ADVERTISEMENT

ಶಾಸಕ ಆನಂದ್ ಸಿಂಗ್ ಬಂಧನ

ಅದಿರು ಕಳ್ಳಸಾಗಣೆ ಆರೋಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2013, 9:11 IST
Last Updated 17 ಅಕ್ಟೋಬರ್ 2013, 9:11 IST

ಬೆಂಗಳೂರು: ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ನಡೆಸಿರುವ ಆರೋಪ ಎದುರಿಸುತ್ತಿರುವ ಹೊಸಪೇಟೆಯ (ವಿಜಯನಗರ) ಬಿಜೆಪಿ ಶಾಸಕ ಆನಂದ್‌ ಸಿಂಗ್‌ ಅವರನ್ನು ಗುರುವಾರ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಸಿಂಗಾಪುರದಿಂದ ಬೆಳಿಗ್ಗೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆನಂದ್ ಸಿಂಗ್ ಅವರನ್ನು ಬಂಧಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ಸಿಬಿಐ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಸಿಂಗ್ ಅವರನ್ನು ವಶಕ್ಕೆ ಪಡೆದ ಸಿಬಿಐ ಅಧಿಕಾರಿಗಳು ಅವರನ್ನು ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೆ ಕರೆತಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿದೇಶದಲ್ಲೇ ಕುಳಿತು ಸಿಬಿಐ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಆನಂದ್ ಸಿಂಗ್ ಅವರು ನಿರೀಕ್ಷಣಾ ಜಾಮೀನು ಕೋರಿ ಆನಂದ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚಿಗಷ್ಟೇ ತಿರಸ್ಕರಿಸಿತ್ತು. ನಂತರದಲ್ಲಿ ಶಾಸಕರು ದೇಶಕ್ಕೆ ಹಿಂದಿರುಗಿ ತನಿಖಾ ತಂಡದ ಎದುರು ಶರಣಾಗುತ್ತಾರೆ ಎಂಬ ವದಂತಿಯನ್ನು ಅವರ ಆಪ್ತ ವಲಯದವರೇ ಹರಿಯಬಿಟ್ಟಿದ್ದರು.

ಹಿನ್ನೆಲೆ: ಆನಂದ್‌ ಸಿಂಗ್‌ ಒಡೆತನದ ಎಸ್‌ಬಿ ಮಿನರಲ್ಸ್‌ ಮತ್ತು ವೈಷ್ಣವಿ ಮಿನರಲ್ಸ್‌ ನಡೆಸಿರುವ ಅದಿರು ಕಳ್ಳಸಾಗಣೆ ಕುರಿತು ಸುಪ್ರೀಂಕೋರ್ಟ್‌ ಆದೇಶ­ದಂತೆ ಸಿಬಿಐ ತನಿಖೆ ನಡೆಸುತ್ತಿದೆ. ಇದಕ್ಕೆ ಸಿಂಗ್‌ ದೀರ್ಘಕಾಲ ಪೂರ್ಣ ಸಹಕಾರ ನೀಡಿದ್ದರು. ಆದರೆ, ಶಾಸಕರಾದ ಟಿ.ಎಚ್‌.ಸುರೇಶ್‌ಬಾಬು  ಮತ್ತು ಸತೀಶ್‌ ಸೈಲ್‌ ಬಂಧನವಾಗುತ್ತಿದ್ದಂತೆ ವಿಚಾರಣೆ­ಯಿಂದ ತಪ್ಪಿಸಿಕೊಂಡು ಸಿಂಗಾಪುರಕ್ಕೆ ಪರಾರಿಯಾಗಿದ್ದರು.

ಸುಪ್ರೀಂಕೋರ್ಟ್‌ನ ಆದೇಶದಂತೆ 2012ರ ಸೆಪ್ಟೆಂಬರ್‌ನಲ್ಲಿ ಐದು ಪ್ರತ್ಯೇಕ ಪ್ರಥಮ ಮಾಹಿತಿ ವರದಿಗಳನ್ನು (ಎಫ್‌ಐಆರ್‌) ದಾಖಲಿಸಿದ್ದ ಸಿಬಿಐ, ತನಿಖೆ ಆರಂಭಿಸಿತ್ತು. ಸಿಂಗ್‌ ಅವರ ಎಸ್‌ಬಿ ಮತ್ತು ವೈಷ್ಣವಿ ಮಿನರಲ್ಸ್‌ ಕಂಪೆನಿಗಳನ್ನು ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.