ADVERTISEMENT

ವಿಜಯಶಂಕರ್‌ ವಿದಾಯ: ಫ್ಯಾಕ್ಸ್‌ ಮೂಲಕ ಯಡಿಯೂರಪ್ಪಗೆ ರಾಜೀನಾಮೆ ಪತ್ರ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 19:30 IST
Last Updated 28 ಅಕ್ಟೋಬರ್ 2017, 19:30 IST
ಸಿ.ಎಚ್‌.ವಿಜಯಶಂಕರ್‌
ಸಿ.ಎಚ್‌.ವಿಜಯಶಂಕರ್‌   

ಮೈಸೂರು: ಹಲವು ದಿನಗಳಿಂದ ಬಿಜೆಪಿ ಸಂಪರ್ಕದಿಂದ ದೂರ ಉಳಿದಿದ್ದ ಹಿರಿಯ ಮುಖಂಡ ಸಿ.ಎಚ್‌.ವಿಜಯಶಂಕರ್‌ ಅವರು ಕೊನೆಗೂ ಪಕ್ಷಕ್ಕೆ ವಿದಾಯ ಹೇಳಿದ್ದಾರೆ.‌

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶನಿವಾರ ಫ್ಯಾಕ್ಸ್‌ ಮೂಲಕ ರಾಜೀನಾಮೆ ಪತ್ರ ಕಳುಹಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರುವ ಸಾಧ್ಯತೆಗಳಿದ್ದು, ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕ್ಷೇತ್ರ ಪ್ರತಿನಿಧಿಸುತ್ತಾ ಬಂದರೂ ಕಳೆದ ಲೋಕಸಭೆ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಟಿಕೆಟ್‌ ನೀಡಲಿಲ್ಲ. ಬದಲಿಗೆ ಹಾಸದಿಂದ ಸ್ಪರ್ಧಿಸುವಂತೆ ಮಾಡಿ ಸೋಲಿಸಿದರು. ನಂತರವೂ ಪಕ್ಷದಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ಅಸಮಾಧಾನಗೊಂಡಿದ್ದರು.

ADVERTISEMENT

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಿರಿಯಾಪಟ್ಟಣದಿಂದ ಟಿಕೆಟ್ ನೀಡಲು ನಿರಾಕರಿಸಿರುವುದು ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಸ್ಪರ್ಧಿಸುವಂತೆ ಹೇಳಿದ್ದು ಪಕ್ಷ ತೊರೆಯಲು ಪ್ರಮುಖ ಕಾರಣ ಎನ್ನಲಾಗಿದೆ.

ಹಿನ್ನೆಲೆ: ಸಮಾಧಾನಪಡಿಸುವ ಸಲುವಾಗಿ ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ, ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಟಿಕೆಟ್‌ ವಿಚಾರದಲ್ಲಿ ಮತ್ತೆ ಅಸಮಾಧಾನಕ್ಕೆ ಒಳಗಾದ ಅವರು ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ.

ಕಾಂಗ್ರೆಸ್‌ನಿಂದ ರಾಜಕೀಯ ಆರಂಭ: ವಿಜಯಶಂಕರ್‌ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್‌ ಪಕ್ಷದಿಂದ. ಬಳಿಕ ಕಾಂಗ್ರೆಸ್‌ ತೊರೆದು, ಬಿಜೆಪಿ ಸೇರಿ 1994ರಲ್ಲಿ ಹುಣಸೂರು ಕ್ಷೇತ್ರದಿಂದ ವಿಧಾನಸಭೆ ಪ್ರವೇಶಿಸಿದ್ದರು. 2010ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ, ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.