ADVERTISEMENT

ಶೋಕದಲ್ಲಿ ಅರಮನೆ ನಗರಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಮೈಸೂರು: ಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ಹೃದಯಾಘಾತದಿಂದ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಅರಮನೆ ನಗರಿ ಮೈಸೂರು ಶೋಕ ಸಾಗರದಲ್ಲಿ ಮುಳುಗಿತು. ಅರಮನೆ ಆಡಳಿತ ಮಂಡಳಿ ಮತ್ತು ಒಡೆಯರ್‌ ಅವರ ಖಾಸಗಿ ಅರಮನೆ ಸಿಬ್ಬಂದಿ ಒಡೆಯರ್‌ ಅವರನ್ನು ನೆನೆದು ಕಣ್ಣೀರಿಟ್ಟರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಿಧನರಾದ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ವಿದ್ಯುನ್ಮಾನ ಚಾನೆಲ್‌ಗಳ ಮೂಲಕ ಸಾವಿನ ಸುದ್ದಿಯನ್ನು ಖಾತರಿ ಮಾಡಿಕೊಂಡ ಜನರು ಮಮ್ಮಲ ಮರಗಿದರು. ‘ಯದುವಂಶದ ಕೊನೆ ಕುಡಿ ಮರೆಯಾಯಿತಲ್ಲ. ಅರಮನೆ ವೈಭೋಗ ಇನ್ನೆಲ್ಲಿ’ ಎಂದು ಗೋಳಿಟ್ಟರು.

ಖಾಸಗಿ ಅರಮನೆಯಲ್ಲಿದ್ದ ಒಡೆಯರ್‌ ಪತ್ನಿ ಪ್ರಮೋದಾದೇವಿ ಒಡೆಯರ್‌ ಅವರು ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಬೆಂಗಳೂರಿಗೆ ಕಾರಿನಲ್ಲಿ ಹೊರಟರು. ಖಾಸಗಿ ಮ್ಯೂಸಿಯಂ, ಒಡೆಯರ್‌ ಮನೆ, ತೋಟದಲ್ಲಿ ಕೆಲಸ ಮಾಡುವವರು ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಸ್ಥಗಿತಗೊಳಿಸಿ, ಅರಮನೆ ಆವರಣದಲ್ಲಿ ನೆರೆದರು.

‘ಒಡೆಯರ್‌ ಅವರು ಕೆಲಸ ಕೊಟ್ಟಿದ್ದರಿಂದ ಸುಮಾರು 260ಕ್ಕೂ ಹೆಚ್ಚು ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಅವರು ನಮ್ಮನ್ನು ಕೆಲಸಗಾರರಂತೆ ಎಂದೂ ಕಾಣಲಿಲ್ಲ. ನಮ್ಮ ಕಷ್ಟ–ಸುಖಗಳನ್ನು ಆಗಾಗ್ಗೆ ವಿಚಾರಿಸುತ್ತಿದ್ದರು. ಒಡೆಯರ್ ಮತ್ತು ರಾಣಿ ಪ್ರಮೋದಾದೇವಿ ಅವರು ತಂದೆ–ತಾಯಿ ಸ್ಥಾನದಲ್ಲಿದ್ದರು. ಅವರನ್ನು ಕಳೆದುಕೊಂಡ ನಾವು ಬಡವಾಗಿದ್ದೇವೆ. ಅವರ ಸ್ಥಾನವನ್ನು ಬೇರಾರೂ ತುಂಬಲು ಸಾಧ್ಯವಿಲ್ಲ’ ಎಂದು ಅರಮನೆ ಮ್ಯೂಸಿಯಂ ಸಿಬ್ಬಂದಿ ಶ್ರೀನಿವಾಸ್‌ ದುಃಖಿತರಾದರು.

ಅರಮನೆ ಆವರಣದ ಕಟ್ಟೆಯ ಮೇಲೆ ಸಾಲಾಗಿ ಕುಳಿತಿದ್ದ ಸಿಬ್ಬಂದಿಯ ಕಣ್ಣಾಲಿಗಳು ಒದ್ದೆಯಾಗಿದ್ದವು. ಅರಮನೆ ಆವರಣದಲ್ಲಿ ನೀರವ ಮೌನ ಆವರಿಸಿತು. ಎಲ್ಲರೂ ದುಃಖಸಾಗರದಲ್ಲಿ ಮುಳುಗಿದ್ದರು. ಅರಮನೆ ಮಹಿಳಾ ಸಿಬ್ಬಂದಿ ಬಿಕ್ಕಿ ಬಿಕ್ಕಿ ಅತ್ತರು.

ನಿತ್ಯ ಸಹಸ್ರಾರು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಅರಮನೆ ಮಂಗಳವಾರ ನಿರ್ಜನವಾಗಿತ್ತು. ಒಡೆಯರ್‌ ನಿಧನರಾದ ಸುದ್ದಿ ತಿಳಿದ ಕೂಡಲೇ ಅರಮನೆ, ಖಾಸಗಿ ಮ್ಯೂಸಿಯಂ ಪ್ರವೇಶ ನಿಷೇಧಿಸಿ ಮುಖ್ಯದ್ವಾರವನ್ನು ಬಂದ್‌ ಮಾಡಲಾಯಿತು. ಪ್ರವಾಸಿಗರ ಜಾಗದಲ್ಲಿ ಬರೇ ಖಾಕಿಧಾರಿಗಳು ಮಾತ್ರ ಇದ್ದರು. ಅರಮನೆ ಆಡಳಿತ ಮಂಡಳಿ ಸಿಬ್ಬಂದಿ ಕಚೇರಿ ಮುಂದೆ ಒಡೆಯರ್‌ ಬೃಹತ್‌ ಫ್ಲೆಕ್ಸ್‌ ತೂಗುಹಾಕಿ ಶ್ರದ್ಧಾಂಜಲಿ ಸಲ್ಲಿಸಿದರು.

ನಗರದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಒಡೆಯರ್‌ ಭಾವಚಿತ್ರಗಳನ್ನು ಅಂಟಿಸಿ, ಪೂಜೆ ಸಲ್ಲಿಸಿ, ಜೈಕಾರಗಳನ್ನು ಹಾಕುವ ಮೂಲಕ ಜನತೆ ಮಹಾರಾಜರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಟಿವಿ ಷೋರೂಂಗಳ ಮುಂದೆ ಕಿಕ್ಕಿರಿದು ತುಂಬಿದ ಜನತೆ ವಿದ್ಯುನ್ಮಾನ ಚಾನೆಲ್‌ಗಳಲ್ಲಿ ಭಿತ್ತರವಾಗುತ್ತಿದ್ದ ಸುದ್ದಿಯನ್ನು ವೀಕ್ಷಿಸಿದರು.

ಶ್ರೀ ಚಾಮರಾಜೇಂದ್ರ ಮೃಗಾಲಯ ಮತ್ತು ದಸರಾ ವಸ್ತುಪ್ರದರ್ಶನವನ್ನು ಮಧ್ಯಾಹ್ನವೇ ಮುಚ್ಚಲಾಯಿತು. ದಸರಾ ವಸ್ತುಪ್ರದರ್ಶನದಲ್ಲಿದ್ದ ನೂರಾರು ವ್ಯಾಪಾರಿಗಳು  ಸ್ವಯಂಪ್ರೇರಿತವಾಗಿ ಮಳಿಗೆಗಳನ್ನು ಬಂದ್ ಮಾಡಿ ಮಹಾರಾಜರಿಗೆ ಗೌರವ ಸಮರ್ಪಿಸಿದರು. ಅಲ್ಲದೆ, ನಗರದ ಪ್ರಮುಖ ರಸ್ತೆಗಳ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಿ ಒಡೆಯರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

‘ಮೈಸೂರು ದಸರಾದ ಎಲ್ಲ ಕಾರ್ಯಕ್ರಮಗಳಲ್ಲಿ ಒಡೆಯರ್ ಉಲ್ಲಸಿತರಾಗಿ ಪಾಲ್ಗೊಂಡಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ ಎಂಬ ಸುದ್ದಿಯನ್ನು ನಂಬುವುದು ಕಷ್ಟವಾಗುತ್ತಿದೆ’ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಎಸ್‌.ಎಂ. ಕೃಷ್ಣ  ಮತ್ತಿತರರು  ಸಂತಾಪ ಸೂಚಿಸಿದ್ದಾರೆ.

ಗಣ್ಯರ ಸಂತಾಪ: (ಹಾಸನ/ಮೈಸೂರು ವರದಿ): ಮೈಸೂರಿನ ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್‌, ಸಹಕಾರ ಸಚಿವ ಎಚ್‌.ಎಸ್‌. ಮಹದೇವಪ್ರಸಾದ್, ಸಂಸದ ಎಚ್‌. ವಿಶ್ವನಾಥ್, ಶಾಸಕರಾದ ತನ್ವೀರ್‌ ಸೇಟ್‌, ಮಾಜಿ ಸಚಿವ ಎಚ್‌.ಡಿ. ರೇವಣ್ಣ, ಶ್ರವಣ ಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್‌. ಬಾಲಕೃಷ್ಣ ಅವರು ಒಡೆಯರ್‌ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ, ಮೃತರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸಿದ್ದಾರೆ.

ವಿಟಿಯು ಪರೀಕ್ಷೆ ಮುಂದೂಡಿಕೆ
ಬೆಳಗಾವಿ:
ಮೈಸೂರಿನ ರಾಜ ವಂಶಸ್ಥ ಶ್ರೀಕಂಠದತ್ತ ಒಡೆಯರ್‌ ನಿಧನರಾಗಿದ್ದರಿಂದ ಬುಧವಾರ (ಡಿ. 11) ಸರ್ಕಾರಿ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಅಂದು ನಿಗದಿಯಾಗಿದ್ದ ಬಿಇ, ಎಮ್‌ಟೆಕ್‌ ಹಾಗೂ ಎಂಬಿಎ ಸೇರಿದಂತೆ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಈ ಪರೀಕ್ಷೆಗಳ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರು ತಿಳಿಸಿದ್ದಾರೆ.

ಬೃಂದಾವನ ಪ್ರವೇಶಕ್ಕೆ ನಿರ್ಬಂಧ
ಮಂಡ್ಯ:
ಶ್ರೀಕಂಠದತ್ತ ಒಡೆಯರ್‌ ನಿಧನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಜಿಲ್ಲೆಯ ಕೃಷ್ಣರಾಜ ಸಾಗರದ ಬೃಂದಾವನ ಉದ್ಯಾನ ಪ್ರವೇಶವನ್ನು ಬುಧವಾರ  ನಿರ್ಬಂಧಿಸಲಾಗಿದೆ.ಈ ನಿರ್ಬಂಧವನ್ನು ಸಾರ್ವಜನಿಕರು ಗಮನಿಸಬೇಕು ಎಂದು ಜಿಲ್ಲಾಧಿಕಾರಿ  ಬಿ.ಎನ್‌. ಕೃಷ್ಣಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT