ADVERTISEMENT

ವಿದ್ಯುತ್ ಖರೀದಿ ಒಪ್ಪಂದ ಅಂತ್ಯ

ಬೇಡಿಕೆ ಕಡಿಮೆಯಾದ ಕಾರಣ ಸಮಸ್ಯೆಯಾಗದು

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 19:59 IST
Last Updated 14 ಜೂನ್ 2013, 19:59 IST

ಬೆಂಗಳೂರು: ವಿದ್ಯುತ್ ಕೊರತೆ ಇದ್ದ ಕಾರಣ ನಿತ್ಯ 1,280 ಮೆಗಾವಾಟ್ ಖರೀದಿಗೆ ಮಾಡಿಕೊಂಡಿದ್ದ ಒಪ್ಪಂದ ಶನಿವಾರ ಅಂತ್ಯವಾಗಲಿದೆ. ರಾಜ್ಯದ ಕೆಲವೆಡೆ ಮಳೆ ಆಗುತ್ತಿರುವುದರಿಂದ ವಿದ್ಯುತ್ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ವಿದ್ಯುತ್ ಖರೀದಿ ಮಾಡದೆ ಇದ್ದರೂ ಸದ್ಯಕ್ಕೆ ಸಮಸ್ಯೆ ಆಗುವುದಿಲ್ಲ ಎಂದು ಇಂಧನ ಇಲಾಖೆ ಮೂಲಗಳು ತಿಳಿಸಿವೆ.

ಈಗಾಗಲೇ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಆಗಸ್ಟ್ ಒಂದರಿಂದ ಎರಡು ವರ್ಷಗಳ ಕಾಲ ನಿತ್ಯ 1,500 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತದೆ. ಅಲ್ಲಿಯವರೆಗೂ ವಿದ್ಯುತ್ ಖರೀದಿ ಇರುವುದಿಲ್ಲ.

ಮುಂಗಾರು ಆರಂಭವಾಗಿದ್ದು, ಪ್ರಮುಖ ಜಲವಿದ್ಯುತ್ ಉತ್ಪಾದನಾ ಜಲಾಶಯಗಳಾದ ಲಿಂಗನಮಕ್ಕಿ, ಮಾಣಿ ಮತ್ತು ಸೂಪಾದಲ್ಲಿ ಒಳಹರಿವು ಶುರುವಾಗಿದೆ. ಈಗಿರುವ ನೀರಿನಲ್ಲಿ 1,487 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಜೂನ್ ಅಂತ್ಯದವರೆಗೂ ನಿತ್ಯ 87 ದಶಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲು ಅವಕಾಶ ಇದೆ. ಹೀಗಾಗಿ ಸದ್ಯಕ್ಕೆ ವಿದ್ಯುತ್ ಕೊರತೆ ಇಲ್ಲ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್. ಸೆಲ್ವಕುಮಾರ್ ತಿಳಿಸಿದರು.

ಗುರುವಾರ 136 ದಶಲಕ್ಷ ಯೂನಿಟ್ ಪೂರೈಕೆ ಆಗಿದೆ. ಕಳೆದ ವರ್ಷ ಇದೇ ದಿನ 158 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಕೆ ಆಗಿತ್ತು. ಈಗ ವಿದ್ಯುತ್ ಬೇಡಿಕೆ ಕುಸಿದಿರುವುದರಿಂದ ಜಲವಿದ್ಯುತ್ ಉತ್ಪಾದನೆ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ನಿತ್ಯ 13ರಿಂದ 15 ದಶಲಕ್ಷ ಯೂನಿಟ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ ಎಂದರು. ಗ್ರಾಮೀಣ ಭಾಗದಲ್ಲಿ ನಿತ್ಯ ಸರಾಸರಿ 6 ಗಂಟೆ ಕಾಲ 3- ಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಇದನ್ನು ಜಾಸ್ತಿ ಮಾಡಬೇಕು ಎಂಬ ಬೇಡಿಕೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.