ADVERTISEMENT

ಲಿಂಗಪತ್ತೆ ಕೇಂದ್ರಗಳ ಪತ್ತೆಗೆ ಮಾರುವೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 20:15 IST
Last Updated 11 ಜನವರಿ 2014, 20:15 IST

ಧಾರವಾಡ: ‘ರಾಜ್ಯದ ಖಾಸಗಿ ಆಸ್ಪತ್ರೆಗಳು ಸೋನೊಗ್ರಫಿ ಯಂತ್ರವನ್ನು ಭ್ರೂಣ ಲಿಂಗಪತ್ತೆಗೆ ಬಳಸಿಕೊಳ್ಳು­ವು­ದನ್ನು ಕಂಡು ಹಿಡಿಯುವ ಸಲುವಾಗಿ ಮಾರುವೇಷದ ಕಾರ್ಯಾಚರಣೆ ಆರಂಭಿ­ಸಿದ್ದೇವೆ, ಅಂತಹ ಪ್ರಕರಣ ಕಂಡಬಂದ ಆಸ್ಪತ್ರೆಗಳನ್ನು ಮುಚ್ಚಿಸಿ, ವೈದ್ಯರ ವಿರುದ್ಧ ಕಾನೂನು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಭ್ರೂಣ ಲಿಂಗಪತ್ತೆ ನಿಷೇಧ ಕಾಯ್ದೆಯ ಅನ್ವಯ ರಚಿಸಿರುವ ಕೇಂದ್ರ ಮೇಲ್ವಿ­ಚಾರಣಾ ಸಮಿತಿ ಸದಸ್ಯೆ ಡಾ. ವರ್ಷಾ ದೇಶಪಾಂಡೆ ಎಚ್ಚರಿಕೆ ನೀಡಿದರು.

‘ಬೇಡದ ಮಗುವನ್ನು ಗರ್ಭಪಾತದ ಮೂಲಕ ತೆಗೆಸುವುದರಿಂದ ಲಿಂಗಾನು­ಪಾತ­ದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಇಂತಹ ಪ್ರವೃತ್ತಿ ರಾಜ್ಯದ ಮಂಡ್ಯ, ಗುಲ್ಬರ್ಗ, ವಿಜಾಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿದೆ. ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದಲೂ ಸಾಕಷ್ಟು ಜನ ಲಿಂಗಪತ್ತೆ ಮಾಡಿಸಿ­ಕೊಳ್ಳಲು ರಾಜ್ಯದ ವಿವಿಧ ಆಸ್ಪತ್ರೆಗಳಿಗೆ ಬರುತ್ತಾರೆ. ಗರ್ಭಪಾತ ಹೆಚ್ಚಾಗಲು ಸೋನೊಗ್ರಾಫಿಕ್‌ ಯಂತ್ರಗಳ ಕೊಡುಗೆ ಸಾಕಷ್ಟಿದ್ದು, ಕಾನೂನು ಬಾಹಿರ­ವಾಗಿದ್ದರೂ ಭ್ರೂಣದ ಲಿಂಗವನ್ನು ಪತ್ತೆ ಹಚ್ಚಲಾಗುತ್ತಿದೆ. ಇಂತಹ ಬೆಳವಣಿಗೆ­ಯನ್ನು ತಡೆಗಟ್ಟುವುದು ಪೊಲೀಸರ ಕೆಲಸವಲ್ಲ. ಅದು ಆರೋಗ್ಯ ಇಲಾಖೆಯ ಕೆಲಸ. ಆದರೆ, ರಾಜ್ಯದಲ್ಲಿ ಎರಡು ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಗಳ ರಚನೆಯೇ ಆಗಿಲ್ಲ. ಇದು, ಸರ್ಕಾರ ಈ ಕಾಯ್ದೆಯ ಬಗ್ಗೆ ಹೊಂದಿರುವ ನಿಷ್ಕಾಳಜಿಯನ್ನು ಎತ್ತಿ ತೋರಿಸುತ್ತದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.

‘ಸ್ಕ್ಯಾನಿಂಗ್‌ ಯಂತ್ರವನ್ನು ಬಳಸುವ ಆಸ್ಪತ್ರೆಗಳಿಂದ ₨ 25 ಸಾವಿರ ಪರ­ವಾನಗಿ ಶುಲ್ಕವನ್ನು ವಸೂಲಿ ಮಾಡ­ಲಾಗುತ್ತದೆ. ಈ ಶುಲ್ಕವನ್ನು ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸಬೇಕು ಎಂದು ಕಾನೂನಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಶುಲ್ಕದ ಲೆಕ್ಕಪತ್ರ ನಿರ್ವಹಿಸಲು ಪ್ರತ್ಯೇಕ ಬ್ಯಾಂಕ್‌ ಖಾತೆಯನ್ನೇ ತೆರೆಯಬೇಕೆಂದೂ ಹೇಳಲಾಗಿದೆ. ಆದರೆ, ಅದಾವುದೂ ಅನುಷ್ಠಾನಗೊಂಡಿಲ್ಲ. ಪರವಾನಗಿ ಶುಲ್ಕದ ಹಣ ಜಿಲ್ಲಾ ಆರೋಗ್ಯಾಧಿಕಾರಿಗಳ ಖಾತೆಯಲ್ಲಿಯೇ ಉಳಿದಿದೆ’ ಎಂದು ವಿಷಾದಿಸಿದರು.

ರಾಜ್ಯದಲ್ಲಿಯೇ ಕಡಿಮೆ ಶುಲ್ಕ
ಮಹಾರಾಷ್ಟ್ರ ಹಾಗೂ ಕೇರಳ­ಗಳಿಗೆ ಹೋಲಿಸಿದರೆ ಭ್ರೂಣ ಲಿಂಗ­ಪತ್ತೆ ಹಾಗೂ ಹೆಣ್ಣು ಭ್ರೂಣಹತ್ಯೆಗೆ ವೈದ್ಯರು ವಿಧಿಸುವ ಶುಲ್ಕ ರಾಜ್ಯ­ದಲ್ಲಿಯೇ ಅತ್ಯಂತ ಕಡಿಮೆ ಎಂಬ ಆಘಾತಕಾರಿ ಮಾಹಿತಿಯನ್ನು ಡಾ. ವರ್ಷಾ ನೀಡಿದರು.

ಮಹಾರಾಷ್ಟ್ರದಲ್ಲಿ ಲಿಂಗಪತ್ತೆಗೆ ₨ 40 ಸಾವಿರ ಹಾಗೂ ಭ್ರೂಣ­ಹತ್ಯೆಗೆ ₨ 80 ಸಾವಿರ ವಸೂಲು ಮಾಡುತ್ತಾರೆ. ಆದರೆ, ಬೆಳಗಾವಿ, ಗುಲ್ಬರ್ಗ, ವಿಜಾಪುರ, ಬಾಗಲ­ಕೋಟೆ ಜಿಲ್ಲೆಗಳಲ್ಲಿ ₨ 8 ಸಾವಿರ ನೀಡಿದರೆ, ಲಿಂಗಪತ್ತೆ ಹಾಗೂ ಭ್ರೂಣಹತ್ಯೆ ಎರಡನ್ನೂ ಮಾಡ­ಲಾಗುತ್ತಿದೆ. ಅದಕ್ಕಾಗಿಯೇ ಪಕ್ಕದ ರಾಜ್ಯಗಳ ಮಹಿಳೆಯರು ಕರ್ನಾ­ಟಕ­ಕ್ಕೆ ಬಂದು ಭ್ರೂಣಹತ್ಯೆ ಮಾಡಿಸಿ­ಕೊಳ್ಳುತ್ತಾರೆ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT