ADVERTISEMENT

ಲಾರಿ- ಗ್ಯಾಸ್ ಟ್ಯಾಂಕರ್ ಡಿಕ್ಕಿ: ಐವರ ಸಾವು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಸಿಂಗಾಪುರ ಬಳಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಲಾರಿ ಹಾಗೂ ಗ್ಯಾಸ್ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಐವರು ಮೃತಪಟ್ಟು ಮೂವರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ.

ಮಂಗಳೂರಿನಿಂದ ಹಾಸನಕ್ಕೆ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಹಾಗೂ ಹಾಸನದಿಂದ ಆಲೂರು ಸಮೀಪದ ಪಾಳ್ಯಗೆ ಹೋಗುತ್ತಿದ್ದ ಲಾರಿ  ಶಂಖತೀರ್ಥ ಸೇತುವೆ ಬಳಿ  ಡಿಕ್ಕಿಯಾಗಿವೆ. ಎರಡೂ ವಾಹನಗಳ ಚಾಲಕರು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಇವರನ್ನು ಅಲೂರು ತಾಲ್ಲೂಕಿನ ಪಾಳ್ಯದ ಮಧು, ಗುಂಡ ಅಲಿಯಾಸ್ ಅಣ್ಣಾಜಿ, ಸ್ವಾಮಿ, ಗಿರೀಶ್  ಹಾಗೂ ಮಶೇಖರ್ ಎಂದು ಗುರುತಿಸಲಾಗಿದೆ. ಆದರೆ ಇವರಲ್ಲಿ ಚಾಲಕರು ಯಾರು ಎಂಬುದು ಖಚಿತವಾಗಿಲ್ಲ. ಗಾಯಗೊಂಡಿರುವ ಪಾಳ್ಯದ ಆನಂದ್, ಶ್ರೀಧರ ಹಾಗೂ ದಶರಥ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ.

ADVERTISEMENT

ಅಪಘಾತದ ರಭಸಕ್ಕೆ ಲಾರಿ ಮತ್ತು ಟ್ಯಾಂಕರ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಅಪಘಾತದಿಂದಾಗಿ ಹೆದ್ದಾರಿಯಲ್ಲಿ ಎರಡು ಗಂಟೆ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಹೆದ್ದಾರಿಯ ಎರಡು ಬದಿಯಲ್ಲಿ ಒಂದು ಕಿಲೋಮೀಟರ್‌ವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಗ್ಯಾಸ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಆಗಿಲ್ಲ. ವಿಷಯ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್‌ಸಿಂಗ್ ಮತ್ತು ಸಿಬ್ಬಂದಿ  ಸ್ಥಳಕ್ಕೆ ಆಗಮಿಸಿ ರಸ್ತೆಗೆ ಅಡ್ಡಲಾಗಿ ಬಿದಿದ್ದ ಗ್ಯಾಸ್ ಟ್ಯಾಂಕರ್ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.