ADVERTISEMENT

'ಶುಭ ಸೂಚಕ' ದಿನ: ಗಣ್ಯಾತಿಗಣ್ಯರಿಂದ ಚುನಾವಣಾ ರಂಗಪ್ರವೇಶ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 12:44 IST
Last Updated 15 ಏಪ್ರಿಲ್ 2013, 12:44 IST

ಬೆಂಗಳೂರು (ಪಿಟಿಐ): ಪ್ರಮುಖ ರಾಜಕಾರಣಿಗಳಾದ ಬಿ.ಎಸ್. ಯಡಿಯೂರಪ್ಪ, ಜಿ. ಪರಮೇಶ್ವರ ಮತ್ತು ಸಿದ್ದರಾಮಯ್ಯ ಸೇರಿದಂತೆ ನೂರಾರು ಮಂದಿ ಅಭ್ಯರ್ಥಿಗಳು ಮೇ 5ರ ವಿಧಾನಸಭಾ ಚುನಾವಣೆಗಳಿಗೆ ಸಂಭ್ರಮೋತ್ಸಾಹಗಳೊಂದಿಗೆ ಸೋಮವಾರ ನಾಮಪತ್ರ ಸಲ್ಲಿಸುವುದರೊಂದಿಗೆ ರಾಜ್ಯದಲ್ಲಿ ಚುನಾವಣೋತ್ಸಾಹ ಗರಿಗಟ್ಟಿದೆ.

ಬಿಜೆಪಿ ತ್ಯಜಿಸಿ ಕರ್ನಾಟಕ ಜನತಾ ಪಕ್ಷವನ್ನು (ಕೆಜೆಪಿ) ಕಟ್ಟಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಕ್ಷೇತ್ರದಲ್ಲಿ ಭಾರಿ ಸಂಖ್ಯೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಾಮಪತ್ರ ಸಲ್ಲಿಸುವುದರೊಂದಿಗೆ ಚುನಾವಣಾ ರಣರಂಗಕ್ಕೆ ಧುಮುಕಿದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (ಕಾಂಗ್ರೆಸ್) ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಚುನಾವಣಾ ರಂಗ ಪ್ರವೇಶ ಮಾಡಿದರು.
ಬಿಜೆಪಿ ತ್ಯಜಿಸಿದ ಬಳಿಕ ಬಿಎಸ್ ಆರ್ ಕಾಂಗ್ರೆಸ್ ಸ್ಥಾಪಿಸಿದ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು.

ಈದಿನ 'ಶುಭಸೂಚಕ' ಎಂಬ ಕಾರಣಕ್ಕಾಗಿ ನಾಮಪತ್ರ ಸಲ್ಲಿಕೆ ಚಟುವಟಿಕೆ ಸೋಮವಾರ ತೀವ್ರಗೊಂಡಿತು. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಏಪ್ರಿಲ್ 17.

ಯಡಿಯೂರಪ್ಪ ಬೆಂಬಲಿಗರೂ ಮಾಚಿ ಸಚಿವೆಯೂ ಆದ ಶೋಭಾ ಕರಂದ್ಲಾಜೆ ಮತ್ತು ಅವರ ಎದುರಾಳಿ ಹಾಲಿ ಶಾಸಕ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ ಕುಮಾರ್ ಕೂಡಾ ಇದೇ ದಿನ ನಗರದ ರಾಜಾಜಿನಗರ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ಈ ಕ್ಷೇತ್ರ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.

ಜೆಡಿ(ಎಸ್) ರಾಜ್ಯ ಘಟಕ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರ ಸ್ವಾಮಿ ಅವರು ಪಕ್ಷ ಕಾರ್ಯಕರ್ತರ ಭಾರಿ ಸಮೂಹದೊಂದಿಗೆ ಆಗಮಿಸಿ ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ನಾಮಪತ್ರ ಸಲ್ಲಿಸಿದರು.

ಈ ಮಧ್ಯೆ ಕನ್ನಡ ಚಿತ್ರನಟಿ ರಕ್ಷಿತಾ ಪ್ರೇಮ್ ಅವರು ಬಿಎಸ್ಆರ್ ಕಾಂಗ್ರೆಸ್ ಚಾಮರಾಜನಗರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದರೂ, ಆ ಪಕ್ಷವನ್ನು ತ್ಯಜಿಸಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನೇತೃತ್ವದ ಜೆಡಿ(ಎಸ್)ಗೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.