ADVERTISEMENT

ರಾಸಲೀಲೆ ನಕಲಿ ಸಿ.ಡಿ.: ರಾಜಕಾರಣಿಗಳಿಂದ ನೂರು ಕೋಟಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2011, 16:45 IST
Last Updated 1 ಫೆಬ್ರುವರಿ 2011, 16:45 IST

ರಾಮನಗರ: ”ಕೆಲವು ಪ್ರಭಾವಿ ರಾಜಕಾರಣಿಗಳು ನೂರು ಕೋಟಿ ರೂಪಾಯಿ ಕೊಡುವಂತೆ ನನಗೆ ಪೀಡಿಸಿದರು. ನಾನು ನಿರಾಕರಿಸಿದಾಗ ನನ್ನ ವಿರುದ್ಧ ನಕಲಿ ಸಿ.ಡಿ. ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದರು” ಎಂದು ಬಿಡದಿ ಬಳಿಯ ಧ್ಯಾನಪೀಠ ಆಶ್ರಮದ ನಿತ್ಯಾನಂದ ಸ್ವಾಮೀಜಿ ಆರೋಪಿಸಿದರು.

ರಾಸಲೀಲೆ ಹಗರಣದ ನಂತರ ಇದೇ ಮೊದಲಬಾರಿಗೆ ಮಂಗಳವಾರ ಬಿಡದಿ ಆಶ್ರಮದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ವಿವರಗಳನ್ನೂ ಬಹಿರಂಗಗೊಳಿಸಿದ ನಿತ್ಯಾನಂದ ಸ್ವಾಮೀಜಿ, “ಕೆಲ ಪ್ರಭಾವಿ ರಾಜಕಾರಣಿಗಳಿಂದ ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿವೆ. 100 ಕೋಟಿ ಇಲ್ಲವಾದರೆ 60 ಕೋಟಿಯನ್ನಾದರೂ ಕೊಡಿ ಎಂದು ಬೇಡಿಕೆ ಒಡ್ಡಿದರು. ಈ ಎಲ್ಲ ಅಂಶಗಳ ಕುರಿತ ದಾಖಲೆ ಮತ್ತು ಆಧಾರ ನನ್ನ ಬಳಿ ಇದೆ’ ಎಂದರು.

‘ರಾಸಲೀಲೆ’ ಪ್ರಕರಣಕ್ಕೆ ಸಿಲುಕಿ ಬಂಧನಕ್ಕೆ ಒಳಗಾಗಿ, ನಂತರ ಜಾಮೀನಿನ ಮೇಲೆ ಹೊರಬಂದಿರುವ ನಿತ್ಯಾನಂದ ಸ್ವಾಮೀಜಿ ಅವರು ಎಂಟರಿಂದ-ಒಂಬತ್ತು ತಿಂಗಳ ನಂತರ ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ರಾಸಲೀಲೆ ಹಗರಣದ ಬಗ್ಗೆ ವಿವರಿಸಿದ ಸ್ವಾಮೀಜಿ, ”ಸಿ.ಡಿ.ಯಲ್ಲಿ ಇರುವುದು ನಾನಲ್ಲ, ಅದು ನಕಲಿ ಸಿ.ಡಿ; ಭಕ್ತರ ಮನಸ್ಸನ್ನು ವಶೀಕರಿಸುವ (ಹಿಪ್ನೋಟಿಸಂ) ಕಾರ್ಯ ಮಾಡಿಲ್ಲ; ತಾಂತ್ರಿಕ ಸೆಕ್ಸ್ ಎಂಬುದೆಲ್ಲ ಬರೀ ಸುಳ್ಳು; ಪ್ರಭಾವಿ ವ್ಯಕ್ತಿಗಳಿಂದ ಬೆದರಿಕೆ ಕರೆಗಳು- ನೂರಾರು ಕೋಟಿಗೆ ಬೇಡಿಕೆ; ಧರ್ಮ ಮತ್ತು ಅಧ್ಯಾತ್ಮದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ವಿರೋಧಿಸಿ ಕನ್ಯಾಕುಮಾರಿಯಿಂದ ಬೀದರ್‌ವರೆಗೆ ಪಾದಯಾತ್ರೆ; ನ್ಯಾಯಕ್ಕಾಗಿ ಲಕ್ಷಾಂತರ ಭಕ್ತರು ತಮ್ಮ ರಕ್ತದಲ್ಲಿ ಮಾಡಿದ ಸಹಿ ಮತ್ತು ಹೆಬ್ಬೆಟ್ಟಿನ ಗುರುತಿನ ಪತ್ರ ಹೊಂದಿದ ಮನವಿ ಪತ್ರ ರಾಷ್ಟ್ರಪತಿ, ಪ್ರಧಾನಿಗೆ ರವಾನಿಸಲಾಗುವುದು” ಎಂದರು.

‘ನಾನು ಯಾವುದೇ ಕಾನೂನು ಬಾಹಿರ ಕೃತ್ಯ ಮಾಡಿಲ್ಲ. ಆದರೆ ನನ್ನ ವಿರುದ್ಧ ಕಾನೂನು ಬಾಹಿರವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ನಾನು ಯಾವುದೇ ರೀತಿಯಲ್ಲಿಯೂ ಭಕ್ತರ ಮನಸ್ಸನ್ನು ವಶೀಕರಣ ಮಾಡಿಲ್ಲ. ಹಾಗೆ ಮಾಡುವುದಕ್ಕೆ ಸಾಧ್ಯವೂ ಇಲ್ಲ’ ಎಂದು ಅವರು ಹೇಳಿದರು.

‘ಆದಾಗ್ಯೂ ಇಲ್ಲಿಯವರೆಗೆ ಯಾರೊಬ್ಬರು ನನ್ನಿಂದ ಶೋಷಣೆಯಾಗಿದೆ ಅಥವಾ ಮೋಸ ಹೋಗಿದ್ದೇನೆ ಎಂದು ದೂರು ದಾಖಲಿಸಿಲ್ಲ. ಹಾಗಿದ್ದರೂ ನನ್ನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು ತಪ್ಪು. ಇದು ಕಾನೂನು ಬಾಹಿರ ಕೃತ್ಯ. ದೇಶದ ಇತಿಹಾಸದಲ್ಲಿಯೇ ಇಂತಹ ಪ್ರಕರಣ ನಡೆದಿರಲಿಲ್ಲ. ಇದರಿಂದ ದೇಶದಲ್ಲಿ ಸಂವಿಧಾನ ಬದ್ಧ ಆಡಳಿತ ನಡೆಯುತ್ತಿದೆಯೋ ಇಲ್ಲವೋ ಎಂಬ ಅನುಮಾನ ಮೂಡಿದೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ಸಿ.ಡಿ ಅಸಲಿಯಲ್ಲ’ : ‘ರಾಸಲೀಲೆ’ ಸಿ.ಡಿಯಲ್ಲಿ ಇರುವವನು ನಾನಲ್ಲ. ಅದು ನಕಲಿ ಸಿ.ಡಿ. ಎಂದು ನಿತ್ಯಾನಂದ ಸ್ವಾಮೀಜಿ ಹೇಳಿದರು. ಪ್ರಸ್ತುತ ಹೈದರಾಬಾದ್‌ನ ಪ್ರಯೋಗಾಲಯ ಈ ಸಿ.ಡಿಯನ್ನು ಅಸಲಿ ಎಂದು ಹೇಳಿದೆ. ಆದರೆ ಚಿತ್ರೀಕರಣದಲ್ಲಿ ಇರುವ ಸಾಕಷ್ಟು ತಾಂತ್ರಿಕ ಲೋಪಗಳನ್ನು ನಾವು ಗಮನಿಸಿದ್ದೇವೆ. ಹಾಗಾಗಿ ಅದರ ಸತ್ಯಾಸತ್ಯತೆ ಪರಿಶೀಲನೆಗೆ ವೀಡಿಯೊ ತುಣುಕುಗಳನ್ನು ಅಮೆರಿಕದ ತಜ್ಞರ ಬಳಿ ಕಳುಹಿಸಲಾಗಿದೆ. 45 ದಿನಗಳಲ್ಲಿ ಅದರ ಸತ್ಯಾಸತ್ಯತೆ ಬಹಿರಂಗವಾಗಲಿದೆ’ ಎಂದು ತಿಳಿಸಿದರು.

‘ಅಷ್ಟಕ್ಕೂ ಸಿಓಡಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ‘ರಾಸಲೀಲೆ’ ಸಿ.ಡಿಯನ್ನು ಸಾಕ್ಷಿ ಎಂದು ಪರಿಗಣಿಸಿಲ್ಲ. ಏಕೆಂದರೆ ಅವರಿಗೂ ಅದು ಅಸಲಿ ಎಂಬುದರ ಬಗ್ಗೆ ಅನುಮಾನ ಇದೆ. ಒಂದು ವೇಳೆ ಸಿಓಡಿ ಪೊಲೀಸರು ಈ ನಕಲಿ ಸಿ.ಡಿಯನ್ನು ಸಾಕ್ಷಿ ಎಂದು ಪರಿಗಣಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರೆ ಆಗ ನಾವು ಈ ಸಿ.ಡಿ.ಯ ಚಿತ್ರೀಕರಣ ಕುರಿತು ಅಮೆರಿಕ ತಜ್ಞರು ನೀಡುವ ಅಭಿಪ್ರಾಯದ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ’ ಎಂದು ಹೇಳಿದರು.

ಭಕ್ತರಿಂದ ರಕ್ತ ಸಹಿ ಆಂದೋಲನ:
‘ಧರ್ಮ, ಅಧ್ಯಾತ್ಮ ಹಾಗೂ ನನಗೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಿ ಮತ್ತು ನ್ಯಾಯಕ್ಕಾಗಿ ಒತ್ತಾಯಿಸಿ ಆಶ್ರಮದ ಲಕ್ಷಾಂತರ ಭಕ್ತರು ತಮ್ಮ ರಕ್ತದಿಂದ ಮಾಡಿದ ಸಹಿ ಮತ್ತು ಹೆಬ್ಬೆಟ್ಟು ಗುರುತು ಹೊಂದಿರುವ ಮನವಿ ಪತ್ರಗಳನ್ನು ರಾಷ್ಟ್ರಪತಿ, ಪ್ರಧಾನಿ ಹಾಗೂ ಕರ್ನಾಟಕ, ತಮಿಳುಾಡಿನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗೆ ಸಲ್ಲಿಸಲಾಗುತ್ತದೆ. ಆ ಮೂಲಕ ಧರ್ಮ ಹಾಗೂ ಅಧ್ಯಾತ್ಮದ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ತಡೆಯುವಂತೆ ಕೋರಲಾಗುವುದು’ ಎಂದು ಅವರು ಹೇಳಿದರು. ಅಷ್ಟೇ ಅಲ್ಲ, ಈ ಸಂಬಂಧ ನ್ಯಾಯಕ್ಕಾಗಿ ಒತ್ತಾಯಿಸಿ ಕನ್ಯಾಕುಮಾರಿಯಿಂದ ಬೀದರ್‌ವರೆಗೂ ಪಾದಯಾತ್ರೆ ಕೈಗೊಳ್ಳುವ ಉದ್ದೇಶವೂ ಇದೆ ಎಂದರು.

‘ಕೆಲ ಮಾಧ್ಯಮಗಳಲ್ಲಿ ನನ್ನನ್ನು ನಪುಂಸಕ ಎಂದು ಬಿಂಬಿಸಿ ವರದಿಗಳು ಬಂದಿದ್ದವು. ಆದರೆ ನಾನು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ  ಸದೃಢನಾಗಿದ್ದೇನೆ. ಹಾಗಾಗಿ ಇದರಲ್ಲಿ ನಪುಂಸಕತ್ವದ ಪ್ರಶ್ನೆ ಬರುವುದಿಲ್ಲ. ಒಂದು ವೇಳೆ ನಾನು ನಪುಂಸಕನಾಗಿದ್ದರೂ ಅದಕ್ಕೆ ಮುಜುಗರ ಪಡುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಆಶ್ರಮದಲ್ಲಿ ಯಾವುದೇ ರೀತಿಯ ತಾಂತ್ರಿಕ ಸೆಕ್ಸ್ ನಡೆಯುತ್ತಿಲ್ಲ. ಇದೆಲ್ಲ ಬರೀ ಸುಳ್ಳು. ಅಂತಹ ಯಾವುದೇ ಚಟುವಟಿಕೆ, ಒಡಂಬಡಿಕೆಯನ್ನು ಭಕ್ತರ ಜತೆ ಆಶ್ರಮ ಮಾಡಿಕೊಂಡಿಲ್ಲ’ ಎಂದು ಅವರು ಉತ್ತರಿಸಿದರು.

ಬಿಡದಿಯ ಆಶ್ರಮದಲ್ಲಿ ಮುಂದಿನ 6 ತಿಂಗಳಲ್ಲಿ 100 ಹಾಸಿಗೆಯ ಆಸ್ಪತ್ರೆ ನಿರ್ಮಾಣವಾಗಲಿದೆ. ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಯೋಜನೆ ಜಾರಿಗೊಳಿಸುವ ಸಂಬಂಧ ಮಾತುಕತೆ ನಡೆಯುತ್ತಿದೆ. ಆರೋಗ್ಯ ಶಿಬಿರಗಳಿಗೆ ಪುನಃ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು. ವೈದ್ಯ ಡಾ. ಕೃಷ್ಣಶಾಮರಾವ್ ಹಾಗೂ ವಕೀಲ ಕೆ.ವಿ.ಧನಂಜಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.