ADVERTISEMENT

ಲೋಕೋಪಯೋಗಿ ಇಲಾಖೆ: ಗುತ್ತಿಗೆ ಲಾಬಿ, ದರಪಟ್ಟಿಗೆ ತಡೆ

ಸಚಿವರೊಬ್ಬರ ಆಪ್ತರಿಗೆ ಲಾಭ?

ಮಂಜುನಾಥ್ ಹೆಬ್ಬಾರ್‌
Published 12 ನವೆಂಬರ್ 2018, 20:15 IST
Last Updated 12 ನವೆಂಬರ್ 2018, 20:15 IST
   

ಬೆಂಗಳೂರು: ಲೋಕೋಪಯೋಗಿ ಇಲಾಖೆಯು ಹಿರಿಯ ಅಧಿಕಾರಿಗಳು ಸಿದ್ಧಪಡಿಸಿದ್ದ ನಿರ್ಮಾಣ ಸಾಮಗ್ರಿಗಳ 2018–19ನೇ ಸಾಲಿನ ದರಪಟ್ಟಿಯನ್ನು (ಎಸ್‌ಆರ್‌) ತಡೆ ಹಿಡಿಯಲಾಗಿದೆ. ಸಚಿವರೊಬ್ಬರ ಆಪ್ತ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.

ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ನೇತೃತ್ವದ ಸಮಿತಿ ಎರಡು ತಿಂಗಳ ಹಿಂದೆಯೇ ದರ ಪಟ್ಟಿ ಸಿದ್ಪ ಡಿಸಿತ್ತು. ಕೆಲವು ಕಡೆಗಳಲ್ಲಿ ಅದರ ಮುದ್ರಣವೂ ಪೂರ್ಣಗೊಂಡಿದೆ. ಕೊನೆ ಕ್ಷಣದಲ್ಲಿ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ನಿರ್ದೇಶನದ ಮೇರೆಗೆ ಪಟ್ಟಿ ತಡೆ ಹಿಡಿಯಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

‘ಇಲಾಖೆಯಲ್ಲಿ ಈ ವರ್ಷ ಸುಮಾರು ₹300 ಕೋಟಿ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ದರಪಟ್ಟಿ ತಡೆಹಿಡಿದಿರುವುದರಿಂದಾಗಿ ಕಾಮಗಾರಿಗಳಿಗೆ ಅನುಮೋದನೆ ನೀಡುವುದು, ಅನುಷ್ಠಾನಗೊಳಿಸುವುದು ತಡವಾಗಲಿದೆ. ದರಪಟ್ಟಿಯ ವಿಷಯದಲ್ಲಿ ಈ ಹಿಂದಿನ ಯಾವ ಸಚಿವರೂ ಹಸ್ತಕ್ಷೇಪ ಮಾಡಿರಲಿಲ್ಲ. ರೇವಣ್ಣ ಅವರು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದು ಕೆಲವು ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಬೆಂಗಳೂರು ವೃತ್ತದ ದರಪಟ್ಟಿ ಪ್ರಕಟಿಸಲು ಈ ಹಿಂದೆ ಅನುಮೋದನೆ ನೀಡಲಾಗಿತ್ತು. ಇದರಲ್ಲಿ ಕಟ್ಟಡಗಳಿಗೆ ಸಂಬಂಧಿಸಿದ ಅಂಶಗಳನ್ನು ಪುನರ್‌ಪರಿಶೀಲನೆ ನಡೆಸಬೇಕಿದೆ. ಹಾಗಾಗಿ, ಇವುಗಳನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’ ಎಂದು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌ ನವೆಂಬರ್‌ 5ರಂದು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರತಿಗಳನ್ನು ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ, ಉತ್ತರ ಹಾಗೂ ಈಶಾನ್ಯ) ವಿಭಾಗದ ಮುಖ್ಯ ಎಂಜಿನಿಯರ್‌ಗಳಿಗೆ ಕಳುಹಿಸಲಾಗಿದೆ.

‘ದರ ಪಟ್ಟಿ ಬಗ್ಗೆ ಹಲವು ಗುತ್ತಿಗೆದಾರರು ತಗಾದೆ ಎತ್ತಿದ್ದರು. ಇದರ ಪ್ರಕಾರ, ಕಾಮಗಾರಿ ನಡೆಸಿದರೆ ಹೆಚ್ಚು ಲಾಭ ಸಿಗುವುದಿಲ್ಲ ಎಂದು ಸಚಿವರ ಬಳಿ ದೂರಿಕೊಂಡಿದ್ದರು. ಬಳಿಕ ಸಚಿವರು ಈ ನಿರ್ದೇಶನ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ದರ ಪಟ್ಟಿ ತಡೆ ಹಿಡಿದಿರುವುದರಿಂದ ಕಾಮಗಾರಿಗಳಿಗೆ ಟೆಂಡರ್‌ ನೀಡಲು ಸಮಸ್ಯೆ ಇಲ್ಲ. ಟೆಂಡರ್‌ ಅಪ್‌ಲೋಡ್‌ ಆಗುವ ಹಿಂದಿನ ದಿನ ಹೊಸ ದರ ಪಟ್ಟಿ ಬಂದರೆ ಅದನ್ನು ಅಳವಡಿಸಿಕೊಳ್ಳಲು ಅವಕಾಶ ಇದೆ’ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದರು.

‘ವಲಯವಾರು ಬೇರೆ ಬೇರೆ ದರ’

ಇಲಾಖೆಯಲ್ಲಿ ಸಾಮಾನ್ಯವಾಗಿ ಪ್ರತಿವರ್ಷ ನಿರ್ಮಾಣ ಸಾಮಗ್ರಿಗಳ ದರಪಟ್ಟಿ ಪರಿಷ್ಕರಣೆ ಮಾಡಲಾಗುತ್ತದೆ. ದರ ಪರಿಷ್ಕರಣೆ ಮಾಡದಿದ್ದರೆ ತಾತ್ಕಾಲಿಕ ನೆಲೆಯಲ್ಲಿ ಸಾಮಗ್ರಿಗಳ ಬೆಲೆಯನ್ನು ಶೇ 5 ಹೆಚ್ಚಳ ಮಾಡಲು ಅವಕಾಶವಿದೆ. ಮಾರುಕಟ್ಟೆಯಲ್ಲಿ ಸಾಮಗ್ರಿಗಳ ಬೆಲೆ ಏರಿಳಿತದ ಆಧಾರದಲ್ಲಿ ಮೂರು ತಿಂಗಳಿಗೊಮ್ಮೆ ಇಶ್ಯೂ ರೇಟ್‌ (ಪಾವತಿಸುವ ದರ) ನೀಡಬಹುದು.

ಮಾರುಕಟ್ಟೆಯಲ್ಲಿ ಉಕ್ಕು, ಸಿಮೆಂಟ್‌, ಮರಳು, ಜಲ್ಲಿಗಳ ದರ, ಕಾರ್ಮಿಕರ ಕೂಲಿ, ತೈಲ ಬೆಲೆ, ದರ ಸೂಚ್ಯಂಕ, ತೆರಿಗೆ ಗಮನಿಸಿ ನಿರ್ಮಾಣ ಸಾಮಗ್ರಿ ದರವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳ ಅಧ್ಯಕ್ಷತೆಯ ಸಮಿತಿ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಚರ್ಚಿಸಿ ಹಾಗೂ ಗುತ್ತಿಗೆದಾರರ ಅಭಿಪ್ರಾಯ ಪಡೆದು ದರಪಟ್ಟಿಯನ್ನು ತಯಾರಿಸುತ್ತದೆ. ಇಡೀ ರಾಜ್ಯಕ್ಕೆ ಏಕರೂಪದ ದರ ಇರುವುದಿಲ್ಲ. ಆಯಾ ವಲಯದಲ್ಲಿನ ಸಾಮಗ್ರಿಗಳ ಬೆಲೆಗೆ ಅನುಗುಣವಾಗಿ ದರದಲ್ಲಿ ವ್ಯತ್ಯಾಸ ಇರುತ್ತದೆ.

ಮತ್ತೆ 85 ಎಂಜಿನಿಯರ್‌ಗಳ ವರ್ಗ

ಲೋಕೋಪಯೋಗಿ ಇಲಾಖೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದ್ದು, ಒಂದೇ ದಿನ 85 ಎಂಜಿನಿಯರ್‌ಗಳನ್ನು ವರ್ಗಾಯಿಸಲಾಗಿದೆ.

ಇಲಾಖೆಯಲ್ಲಿ ವರ್ಗಾವಣೆ ಅವಧಿ ಮುಗಿದ ಬಳಿಕವೂ ಕಳೆದ ತಿಂಗಳು ಒಂದೇ ದಿನ 700ಕ್ಕೂ ಅಧಿಕ ಅಧಿಕಾರಿಗಳನ್ನು ವರ್ಗಾಯಿಸಲಾಗಿತ್ತು. ಆ ಬಳಿಕವೂ ಹಲವು ಎಂಜಿನಿಯರ್‌ಗಳನ್ನು ವರ್ಗ ಮಾಡಲಾಗಿತ್ತು. ಇದೀಗ 55 ಸಹಾಯಕ ಎಂಜಿನಿಯರ್‌ಗಳು ಹಾಗೂ 30 ಕಿರಿಯ ಎಂಜಿನಿಯರ್‌ಗಳನ್ನು ವರ್ಗ ಮಾಡಲಾಗಿದೆ.

* ದರಪಟ್ಟಿ ತಡೆ ಹಿಡಿದಿರುವ ಬಗ್ಗೆ ನನಗೆ ಯಾವ ಮಾಹಿತಿಯೂ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ.

-ರಜನೀಶ್‌ ಗೋಯಲ್‌, ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.