ADVERTISEMENT

ಶಾಂತಿ ಕದಡುವುದೇ ‌ಹಿಂದುತ್ವ ಸಂಘಟನೆಗಳ ಅಜೆಂಡಾ: ದಿನೇಶ್‌ ಗುಂಡೂರಾವ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2017, 19:30 IST
Last Updated 12 ಡಿಸೆಂಬರ್ 2017, 19:30 IST
ದಿನೇಶ್‌ ಗುಂಡೂರಾವ್
ದಿನೇಶ್‌ ಗುಂಡೂರಾವ್   

ಬೆಂಗಳೂರು: ಹಿಂಸೆಗೆ ಪ್ರಚೋದನೆ ನೀಡಿ ಶಾಂತಿ ಕದಡುವುದೇ ಬಿಜೆಪಿ ಮತ್ತು ಹಿಂದುತ್ವ ಸಂಘಟನೆಗಳ ಅಜೆಂಡಾ(ಕಾರ್ಯಸೂಚಿ) ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಜನರ ದಾರಿ ತಪ್ಪಿಸಲು ಬಿಜೆಪಿ ನಾಯಕರು ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ದೂರಿದರು.

ಕೇಂದ್ರ ಸರ್ಕಾರ ಜಾರಿ ತರಲು ಉದ್ದೇಶಿಸಿರುವ ಹಣಕಾಸು ಠೇವಣಿ ನಿರ್ಣಯ ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ಈ ಮಸೂದೆಯಿಂದ ಸಾಕಷ್ಟು ಸಮಸ್ಯೆ ಸೃಷ್ಟಿಯಾಗಲಿದೆ. ಈ ಮಸೂದೆ ವಾಪಸು ಪಡೆಯದಿದ್ದರೆ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಪ್ರಧಾನಿ ಮೋದಿ ಉದ್ಯಮಪತಿಗಳ ಪರವಾಗಿದ್ದಾರೆ. ನೋಟು ರದ್ಧತಿ ಮತ್ತು ಜಿಎಸ್‌ಟಿಯಿಂದ ಅರ್ಥ ವ್ಯವಸ್ಥೆ ಕುಸಿದಿದೆ. ಆದರೆ, ತಪ್ಪು ಒಪ್ಪಿಕೊಳ್ಳಲು ಮೋದಿ ತಯಾರಿಲ್ಲ. ಐ.ಟಿ ಇಲಾಖೆಯನ್ನು ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.

ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ‘ರಾಹುಲ್ ಗಾಂಧಿ ಯುವ ಪೀಳಿಗೆಯ ನೇತಾರ. ಅವರ ಸಾರಥ್ಯದಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

‘ಸದಾಶಿವ ಆಯೋಗದ ವರದಿ ಜಾರಿ ಕುರಿತು ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ನಾವು ಸಹಕಾರ ನೀಡಲಿದ್ದೇವೆ’ ಎಂದೂ ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.