ADVERTISEMENT

ರಾಜ್ಯಪಾಲರದು ಋಣದ ಹುದ್ದೆಯಲ್ಲ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 20:05 IST
Last Updated 23 ಜನವರಿ 2011, 20:05 IST

ಬೆಂಗಳೂರು: ‘ರಾಜ್ಯಪಾಲರ ಹುದ್ದೆ ಗೌರವಯುತವಾದುದು. ಈ ಹುದ್ದೆಯನ್ನು ಅಲಂಕರಿಸುವವರು ಸಂವಿಧಾನದ ಚೌಕಟ್ಟಿನೊಳಗೆ ಕೆಲಸ ಮಾಡಬೇಕು. ಆದರೆ, ಪ್ರಸ್ತುತ ರಾಜ್ಯಪಾಲರಾಗಿರುವ ಎಚ್.ಆರ್. ಭಾರದ್ವಾಜ್ ಅವರು ಕಾಂಗ್ರೆಸ್‌ನ ಋಣ ತೀರಿಸಲು ಈ ಹುದ್ದೆಯನ್ನು ಬಳಸುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದಕಾರಜೋಳ ಟೀಕಿಸಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹುತಾತ್ಮ ಮೈಲಾರ ಮಹಾದೇವ ಶತಮಾನೋತ್ಸವ ಸಮಾರಂಭಕ್ಕೂ ಮುಂಚೆ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಭಾರದ್ವಾಜ್ ತಮ್ಮ ಪೂರ್ವಾಶ್ರಮದಲ್ಲಿ ಕಾಂಗ್ರೆಸ್‌ನಿಂದ ಸಾಕಷ್ಟು ಪಡೆದುಕೊಂಡಿದ್ದಾರೆ. ಅದನ್ನು ಈಗ ಈ ರೀತಿಯಾಗಿ ತೀರಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಸೌಜನ್ಯ ಬೇಡವೇ?: ‘ಪ್ರಕರಣ ದಾಖಲಿಸಲು ಅನುಮತಿ ನೀಡುವ ಮೊದಲು ರಾಜ್ಯಪಾಲರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸೌಜನ್ಯಕ್ಕಾದರೂ ಒಂದು ಮಾತು ಕೇಳಬೇಕಿತ್ತಲ್ಲವೇ?’ ಎಂದು ಗೋವಿಂದ ಕಾರಜೋಳ ಹೇಳಿದರು. ಪ್ರಕರಣ ದಾಖಲಿಸಿದ ತಕ್ಷಣ ಯಾರೂ ಅಪರಾಧಿಗಳಾಗಲ್ಲ. ತನಿಖೆಯಾಗಲಿ, ಅಕ್ರಮ ಎಸಗಿದ್ದರೆ, ತಪ್ಪಾಗಿದ್ರೆ ಶಿಕ್ಷೆಯಾಗಲಿ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.