ADVERTISEMENT

ಲೇಖಕನ ಬಂಧನ ಜನತಂತ್ರ ವಿರೋಧಿ: ಬರಗೂರು ಟೀಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:59 IST
Last Updated 7 ಸೆಪ್ಟೆಂಬರ್ 2013, 19:59 IST

ಮೈಸೂರು: `ಢುಂಢಿ ಕೃತಿ ರಚನೆಕಾರ ಯೋಗೇಶ್ ಮಾಸ್ಟರ್ ಬಂಧನ, ಸಂಸ್ಕೃತಿಯ ಪರಂಪರೆಗೊಂದು ಕಪ್ಪುಚುಕ್ಕೆ. ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಮಾನವೀಯವಾದುದು' ಎಂದು ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ `ಹೊರಳು ದಾರಿಯಲ್ಲಿ ಕನ್ನಡ ಸಾಹಿತ್ಯ ಹುಡುಕಾಟದ ಹೊಸ ನೆಲೆಗಳು' ಕುರಿತ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, `ಬಿಜೆಪಿ ಸರ್ಕಾರವಿದ್ದಾಗ ಯಾವ ಲೇಖಕರ ಬಂಧನವೂ ಆಗಿರಲಿಲ್ಲ. ಬಂಧಿಸಿ ಎಂದು ಯಾರೂ ಕೇಳಿರಲಿಲ್ಲ' ಎಂದರು.

`ಭಾರತೀಯ ಮೂಲದ ಲೇಖಕಿ ಸುಷ್ಮಿತಾ ಬ್ಯಾನರ್ಜಿ ಹಾಗೂ ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಗಳು ಸಾಂಸ್ಕೃತಿಕ ಕ್ಷೇತ್ರವನ್ನು ಕಾಡದೆ ಇದ್ದರೆ, ಈ ಕ್ಷೇತ್ರದಲ್ಲಿರುವ ಹಕ್ಕನ್ನು ಕಳೆದುಕೊಂಡಿದ್ದೇವೆ ಎಂದರ್ಥ. ಆದರೆ ಸಾಹಿತ್ಯಕ್ಕೆ ನಿರ್ಲಿಪ್ತತೆ ಇರಬೇಕು ಎನ್ನುವುದು ನಿರ್ದಿಷ್ಟ ದೂರವೇ ಹೊರತು ನಪುಂಸಕತ್ವವಲ್ಲ. ಅದು ನಿರ್ವೀರ್ಯತೆ ಅಷ್ಟೆ. ಸಾಮಾಜಿಕವಾಗಿ, ರಾಜಕೀಯವಾಗಿ ಪ್ರತಿಕ್ರಿಯಿಸುವುದಿಲ್ಲ ಎನ್ನುವುದು ವೈರಾಗ್ಯ ಅಲ್ಲ. ಸಾಹಿತ್ಯಕ್ಕೆ ವೈರಾಗ್ಯ ಬೇಕಿಲ್ಲ. ವೈರಾಗ್ಯ ಇರಬೇಕಾದವರಿಗೇ ವೈರಾಗ್ಯವಿಲ್ಲ' ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.