ಹುಬ್ಬಳ್ಳಿ: ಇಲ್ಲಿ ಈಗ ಎಲ್ಲರ ಮುಖದಲ್ಲೂ ಸಂತಸ ಮನೆ ಮಾಡಿದೆ. ಗುರುವಾರದ `ಆ~ ಮಧುರ ಕ್ಷಣಕ್ಕಾಗಿ ಅವರು ಕಾಯುತ್ತಿದ್ದಾರೆ. ಸಂಭ್ರಮಾಚರಣೆಗೆ ಸಕಲ ಸಿದ್ಧತೆ ನಡೆದಿದೆ.
ಇದು ಜಗದೀಶ ಶಟ್ಟರ್ ಅವರು ಓದಿದ ನಗರದ ಬಾಸೆಲ್ ಮಿಷನ್ ಶಾಲೆ. ಮೂರನೇ ಇಯತ್ತೆಯಿಂದ ಎಸ್ಸೆಸ್ಸೆಲ್ಸಿವರೆಗೆ ಈ ಶಾಲೆಯಲ್ಲಿ ಓದಿದ `ಹುಬ್ಬಳ್ಳಿಯಾಂವ~ ಈಗ ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರುತ್ತಿದ್ದಾರೆ.
ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಶಾಲೆಯಲ್ಲಿ ಕಾರ್ಯಕ್ರಮವೊಂದು ನಡೆಯಲಿದೆ. ಶೆಟ್ಟರ್ ಅವರಿಗೆ ಪಾಠ ಮಾಡಿದ ಗುರುಗಳು ಈ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
60 ವಸಂತಗಳನ್ನು ಪೂರೈಸಲು ಸಿದ್ಧವಾಗಿರುವ ಬಾಸೆಲ್ ಮಿಷನ್ ಶಾಲೆ ಆ ಸಂಭ್ರಮದ ಕ್ಷಣಕ್ಕಾಗಿ ಕಾಯುತ್ತಿದ್ದಾಗಲೇ ಇಲ್ಲಿ ಓದಿದ ಶೆಟ್ಟರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಅವರ ಸಂತಸ ದ್ವಿಗುಣಗೊಂಡಿದೆ. ಎಂಟು ವರ್ಷ ಈ ಶಾಲೆಯಲ್ಲಿ ಕಲಿತ ಶೆಟ್ಟರ್ 1972ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿ ಹೋಗಿದ್ದರು.
ಅನಂತರ ಕಾಲೇಜು ಮೆಟ್ಟಿಲೇರಿ, ವಕೀಲರಾಗಿ, ರಾಜಕಾರಣಿಯಾಗಿ ಒಂದೊಂದೇ ಹೆಜ್ಜೆ ಏರಿದ ಅವರು ಈಗ ರಾಜ್ಯದ ಮುಖ್ಯಮಂತ್ರಿ. ಹೀಗಾಗಿಯೇ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ನೌಕರರು ಖುಷಿಯಾಗಿದ್ದಾರೆ.
ಶಾಲೆಗೆ ಅನೇಕ ಬಾರಿ ಭೇಟಿ ನೀಡಿದ್ದ ಶೆಟ್ಟರ್, ಮುಖ್ಯಮಂತ್ರಿಯಾದ ನಂತರ ಶಾಲಾಭಿವೃದ್ಧಿಗೆ ನೆರವಾಗಲಿದ್ದಾರೆ ಎಂಬ ನಿರೀಕ್ಷೆ ಕೂಡ ಅವರಲ್ಲಿ ಹುಟ್ಟಿದೆ. ತಮ್ಮ ಸಂತಸವನ್ನು ಬುಧವಾರ `ಪ್ರಜಾವಾಣಿ~ ಜೊತೆ ಹಂಚಿಕೊಂಡ ಶಾಲೆಯ ಮುಖ್ಯ ಶಿಕ್ಷಕ ಆರ್.ಎಸ್.ಸಕ್ಕರಿ, `ನಮ್ಮ ಶಾಲೆಯಲ್ಲಿ ಓದಿದ್ದ ಅವರು ಈಗ ಮುಖ್ಯಮಂತ್ರಿ ಕುರ್ಚಿ ಅಲಂಕರಿಸುತ್ತಿರುವುದು ಖುಷಿ ತಂದಿದೆ. ಇದು ನಮಗೆ ಹೆಮ್ಮೆಯ ವಿಷಯ. ಉತ್ತರ ಕರ್ನಾಟಕ, ಹುಬ್ಬಳ್ಳಿ-ಧಾರವಾಡ ಹಾಗೂ ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸಲು ಗಮನ ನೀಡಲಿದ್ದಾರೆ ಎಂಬ ಭರವಸೆ ಇದೆ~ ಎಂದು ಹೇಳಿದರು.
`ಜಗದೀಶ ಶೆಟ್ಟರ್ ಅವರ ಗುರುಗಳೊಂದಿಗೆ ಸಹೋದ್ಯೋಗಿಯಾಗಿ ಕೆಲಸ ಮಾಡಿದ್ದೇನೆ. ಅವರಿಂದ ಶೆಟ್ಟರ್ ವ್ಯಕ್ತಿತ್ವದ ಬಗ್ಗೆ ತಿಳಿದುಕೊಂಡಿದ್ದೇನೆ. ಅವರನ್ನೇ ಕರೆಸಿ ಗುರುವಾರ ವಿಜೃಂಭಣೆಯ ಕಾರ್ಯಕ್ರಮವನ್ನು ಏರ್ಪಡಿಸಲಾಗುವುದು~ ಎಂದು ಅವರು ತಿಳಿಸಿದರು.
`ಶೆಟ್ಟರ್ ಕಾರ್ಯವೈಖರಿ ನೋಡಿ ಅವರು ಒಂದಲ್ಲ ಒಂದು ದಿನ ಸಿಎಂ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಅದು ಈಗ ನಿಜವಾಗಿದೆ. ಶಾಲಾ ಸಂಸತ್ತಿನಲ್ಲಿ ಪ್ರತಿ ಸಲ ಶೆಟ್ಟರ್ ಬಗ್ಗೆ ತಿಳಿಸುತ್ತಿದ್ದೆವು. ಶ್ರಮದ ಹಾದಿಯಲ್ಲಿ ನಡೆಯಲು ಮಕ್ಕಳಿಗೆ ಈಗ ಇನ್ನಷ್ಟು ಉತ್ಸಾಹ ಹೆಚ್ಚಾಗಲಿದೆ~ ಎಂದು ಶಾಲೆಯ ಶಿಕ್ಷಕಿಯರಾದ ಐ.ಎಂ. ನಿರಂಜನ ಹಾಗೂ ಟಿ.ಜೆ. ನಿರಂಜನ ಹೇಳಿದರು.
`ಶೆಟ್ಟರ್ ಸರ್ ನಮ್ಮ ಶಾಲೆಯಲ್ಲಿ ಓದಿದವರು ಎಂದು ಗೊತ್ತಿತ್ತು. ಅವರ ಹಾಗೆಯೇ ಸಾಧನೆ ಮಾಡಬೇಕು ಎಂಬ ಆಸೆ ಇದೆ. ನಮ್ಮದು ಹಳೆಯ ಶಾಲೆ. ಇಲ್ಲಿ ಓದಿ ಮುಂದೆ ಬಂದ ಅವರು ಸಮಾಜಕ್ಕಾಗಿ ದುಡಿಯಲು ನಮಗೆ ಈಗ ಆದರ್ಶವಾಗಿದ್ದಾರೆ~ ಎಂದು 10ನೇ ತರಗತಿ ವಿದ್ಯಾರ್ಥಿಗಳಾದ ಸಚಿನ್ ಕಾಂಬ್ಳೆ ಹಾಗೂ ಅಭಿಷೇಕ ವೆಂಕಟೇಶ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.