ADVERTISEMENT

ರೈತರ ಸಮಸ್ಯೆ: ಟೆಕ್‌ಪೀಡಿಯಾದಲ್ಲಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2012, 19:30 IST
Last Updated 20 ಜನವರಿ 2012, 19:30 IST

ಬೆಂಗಳೂರು: ನಾಡಿನ ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ಸೂಚಿಸಬಲ್ಲ ಒಂದು ಲಕ್ಷಕ್ಕೂ ಹೆಚ್ಚಿನ ತಾಂತ್ರಿಕ ಆವಿಷ್ಕಾರಗಳ ಮಾಹಿತಿ ಟೆಕ್‌ಪೀಡಿಯಾ ((www.techpedia.in) ವೆಬ್‌ಸೈಟ್‌ನಲ್ಲಿ ದೊರೆಯುತ್ತಿದೆ.

ಇಲ್ಲಿ ವಿವರಿಸಲಾದ ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು. ಇದಕ್ಕೆ ಯಾರ ಪೂರ್ವಾನುಮತಿಯೂ ಬೇಕಿಲ್ಲ ಎಂದು ಅಹಮದಾಬಾದ್‌ನ `ಭಾರತೀಯ ಆಡಳಿತ ನಿರ್ವಹಣಾ ಸಂಸ್ಥೆ~ಯ (ಐಐಎಂ-ಎ) ಪ್ರೊ. ಅನಿಲ್ ಗುಪ್ತ ಹೇಳಿದರು.

ವಿಕಾಸಸೌಧದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ `ಗ್ರಾಮೀಣಾಭಿವೃದ್ಧಿ, ಕೃಷಿ, ಆಡಳಿತ ವಿಷಯದಲ್ಲಿ ಅವಿಷ್ಕಾರಗಳು~ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, `ದೇಶದ 500ಕ್ಕೂ ಹೆಚ್ಚಿನ ತಾಂತ್ರಿಕ ಕಾಲೇಜುಗಳ ಮೂರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಅನುಕೂಲವಾಗಬಲ್ಲ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ. ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸೇವೆಯನ್ನು ಕೃಷಿಯಂತಹ ಅಸಂಘಟಿತ ವಲಯದ ಅಭಿವೃದ್ಧಿಗಾಗಿ ಬಳಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.

`ಗ್ರಾಮೀಣ ಭಾರತ ಎದುರಿಸುತ್ತಿರುವ ಅನೇಕ ಸವಾಲುಗಳಿಗೆ ರೈತ ಸಮುದಾಯದಲ್ಲೇ ಪರಿಹಾರ ಇದೆ~ ಎಂದ ಅವರು, `ಟೆಕ್‌ಪೀಡಿಯಾ ವೆಬ್‌ಸೈಟ್‌ನಲ್ಲಿರುವ ಮಾಹಿತಿಯನ್ನು ಕನ್ನಡಕ್ಕೆ ಅನುವಾದಿಸಬೇಕು. ಇದರಿಂದ ನಾಡಿನ ಎಲ್ಲ ರೈತರಿಗೂ ಅನುಕೂಲವಾಗುತ್ತದೆ~ ಎಂದು ಸರ್ಕಾರಕ್ಕೆ ಸಲಹೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರು, `ಇಲ್ಲಿಯವರೆಗೆ ನಾಡಿನ ಕೈಗಾರಿಕಾ ಕ್ಷೇತ್ರಕ್ಕೆ ಅನುಕೂಲವಾಗುವಂತಹ ಆವಿಷ್ಕಾರಗಳನ್ನು ಅಭಿವೃದ್ಧಿಪಡಿಸಿದ್ದಾಯಿತು. ಇನ್ನಾದರೂ ಕೃಷಿ ಕ್ಷೇತ್ರ ಕುರಿತು ಗಮಹರಿಸಬೇಕು~ ಎಂದರು.

ಹೊಸ ಆವಿಷ್ಕಾರಗಳತ್ತ ಮುಖ ಮಾಡುವ ಪ್ರವೃತ್ತಿ ದೇಶದಲ್ಲಿ ಇನ್ನೂ ಬಾಲ್ಯಾವಸ್ಥೆಯಲ್ಲೇ ಇದೆ. ಪ್ರೊ. ಗುಪ್ತ ನೀಡಿರುವ ಸಲಹೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ಜೈರಾಜ್ ಭರವಸೆ ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.