ADVERTISEMENT

ರಾಜ್ಯ ಉಳಿಸಿ- ರಾಜ್ಯಪಾಲರಿಗೆ ಜೆಡಿಎಸ್ ಮನವಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2011, 19:30 IST
Last Updated 18 ಮಾರ್ಚ್ 2011, 19:30 IST

ಬೆಂಗಳೂರು: ಪ್ರೇರಣಾ ಟ್ರಸ್ಟ್ ದೇಣಿಗೆ ವಿವಾದ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸ್ವಜನಪಕ್ಷಪಾತಗಳ ಬಗ್ಗೆ ಜೆಡಿಎಸ್ ರಾಜ್ಯಪಾಲರಿಗೆ ಶುಕ್ರವಾರ ದೂರು ನೀಡಿದೆ. ಸರ್ಕಾರ ರಾಜ್ಯಾಂಗ ಬದ್ಧವಾಗಿ ಆಡಳಿತ ನಡೆಸುತ್ತಿಲ್ಲ. ಆದ್ದರಿಂದ ಕೂಡಲೇ ಮಧ್ಯಪ್ರವೇಶಿಸಿ ರಾಜ್ಯ ಉಳಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಆ ಪಕ್ಷದ ಶಾಸಕರು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರನ್ನು ಶುಕ್ರವಾರ ಭೇಟಿ ಮಾಡಿ ದಾಖಲೆಗಳ ಸಮೇತ 29 ಪುಟಗಳ ಮನವಿ ಪತ್ರ ಸಲ್ಲಿಸಿದರು. ಪ್ರೇರಣಾ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್‌ಗೆ ಸೌತ್‌ವೆಸ್ಟ್ ಮೈನಿಂಗ್ ಲಿಮಿಟೆಡ್, ಆದರ್ಶ ಡೆವಲಪರ್ಸ್‌ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಬಂದಿರುವ ದೇಣಿಗೆ, ಆ ಸಂಸ್ಥೆಗಳ ಹಿನ್ನೆಲೆಯುಳ್ಳ ವಿವರಗಳು ಮನವಿ ಪತ್ರದಲ್ಲಿವೆ.

‘ದೇಣಿಗೆ ಪ್ರಕರಣ ಕುರಿತು ಸಿಬಿಐ ತನಿಖೆ ಆಗಬೇಕು ಎಂಬ ನಮ್ಮ ಪಕ್ಷದ ನಿಲುವಿನಲ್ಲಿ ಬದಲಾವಣೆ ಇಲ್ಲ. ಇಷ್ಟೊಂದು ಭ್ರಷ್ಟಾಚಾರ ನಡೆದಿದ್ದರೂ ಯಡಿಯೂರಪ್ಪ ಅಧಿಕಾರದಲ್ಲಿ ಮುಂದುವರಿದಿರುವುದು ನಾಚಿಕೆಗೇಡಿನ ಸಂಗತಿ. ಭ್ರಷ್ಟ ಸರ್ಕಾರದ ವಿರುದ್ಧ ಹೋರಾಟ ಮುಂದುವರಿಯಲಿದೆ’ ಎಂದು ರೇವಣ್ಣ ಹೇಳಿದರು.

ರಾಷ್ಟ್ರಪತಿಗೆ ದೂರು: ‘ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರೊಂದಿಗೆ ಸಮಾಲೋಚನೆ ನಡೆಸಿ ದಿನಾಂಕ ನಿಗದಿಪಡಿಸಿದ ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ದೂರು ನೀಡಲಾಗುವುದು. ಈ ವಿಷಯವನ್ನು ಇಷ್ಟಕ್ಕೆ ಬಿಡುವುದಿಲ್ಲ. ಹೋರಾಟವನ್ನು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ವಿಧಾನ ಪರಿಷತ್‌ನ ಜೆಡಿಎಸ್ ಗುಂಪಿನ ನಾಯಕ ಎಂ.ಸಿ.ನಾಣಯ್ಯ ಹೇಳಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.