ADVERTISEMENT

ವಿಜಾಪುರದಲ್ಲಿ ಮೈಕೊರೆಯುವ ಚಳಿ

ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್‌ ದಾಖಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 19:30 IST
Last Updated 18 ಡಿಸೆಂಬರ್ 2013, 19:30 IST

ವಿಜಾಪುರ: ಉರಿಬಿಸಿಲ ನಾಡು ವಿಜಾಪುರ ಜಿಲ್ಲೆಯಲ್ಲಿ ಮೈ ಕೊರೆಯುವ ಚಳಿ ಮುಂದುವ­ರಿದಿದೆ. ಬುಧವಾರ ರಾತ್ರಿ ಕನಿಷ್ಠ ತಾಪಮಾನ 7.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಜಿಲ್ಲೆಯಲ್ಲಿ ಬೇಸಿಗೆಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್‌ ತಲುಪಿರುತ್ತದೆ. ಚಳಿಯನ್ನೇ ಕಂಡರಿಯದ ಇಲ್ಲಿಯ ಜನತೆಗೆ ಈಗ ಹೊಸ ಅನುಭವ.

ಕಳೆದ ಮೂರು ವರ್ಷಗಳಿಂದ ಚಳಿ ಹೆಚ್ಚುತ್ತಿ­ದ್ದರೂ, ಎರಡು ತಿಂಗಳಿಗೂ ಹೆಚ್ಚುಕಾಲ ಇಷ್ಟೊಂದು ಚಳಿ ಮುಂದುವರೆದಿರುವುದು ಇದೇ ಮೊದಲು.

ಮಧ್ಯಾಹ್ನದ ವೇಳೆಗೆ ಮಾತ್ರ ಗರಿಷ್ಠ ತಾಪಮಾನ  ಸರಾಸರಿ 28 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ. ಸಂಜೆ ಆರಂಭ­ವಾಗುವ ಶೀತಗಾಳಿ ಬೆಳಿಗ್ಗೆ 8 ಗಂಟೆಯ­ವರೆಗೂ ಮುಂದುವರಿಯುತ್ತದೆ. ನಸುಕಿ-­ನಲ್ಲಿ ಮಂಜು ಕವಿದ ವಾತಾವರಣ ಇರುತ್ತದೆ.

‘ರಾಜ್ಯದಲ್ಲಿ ವಿಜಾಪುರ ಜಿಲ್ಲೆಯಲ್ಲಿಯೇ ಹೆಚ್ಚಿನ ಚಳಿ ಇದ್ದು, ಆಲಮಟ್ಟಿ ಜಲಾಶಯದ ಹಿನ್ನೀರು ಇದಕ್ಕೆ ಕಾರಣ ಇರಬಹುದು’ ಎಂಬ ಮಾತು ಜನತೆಯಿಂದ ಕೇಳಿ ಬರುತ್ತಿವೆ. ಆದರೆ, ‘ಚಳಿಗೆ ಗಾಳಿಯ ಪಥ ಕಾರಣವೇ ಹೊರತು, ಆಲಮಟ್ಟಿ ಜಲಾಶಯದ ಹಿನ್ನೀರು ಅಲ್ಲ’ ಎಂದು ಹವಾಮಾನ ತಜ್ಞರು ಹೇಳುತ್ತಾರೆ.

ಈ ಚಳಿಯಿಂದ ಮಕ್ಕಳು–ವೃದ್ಧರು ಹಾಗೂ ರೋಗಿಗಳು ಹೆಚ್ಚಿನ ತೊಂದರೆಗೀಡಾಗುತ್ತಿದ್ದಾರೆ. ‘ವಿಪರೀತ ಚಳಿಯಿಂದ ಮಕ್ಕಳಲ್ಲಿ ಕಫದ ತೊಂದರೆ ಹೆಚ್ಚುತ್ತಿದೆ. ಪಾಲಕರು ತಮ್ಮ ಮಕ್ಕಳಿಗೆ ಉಣ್ಣೆ ಬಟ್ಟೆ ತೊಡಿಸಿ, ಆದಷ್ಟು ಬೆಚ್ಚಗೆ ಇಟ್ಟುಕೊಳ್ಳಬೇಕು’ ಎಂದು ಇಲ್ಲಿಯ ಮಕ್ಕಳ ತಜ್ಞ ಡಾ. ಎಲ್‌.ಎಚ್‌. ಬಿದರಿ ಸಲಹೆ ನೀಡಿದ್ದಾರೆ.

‘ಜನತೆಯ ಆರೋಗ್ಯದ ಮೇಲೆ ಚಳಿ ಗಂಭೀರ ಪರಿಣಾಮ ಬೀರುತ್ತಿದೆ. ಶ್ವಾಸಕೋಶ ಸಂಬಂಧಿ ತೊಂದರೆಗಳು ಮತ್ತು ಸಾಂಕ್ರಾಮಿಕ ಜ್ವರ ಹೆಚ್ಚುತ್ತಿವೆ. ಆಸ್ತಮಾ ರೋಗಿಗಳು, ಕೀಲು ನೋವು ಮತ್ತಿತರ ತೊಂದರೆ ಇರುವ ವೃದ್ಧರು ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂದು ತಜ್ಞ ವೈದ್ಯ ಡಾ.ಪ್ರಭು ಪಾಟೀಲ ಮಾಹಿತಿ ನೀಡಿದರು.

‘ಚಳಿಯಲ್ಲಿ ಚರ್ಮ ಸುಕ್ಕು ಗಟ್ಟುವುದು, ಬಿರಿಯುವುದು ಸಾಮಾನ್ಯ. ಬಿರಿಯುವ ಚರ್ಮದಲ್ಲಿ ತುರಿಕೆ ಕಂಡು ಬರುತ್ತಿದ್ದು, ಬಹಳ ತುರಿಸಿಕೊಂಡರೆ ಅಲ್ಲಿ ಗಾಯವಾಗಿ ಸೋಂಕು ತಗಲುವ ಅಪಾಯ ಇರುತ್ತದೆ. ಸಾಮಾನ್ಯ ಸಾಬೂನುಗಳ ಬಳಕೆ ಕಡಿಮೆ ಮಾಡಿ ಚರ್ಮದ ರಕ್ಷಣೆಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ಚರ್ಮರೋಗ ತಜ್ಞ ಡಾ. ನಿರಂಜನ್‌ ದೇಶಪಾಂಡೆ.

‘ಜಿಲ್ಲೆಯಲ್ಲಿ ಮಳೆ ಕಡಿಮೆ ಆಗಿದ್ದು, ಕಡಲೆ, ಗೋಧಿ, ಬಿಳಿ ಜೋಳಕ್ಕೆ ಈ ಚಳಿ ವರವಾಗಿ ಪರಿಣಮಿಸಿದೆ. ಈರುಳ್ಳಿಗೆ ತೊಂದರೆಯನ್ನುಂಟು ಮಾಡಿದ್ದು, ದ್ರಾಕ್ಷಿ ಬೆಳೆಗೆ ದಾವಣಿ ರೋಗ ತಗುಲಿದೆ’ ಎಂಬುದು ಇಲ್ಲಿಯ ಕೃಷಿ ಕಾಲೇಜಿನ ಉಪನ್ಯಾಸಕ ಡಾ.ರಾಜೇಂದ್ರ ಪೋದ್ದಾರ, ಡಾ.ಆರ್‌.ಬಿ. ಬೆಳ್ಳಿ ಅವರ ವಿವರಣೆ.

‘ಈ ವರೆಗೆ ಮ್ಯಾಡಿ ಚಂಡ ಮಾರುತದ ಪ್ರಭಾವದಿಂದ ಶೀತಗಾಳಿ ಬೀಸುತ್ತಿತ್ತು. ಈಗ ಗುಜರಾತ್‌ ಮತ್ತು ಮಹಾರಾಷ್ಟ್ರದಲ್ಲಿ ಗಾಳಿಯ ಒತ್ತಡ ಹೆಚ್ಚಾಗಿದ್ದು, ಆ ಭಾಗದಿಂದ ಬರುತ್ತಿರುವ ಶೀತಗಾಳಿ ಜಿಲ್ಲೆಯಲ್ಲಿ ಚಳಿಯನ್ನು ಹೆಚ್ಚಿಸಿದೆ’ ಎಂದು ಇಲ್ಲಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ತಜ್ಞ ಡಾ.ಎಚ್‌. ವೆಂಕಟೇಶ್‌ ಹೇಳಿದರು.

ಮುಂದಿನ ಐದು ದಿನ ರಾತ್ರಿ ವೇಳೆ ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ ಎಂದು ಹವಾಮಾನ ಕೇಂದ್ರದ ಮೂಲಗಳು ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.