ADVERTISEMENT

`ರೂ 20 ವಿಮೆಯಿಂದ ಉತ್ತಮ ವೈದ್ಯಕೀಯ ಸೇವೆ ಸಾಧ್ಯ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:59 IST
Last Updated 17 ಡಿಸೆಂಬರ್ 2012, 19:59 IST

ವಿಜಾಪುರ: `ಭಾರತದಲ್ಲಿ 90 ಕೋಟಿ ಮೊಬೈಲ್ ಬಳಕೆದಾರರಿದ್ದು, ಅವರು ಮಾಸಿಕ ಕನಿಷ್ಠ 150 ರೂಪಾಯಿಯನ್ನು ಮೊಬೈಲ್ ಬಳಕೆಗೆ ವ್ಯಯ ಮಾಡುತ್ತಾರೆ. ಪ್ರತಿ ಚಂದಾದಾರರಿಂದ ಮಾಸಿಕ 20 ರೂಪಾಯಿ ಪಡೆದು ಆರೋಗ್ಯ ವಿಮೆ ಮಾಡಿಸಿದರೆ ಭಾರತೀಯರಿಗೆ ಜಗತ್ತಿನ ಎಲ್ಲ ದೇಶಗಳಿಗಿಂತ ಉತ್ತಮ ವೈದ್ಯಕೀಯ ಸೇವೆ ನೀಡಲು ಸಾಧ್ಯ' ಎಂದು ಬೆಂಗಳೂರಿನ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಸೋಮವಾರ ನಡೆದ ಸ್ಥಳೀಯ ಬಿ.ಎಲ್.ಡಿ.ಇ. ಡೀಮ್ಡ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, `2020ರ ಹೊತ್ತಿಗೆ ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗುವತ್ತ ದಾಪುಗಾಲು ಹಾಕುತ್ತಿದೆ. ಶ್ರೀಮಂತರ ಸೊತ್ತು ಎಂಬಂತಿರುವ ಹೈಟೆಕ್ ಆರೋಗ್ಯ ಸೇವೆಯನ್ನು ಕಡುಬಡವರಿಗೂ ತಲುಪಿಸದ ಹೊರತು ನಮ್ಮದು ಶಕ್ತಿಶಾಲಿ ದೇಶವಾಗಲು ಸಾಧ್ಯವಿಲ್ಲ' ಎಂದರು.

`ಮನುಷ್ಯನ ಆರೋಗ್ಯ, ಆಯುಷ್ಯವನ್ನು ಹಣದಿಂದ ಅಳೆಯುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ನಮ್ಮ ಸರ್ಕಾರಗಳು ಒಟ್ಟು ಜಿ.ಡಿ.ಪಿ.ಯ ಶೇ1.2ರಷ್ಟು ಹಣವನ್ನು ಮಾತ್ರ ಆರೋಗ್ಯ ಕ್ಷೇತ್ರಕ್ಕೆ ವ್ಯಯಿಸುತ್ತಿದ್ದು, ಇದು ಜಗತ್ತಿನ ಎಲ್ಲ ರಾಷ್ಟ್ರಗಳಿಗಿಂತ ಕಡಿಮೆ' ಎಂದು ವಿಷಾದಿಸಿದರು.

`ಐ.ಟಿ. ಕಂಪೆನಿಗಳಿಗೆ ಪುಕ್ಕಟೆಯಾಗಿ ಭೂಮಿ, ತೆರಿಗೆ ರಿಯಾಯಿತಿ ನೀಡಿ ಕೆಂಪು ಹಾಸಿಗೆ ಹಾಸಿ ಸ್ವಾಗತಿಸುವ ನಾವು, ಆರೋಗ್ಯ ಕ್ಷೇತ್ರದ ಕುರಿತು ಕಾಳಜಿ ವಹಿಸುತ್ತಿಲ್ಲ. ಒಂದು ಕೋಟಿ ರೂಪಾಯಿ ಬಂಡವಾಳವನ್ನು ಐ.ಟಿ. ಕ್ಷೇತ್ರದಲ್ಲಿ ಹೂಡಿದರೆ 100 ಜನ ಉದ್ಯೋಗಿಗಳು ಮಾತ್ರ ಕೆಲಸ ಮಾಡಬಲ್ಲರು. ಆದರೆ, ಆರೋಗ್ಯ ಕ್ಷೇತ್ರದಲ್ಲಿ 250 ಜನರಿಗೆ ಉದ್ಯೋಗ ದೊರೆಯುತ್ತದೆ' ಎಂದರು.

ಮೈಸೂರು ಆಸ್ಪತ್ರೆ ಸಿದ್ಧ: ಮೈಸೂರಿನಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ 300 ಹಾಸಿಗೆಗಳ ಹೃದ್ರೋಗ ಆಸ್ಪತ್ರೆಯ ಕಟ್ಟಡ ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ ಸೇವೆಗೆ ಲಭ್ಯವಾಗಲಿದೆ ಎಂದು ಡಾ.  ಶೆಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.