ADVERTISEMENT

`ವಿ.ವಿ.ಗಳು ಪಾರದರ್ಶಕತೆ ಕಾಯ್ದುಕೊಳ್ಳಲಿ'

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 19:59 IST
Last Updated 19 ಜೂನ್ 2013, 19:59 IST

ದಾವಣಗೆರೆ: ರಾಜ್ಯದ ವಿಶ್ವವಿದ್ಯಾಲಯಗಳು ಆಡಳಿತ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ವಿವಿಧ ವಿ.ವಿ. ಕುಲಪತಿಗಳಿಗೆ ಸೂಚಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬುಧವಾರ ನಡೆದ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆಯಲ್ಲಿ ಈ ಅಂಶದ ಬಗ್ಗೆಯೇ ಹೆಚ್ಚಿನ ಚರ್ಚೆಯಾಯಿತು.ವಿಶ್ವವಿದ್ಯಾಲಯಗಳು ಪಾರದರ್ಶಕತೆ ತರುವ ನಿಟ್ಟಿನಲ್ಲಿ ವೆಬ್‌ಸೈಟ್‌ಗಳಲ್ಲಿ ವಿವರಗಳನ್ನು ಪ್ರಕಟಿಸಬೇಕು. ವಿ.ವಿ.ಗಳು ಭ್ರಷ್ಟಾಚಾರ ಮುಕ್ತವಾಗಿರಲು ಕ್ರಮ ಕೈಗೊಳ್ಳಬೇಕು ಎಂದೂ ಅವರು ಹೇಳಿದರು.

ವಿದ್ಯಾರ್ಥಿಗಳು ವಿಶ್ವವಿದ್ಯಾಲಯಗಳಿಂದ ಹೊರಬರುವಾಗ ಗುಣಮಟ್ಟದ ಶಿಕ್ಷಣ ಪಡೆದಿರುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು. ವಿ.ವಿ.ಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ನೇಮಕ ಮಾಡುವಂತೆ ಕೆಲವು ವಿ.ವಿ. ಕುಲಪತಿಗಳು ಸಲಹೆ ನೀಡಿದರು.

ವಿ.ವಿ. ಆಡಳಿತ ಸುಗಮವಾಗಿ ನಡೆಯಲು ಸಿಬ್ಬಂದಿ ನೇಮಕವಾಗಬೇಕು ನಿಜ, ಆದರೆ ಸರ್ಕಾರಕ್ಕೂ ಇತಿಮಿತಿಗಳಿವೆ. ಕಾಲಮಿತಿ ಹಾಕುವಂತಿಲ್ಲ. ಆದರೆ ಹಂತ ಹಂತವಾಗಿ ಈ ಬಗ್ಗೆ ಸರ್ಕಾರ ಗಮನ ಹರಿಸಲಿದೆ ಎಂದು ಸಚಿವರು ಹೇಳಿದರು. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ 16 ಮಂದಿ ಕುಲಪತಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT