ADVERTISEMENT

ರಾಜ್ಯಪಾಲರ ವರ್ತನೆ: ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 19:00 IST
Last Updated 18 ಜನವರಿ 2011, 19:00 IST

ಬೆಂಗಳೂರು: ‘ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ಮಿತಿಮೀರಿದಾಗ ಸರ್ಕಾರದ ಮೇಲೆ ಕ್ರಮ ಕೈಗೊಳ್ಳುವ ಅಧಿಕಾರ ರಾಜ್ಯಪಾಲರಿಗೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ‘ಮುಖ್ಯಮಂತ್ರಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ಲಾಯರ್ಸ್ ಫೋರಂಗೆ ರಾಜ್ಯಪಾಲರು ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ‘ವಿಶೇಷ ಸಂದರ್ಭಗಳಲ್ಲಿ ಸರ್ಕಾರದ ವಿರುದ್ಧ ಕ್ರಮ ಜರುಗಿಸಲು ರಾಜ್ಯಪಾಲರಿಗೆ ಸಾಂವಿಧಾನಿಕ ಅಧಿಕಾರ ಇದೆ. ಸಂವಿಧಾನದ ಅಡಿಯಲ್ಲಿ ಶಾಸಕಾಂಗದ ಅಧಿಕಾರವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ’ ಎಂದರು.

‘ಹಿಂದೆ ವಾಜಪೇಯಿ ಅವರ ಕಾಲದಲ್ಲಿ ಬಿಜೆಪಿ ಹೈಕಮಾಂಡ್‌ಗೆ ಪಕ್ಷದ ಮೇಲೆ ಹಿಡಿತವಿತ್ತು. ಈಗ ಎಲ್.ಕೆ. ಅಡ್ವಾಣಿ, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ ಅವರಿಗೆ ಯಡಿಯೂರಪ್ಪನವರ ಮೇಲೆ ಹಿಡಿತವೇ ಇಲ್ಲವಾಗಿದೆ. ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರವನ್ನು ಕಳೆದುಕೊಳ್ಳಬಾರದೆಂಬ ಉದ್ದೇಶದಿಂದ ಯಡಿಯೂರಪ್ಪನವರಿಗೆ ಹೈಕಮಾಂಡ್ ಬೆಂಬಲ ನೀಡುತ್ತಿದೆ’ಎಂದು ಆರೋಪಿಸಿದರು.

ಜೆಡಿಎಸ್‌ನಲ್ಲಿ ನೆಮ್ಮದಿ: ‘ಕಾಂಗ್ರೆಸ್‌ನಲ್ಲಿಯೇ ಉಳಿದಿದ್ದರೆ ಒಳ್ಳೆಯದಿತ್ತು ಎಂದು ನಿಮಗೆ ಅನಿಸುತ್ತಿಲ್ಲವೇ’ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ: ‘ಕಾಂಗ್ರೆಸ್‌ನಲ್ಲಿ ಎಲ್ಲದಕ್ಕೂ ಹೈಕಮಾಂಡ್‌ನ ಬಾಗಿಲು ಬಡಿಯಬೇಕು. ಬಾಗಿಲು ಕಾಯುವ ಕೆಲಸ ನನಗೆ ಒಗ್ಗುವುದಿಲ್ಲ. ಜೆಡಿಎಸ್‌ನಲ್ಲಿ ನೆಮ್ಮದಿ ಇದೆ’ ಎಂದು ಉತ್ತರಿಸಿದರು.

‘ರಾಜ್ಯದ ಬಿಜೆಪಿ ಸರ್ಕಾರ ಯಾವುದೇ ಕ್ಷಣದಲ್ಲಿ ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಮುಂದಾಗುವ ಸಂಭವ ಇರುವ ಕಾರಣ ಜೆಡಿಎಸ್ ನಾಯಕರಾದ ಎಚ್.ಡಿ. ದೇವೇಗೌಡರು ಮತ್ತು ಕುಮಾರಸ್ವಾಮಿಯವರ ಜೊತೆ ಸಮಾಲೋಚನೆ ನಡೆಸಿ ಪಕ್ಷದ ಬಲವರ್ಧನೆ ಕಾರ್ಯದಲ್ಲಿ ತೊಡಗುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.