಡಿದರು.

ಮಹಾರಾಷ್ಟ್ರ– ಕರ್ನಾಟಕ ನಡುವೆ ಬಸ್‌ ಸಂಚಾರ ಸ್ಥಗಿತಗೊಂಡಿದ್ದರಿಂದ ಗಡಿ ಪ್ರದೇಶಗಳಲ್ಲಿರುವವರು ದೀಪಾವಳಿ ಆಚರಿಸಲು ನೆಂಟರ ಮನೆಗೆ ತೆರಳಲು ಪರದಾಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.