ADVERTISEMENT

ವಿದ್ಯುತ್ ಸಮಸ್ಯೆಗೆ ದಕ್ಷಿಣ ಕಾರಿಡಾರ್ ಪರಿಹಾರ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2012, 19:30 IST
Last Updated 12 ಆಗಸ್ಟ್ 2012, 19:30 IST

ಬೆಂಗಳೂರು:`ಕೇಂದ್ರ ಸರ್ಕಾರ ವಿದ್ಯುತ್ ನೀಡಲು ಸಿದ್ಧವಿದೆ. ಆದರೆ ವಿದ್ಯುತ್ ಪೂರೈಕೆ ಮಾರ್ಗದಲ್ಲಿ ಜಮೀನು ವಿವಾದ ಸೇರಿದಂತೆ ವಿವಿಧ ಸಮಸ್ಯೆಗಳು ತಲೆದೋರಿವೆ. ಅವುಗಳನ್ನು ಬಗೆಹರಿಸಿಕೊಂಡು, ವಿದ್ಯುತ್ ಪಡೆದುಕೊಳ್ಳುವಲ್ಲಿ ರಾಜ್ಯ ಸರ್ಕಾರ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ ~ ಎಂದು ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯಿಲಿ ತಿಳಿಸಿದರು.

ಬೆಂಗಳೂರಿನಲ್ಲಿ ನಡೆದ `ಅಂಬೇಡ್ಕರ್ ಮತ್ತು ದೇವರಾಜ್ ಅರಸು~ ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈಗಿರುವ ವಿದ್ಯುತ್ ಪ್ರಸರಣ ಮಾರ್ಗದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸಿದರೆ, ಒಂದು ವಾರದ ಒಳಗೆ ಕೇಂದ್ರದಿಂದ 1,500 ಮೆಗಾವಾಟ್ ವಿದ್ಯುತ್ ಅನ್ನು ಪಡೆದುಕೊಳ್ಳಬಹುದಾಗಿದೆ ಎಂದರು.

`ಈಗಾಗಲೇ ಆರಂಭಗೊಂಡಿರುವ ದಕ್ಷಿಣ ವಿದ್ಯುತ್ ಕಾರಿಡಾರ್ ಯೋಜನೆಯು 2014ರ ಒಳಗೆ ಪೂರ್ಣಗೊಳಲಿದ್ದು, ಇದರಿಂದ ಈಗಿರುವ ವಿದ್ಯುತ್ ಸಮಸ್ಯೆ ಕಡಿಮೆಮಾಡಲಿದೆ~ ಎಂದು ಅವರು ತಿಳಿಸಿದರು. `ಲಿಂಗನಮಕ್ಕಿ ಜಲಾಶಯದಿಂದ ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಸಂಪೂರ್ಣವಾಗಿ ತಡೆಗಟ್ಟಿದರೆ, ಇಲ್ಲಿರುವ ಜಲವಿದ್ಯುತ್ ಸ್ಥಾವರದಿಂದ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆಗೆ ಅವಕಾಶ ನೀಡಿದಂತಾಗುತ್ತದೆ. ಇದರಿಂದ ರಾಜ್ಯದ ಶೇ 90ರಷ್ಟು ವಿದ್ಯುತ್ ಸಮಸ್ಯೆ ನಿವಾರಿಸಬಹುದು~ ಎಂದರು.

`ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮತ್ತು ವಿತರಣಾ ಘಟಕಗಳ ಅಸಮರ್ಪಕ ಕಾರ್ಯವೈಖರಿಯಿಂದ ಶೇ 27ರಷ್ಟು ವಿದ್ಯುತ್ ನಷ್ಟವಾಗುತ್ತಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಶೇ 12 ರಿಂದ 40 ರಷ್ಟು ವಿದ್ಯುತ್ ನಷ್ಟವಾಗುತ್ತಿದೆ. ಪ್ರಸರಣ ಮತ್ತು ವಿತರಣಾ ಮಾರ್ಗಗಳನ್ನು ಬಲಪಡಿಸುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕು~ ಎಂದು ತಿಳಿಸಿದರು.


`ದೇಶದಾದ್ಯಂತ ಇರುವ ವಿವಿಧ ವಿದ್ಯುತ್ ಪ್ರಸರಣ ನಿಗಮಗಳ ಹಣಕಾಸು ಸ್ಥಿತಿ ಉತ್ತಮವಾಗಿಲ್ಲ. ಹಾಗಾಗಿ 20 ದಿನದ ಒಳಗೆ ಕೇಂದ್ರ ಸರ್ಕಾರ ವಿದ್ಯುತ್ ನಿಯಂತ್ರಣ ಮಂಡಳಿಯ ಸಭೆ ಕರೆಯಲಿದ್ದು, ಹಲವು ಸಮಸ್ಯೆಗಳ ಕುರಿತು ಚರ್ಚೆ ನಡೆಸಲಿದೆ~ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT