ADVERTISEMENT

ರಾಯಚೂರು ಕೃಷಿ ವಿಶ್ವವಿದ್ಯಾಲಯ ಮೇಲ್ಪಂಕ್ತಿ:ಮಲ್ಲೇಶಗೌಡರಿಗೆ ರೈತ ವಿಜ್ಞಾನಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ರಾಯಚೂರು: ಸ್ವಯಂ ಕೃಷಿಕರಾಗಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಅಳವಡಿಸಿಕೊಂಡು ರೈತ ಸಮುದಾಯಕ್ಕೆ ಮಾದರಿಯಾದ ರೈತರು ಕೃಷಿ ವಿವಿಯ ವಿಜ್ಞಾನಿಗಳಷ್ಟೇ ಸರಿಸಮಾನರು ಎಂದು ಭಾವಿಸಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು, `ರೈತ ವಿಜ್ಞಾನಿ~ ಪ್ರಶಸ್ತಿಯೊಂದಿಗೆ 50 ಸಾವಿರ ನಗದು ಪುರಸ್ಕಾರ ಪ್ರಶಸ್ತಿಯನ್ನು ಭಾನುವಾರ ಲಿಂಗಸುಗೂರು ತಾಲ್ಲೂಕು ಮಟ್ಟೂರು ಗ್ರಾಮದ ರೈತ ಮಲ್ಲೇಶಗೌಡ ಪಾಟೀಲ್ ಅವರಿಗೆ  ಘಟಿಕೋತ್ಸವದಲ್ಲಿ ಪ್ರದಾನ ಮಾಡಿತು.

ದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ  ಡಾ. ಗುರುಬಚನ್‌ಸಿಂಗ್ ಹಾಗೂ ಕೃಷಿ ವಿವಿ ಕುಲಪತಿ ಡಾ.ಬಿ.ವಿ. ಪಾಟೀಲ್ ಪ್ರಶಸ್ತಿ ಪ್ರದಾನ ಮಾಡಿದರು. ದೇಶದಲ್ಲಿಯೇ ಕೃಷಿ ವಿವಿಯೊಂದು ರೈತ ವಿಜ್ಞಾನಿ ಪ್ರಶಸ್ತಿಯನ್ನು ಘೋಷಣೆ ಮಾಡಿ ಪ್ರದಾನ ಮಾಡುತ್ತಿರುವುದು ಮೊದಲು ಎಂದು ಡಾ.ಬಿ.ವಿ. ಪಾಟೀಲ್  ಹೇಳಿದರು.

ಪುರಸ್ಕೃತರ ನುಡಿ: ರೈತ ಸಮುದಾಯ ಕ್ಕೆ ಸೂಕ್ತ ಮಾರ್ಗದರ್ಶನ ದೊರಕುತ್ತಿಲ್ಲ.ಆಸಕ್ತಿಯಿಂದ ತೊಡಗಿಸಿಕೊಂಡರೆ ಸಾಧನೆ ಸಾಧ್ಯವಿದೆ. ಕೃಷಿ ವಿಜ್ಞಾನಿಗಳೂ ರೈತರ ಹೊಲಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಬೇಕು. ಪೋಷಕಾಂಶ, ಭೂಚೇತನದಂಥ ಯೋಜನೆ, ತಾಂತ್ರಿಕ ಮಾಹಿತಿ ಕಲ್ಪಿಸಬೇಕು ಎಂದು ಮಲ್ಲೇಶಗೌಡ ಪಾಟೀಲ್ ಹೇಳಿದರು.

ಹಿಂದೆ ಗ್ರಾಮ ಸೇವಕರಿದ್ದಾಗ ಅನುಕೂಲವಿತ್ತು. ಈಗ ರೈತ ಸಂಪರ್ಕ ಕೇಂದ್ರ ಮಾಡಲಾಗಿದೆ. ಹೋಗಿ ಕೇಳಿದರೆ ಮಾತ್ರ ಮಾಹಿತಿ ದೊರಕುತ್ತದೆ. ಎಷ್ಟು ಜನ ರೈತರಿಗೆ ಹೋಗಿ ಕೇಳಲು ಸಾಧ್ಯ ಎಂದು ಪ್ರಶ್ನಿಸಿದರು.ಹಳ್ಳದ ಪಕ್ಕವೇ ಜಮೀನಿದ್ದು, 1 ಎಕರೆಯಲ್ಲಿ ಬೃಹತ್ ಕೆರೆ ನಿರ್ಮಿಸಲಾಗಿದೆ.  ಮಳೆಗಾಲದಲ್ಲಿ ಹಳ್ಳದಲ್ಲಿ ಹರಿಯುವ ನೀರನ್ನು ಕೆರೆಯಲ್ಲಿ ಸಂಗ್ರಹಿಸಲಾಗುತ್ತದೆ.

ಇದೇ ನೀರನ್ನು ನೀರಿನ ಕೊರತೆಯಿದ್ದಾಗ ಬಳಸಿಕೊಳ್ಳಲಾಗುತ್ತದೆ. ಅಂತರ್ಜಲ ಮಟ್ಟ ಸುಧಾರಣೆ ಕಂಡಿದೆ. ಗ್ರಾಮದ ಸುತ್ತಮುತ್ತ ಹಾಲು ಉತ್ಪಾದಕರ ಸಹಕಾರ ಸಂಘ ರಚಿಸಲಾಗಿದೆ. ಸಂಗ್ರಹವಾದ ಹಾಲನ್ನು ಪ್ಯಾಕೆಟ್ ಮೂಲಕ ಮಾರಾಟ ವ್ಯವಸ್ಥೆ ಮಾಡಿದ್ದೇವೆ ಎಂದು ವಿವರಿಸಿದರು.

ಒಣ ಬೇಸಾಯ ಹೊಂದಿದವರು ಕೃಷಿ ತಜ್ಞರ ಮಾರ್ಗದರ್ಶನದೊಂದಿಗೆ ಭೂಮಿ ಸಮತಟ್ಟು ಮಾಡಿಕೊಂಡು ಮಳೆ ನೀರು ಸದ್ಬಳಕೆ ಮಾಡಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.