ADVERTISEMENT

ರೂಪಾಯಿ ಅಪಮೌಲ್ಯ: ಗ್ರಾಹಕರಿಗೆ ಹೊರೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2013, 11:24 IST
Last Updated 21 ಜೂನ್ 2013, 11:24 IST

ಬೆಂಗಳೂರು (ಪಿಟಿಐ): ಡಾಲರ್ ಎದುರು ರೂಪಾಯಿ ಮೌಲ್ಯವು ಸತತವಾಗಿ ಅಪಮೌಲ್ಯ ಆಗುತ್ತಿರುವುದರಿಂದ  ಎಲ್ಲ ವರ್ಗದ ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಟನೆ (ಅಸೋಚಾಂ) ಅಭಿಪ್ರಾಯಪಟ್ಟಿದೆ.

ಒಂದೆಡೆ ಹಣದುಬ್ಬರ, ಇನ್ನೊಂದೆಡೆ ರೂಪಾಯಿ ಮೌಲ್ಯ ಕುಸಿತ. ಇದರ ಪರಿಣಾಮವಾಗಿ ಆಹಾರ ಪದಾರ್ಥ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಧಾರಣೆಯಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ  ಎಲ್ಲ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ ಎಂದು `ಅಸೋಚಾಂ' ಗುರುವಾರ ಬಿಡುಗಡೆ ಮಾಡಿದ ಸಮೀಕ್ಷಾ ವರದಿಯಲ್ಲಿ ಹೇಳಿದೆ.

ಇದು ಎಲ್ಲ ವರ್ಗದ ಜೀವನಶೈಲಿ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ವಾರಾಂತ್ಯ ಪ್ರವಾಸ, ಎಲೆಕ್ಟ್ರಾನಿಕ್ ಮತ್ತಿತರ ಐಷಾರಾಮಿ ವಸ್ತುಗಳ ಖರೀದಿಯಲ್ಲಿನ ಆಸಕ್ತಿ ಕಡಿಮೆ ಆಗುವಂತೆ ಮಾಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಿರುದ್ಧ ರೂಪಾಯಿ ಬೆಲೆ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ (ರೂ 59.57) ಕುಸಿದಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳು, ಖಾಧ್ಯತೈಲ ಮೊದಲಾದ ಸಾಮಗ್ರಿಗಳ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ.

ರೂಪಾಯಿ ಮೌಲ್ಯ ಕುಸಿತದಿಂದಾಗಿ ಗ್ರಾಮೀಣ ಭಾಗ, ಪಟ್ಟಣಗಳು ಮತ್ತು 3ನೇ ಶ್ರೇಣಿ ನಗರ ಪ್ರದೇಶಗಳಿಗೆ ಹೋಲಿಸಿದರೆ ಮಹಾನಗರ, ದೊಡ್ಡ ನಗರಗಳಲ್ಲಿನ ಗ್ರಾಹಕರ ಮೇಲೆ ತೀವ್ರ ಪರಿಣಾಮ ಬೀರಿದೆ. ರೂಪಾಯಿಯ ಈಗಿನ ದುಃಸ್ಥಿತಿಯಿಂದಾಗಿ ಜೀವನ ನಿರ್ವಹಣೆಗೆ ದೊಡ್ಡ ಹೊಡೆತವೇ ಬಿದ್ದಿದೆ. ಸಮೀಕ್ಷೆ ವೇಳೆ ಪ್ರತ್ರಿಕಿಯಿಸಿದವರಲ್ಲಿ ಶೇ 92ರಷ್ಟು ಮಂದಿ, `ಕಳೆದೊಂದು ತಿಂಗಳಲ್ಲಿ ಕುಟುಂಬದ ಮಾಸಿಕ ವೆಚ್ಚ ಶೇ 15ರಿಂದ ಶೇ 20ರಷ್ಟು ಹೆಚ್ಚಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿ ಗಮನ ಸೆಳೆದಿದೆ.

ರೂಪಾಯಿ ವಿರುದ್ಧ ಡಾಲರ್ ಬಲಿಷ್ಠವಾಗುತ್ತಲೇ ಇರುವುದರಿಂದ ಕಚ್ಚಾತಾಳೆ ಎಣ್ಣೆ ಆಮದು ಬಹಳ ದುಬಾರಿಯಾಗಿದೆ. ಇದರಿಂದಾಗಿ ಇತರೆ ಖಾಧ್ಯ ತೈಲಗಳ ಬೆಲೆಯಲ್ಲೂ ಗಣನೀಯ ಏರಿಕೆಯಾಗಿದೆ.

ದೆಹಲಿ ರಾಷ್ಟ್ರೀಯ ರಾಜಧಾನಿ ವಲಯ (ಎನ್‌ಸಿಆರ್), ಮುಂಬೈ, ಕೋಲ್ಕತ್ತ, ಚೆನ್ನೈ, ಅಹಮದಾಬಾದ್, ಹೈದರಾಬಾದ್, ಪುಣೆ, ಚಂಡೀಗಡ, ಡೆಹ್ರಾಡೂನ್ ಮತ್ತಿತರ ನಗರ, ಪಟ್ಟಣಗಳಲ್ಲಿ `ಅಸೋಚಾಂ' ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಸಮೀಕ್ಷೆಗೆ ಪ್ರತಿಕ್ರಿಯಿಸಿದವರಲ್ಲಿ ಶೇ 55 ಮಂದಿ 20ರಿಂದ 29 ವರ್ಷ ವಯೋಮಿತಿಯವರು. 30-39 ವರ್ಷದವರು ಶೇ 26ರಷ್ಟು, 40-49 ವಯೋಮಿತಿಯವರು ಶೇ 16ರಷ್ಟು, 50-59ವರ್ಷದವರು ಶೇ 2ರಷ್ಟು ಮಂದಿ ಇದ್ದಾರೆ ಎಂದು `ಅಸೋಚಾಂ' ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.