ADVERTISEMENT

ಶೋಚನೀಯ ಸ್ಥಿತಿಯಲ್ಲಿ ಕೊಂಡುಕುರಿ ವನ್ಯಧಾಮ

ಕೆಲಸಕ್ಕೆ ಹಾಜರಾಗದ ಅರಣ್ಯ ಸಿಬ್ಬಂದಿ * ಆರದ ಬೆಂಕಿ** ಜೀವರಕ್ಷಣೆಗಾಗಿ ವನ್ಯಜೀವಿಗಳ ಹೋರಾಟ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2014, 19:30 IST
Last Updated 2 ಏಪ್ರಿಲ್ 2014, 19:30 IST
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದಲ್ಲಿ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಬುಧವಾರವೂ ನಿಯಂತ್ರಣಕ್ಕೆ ಬಂದಿರಲಿಲ್ಲ
ಜಗಳೂರು ತಾಲ್ಲೂಕಿನ ಕೊಂಡುಕುರಿ ವನ್ಯಧಾಮದಲ್ಲಿ ನಾಲ್ಕು ದಿನಗಳ ಹಿಂದೆ ಕಾಣಿಸಿಕೊಂಡ ಬೆಂಕಿ ಬುಧವಾರವೂ ನಿಯಂತ್ರಣಕ್ಕೆ ಬಂದಿರಲಿಲ್ಲ   

ಜಗಳೂರು: ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಬೇಟೆಗಾರರು ಹಲ್ಲೆ ನಡೆಸಿರುವ ಘಟನೆ ಹಿನ್ನೆಲೆಯಲ್ಲಿ ನಾಲ್ಕನೇ ದಿನವಾದ ಬುಧವಾರವೂ ಅರಣ್ಯ ಇಲಾಖೆ ಸಿಬ್ಬಂದಿ ಕೊಂಡುಕುರಿ ವನ್ಯಧಾಮದಲ್ಲಿ ಕರ್ತವ್ಯಕ್ಕೆ ಗೈರುಹಾಜ­ರಾಗಿದ್ದಾರೆ. ನಿರಂತರ ಬೆಂಕಿ ಹಾಗೂ ಬೇಟೆಗಾರರ ಹಾವಳಿಯಿಂದಾಗಿ ಬೆದರಿದ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳತ್ತ ನುಗ್ಗಿ ಜನರ ಮೇಲೆ ದಾಳಿ ನಡೆಸುತ್ತಿವೆ.

ತಾಲ್ಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮದ ಸಮೀಪ ರೈತರೊಬ್ಬರ ಮೇಲೆ ಮಂಗಳವಾರ ಕರಡಿ ದಾಳಿ ನಡೆಸಿರುವ ಬೆನ್ನಲ್ಲೇ  ಕೊಂಡುಕುರಿ ಅರಣ್ಯಧಾಮಕ್ಕೆ ಹೊಂದಿಕೊಂಡಿರುವ ಚಿಕ್ಕ­ಬನ್ನಿ­ಹಟ್ಟಿ ಗೊಲ್ಲರಹಟ್ಟಿ ಗ್ರಾಮಕ್ಕೆ ನುಗ್ಗಿದ ಕಾಡು­ಹಂದಿಗಳ ಗುಂಪು ಇಬ್ಬರು ಬಾಲಕಿಯರನ್ನು ಗಾಯಗೊಳಿಸಿರುವ  ಘಟನೆ ನಡೆದಿದೆ.

ಮಂಗಳವಾರ ಸಂಜೆ ವೇಳೆಗೆ ಸುಮಾರು 25ಕ್ಕೂ ಹೆಚ್ಚು ಸಂಖ್ಯೆಯಲ್ಲಿದ್ದ ಕಾಡುಹಂದಿಗಳ ಗುಂಪು ಏಕಾಏಕಿ ಗ್ರಾಮಕ್ಕೆ ನುಗ್ಗಿದೆ.
ಹಂದಿಗಳು  ದಿಢೀರ್‌ ಪ್ರತ್ಯಕ್ಷವಾದ ಕಾರಣ ಗ್ರಾಮಸ್ಥರು ಭಯಭೀತರಾಗಿ ಓಡಿಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗುತ್ತಿದ್ದ ಸಿದ್ದಮ್ಮ (16) ಹಾಗೂ ಶೃತಿ (17) ಎಂಬ ಬಾಲಕಿಯರಿಗೆ ಹಂದಿಗಳು ತಿವಿದು ಓಡಿಹೋದ ಪರಿಣಾಮ ಬೆನ್ನು, ಸೊಂಟ ಮತ್ತು ಕೈಕಾಲುಗಳಿಗೆ ಗಾಯಗಳಾಗಿವೆ.

‘ಸಂಜೆ ಸಮಯದಲ್ಲಿ ಏಕಾಏಕಿ ಕಾಡು­ಹಂದಿಗಳು ಊರಿನೊಳಗೆ ನುಗ್ಗಿ ಬಂದವು. ಗಾಬರಿಗೊಂಡ ಗ್ರಾಮಸ್ಥರು ಮನೆಗಳಿಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡರು. 4 ಅಡಿ ಎತ್ತರದ ಶಾಲಾ ಕಾಂಪೌಂಡ್‌ ಸಲೀಸಾಗಿ ಹಾರಿದ ಹಂದಿಗಳು ಬಿರುಗಾಳಿಯಂತೆ ಓಡಿ ಹೋದವು. ಕೆಲವರು ಬಿದ್ದು ಗಾಯಗೊಂಡರು’ ಎಂದು ಘಟನೆಯ ಪ್ರತ್ಯಕ್ಷದರ್ಶಿ, ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮಹೇಶ್‌ ‘ಪ್ರಜಾವಾಣಿ’ಗೆ ವಿವರಿಸಿದರು.

ಗಾಯಾಳು­ಗಳನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಆರ್‌­ಎಫ್‌ಒ ರಾಜಾಸಾಬ್‌ ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳಿಗೆ ಅಗತ್ಯ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಮುಂದುವರಿದ ಅರಾಜಕತೆ: ನಾಲ್ಕು ದಿನದ ಹಿಂದೆ ಯುಗಾದಿ ಅಮಾವಾಸ್ಯೆ ದಿನ ಬೇಟೆ­ಗಾರರು ಹಲ್ಲೆ ನಡೆಸಿದ ಘಟನೆಗೆ ಸಂಬಂಧ­ಪಟ್ಟಂತೆ ಅಸಮಾಧಾನ­ ಗೊಂಡಿರುವ ಅಧಿಕಾರಿ ಹಾಗೂ ಸಿಬ್ಬಂದಿ ಇದುವರೆಗೆ ಅರಣ್ಯಕ್ಕೆ ಕಾಲಿಟ್ಟಿಲ್ಲ.

ಡಿಸಿಎಫ್‌ ಸೇರಿದಂತೆ ಮೇಲಧಿ­ಕಾರಿಗಳು ಘಟನೆ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. ಈ ಬಗ್ಗೆ ಮಾಧ್ಯಮ­ಗಳಲ್ಲಿ ಸುದ್ದಿಯಾಗಿದ್ದರೂ ಅವರು ತಾಲ್ಲೂಕಿಗೆ ಭೇಟಿ ನೀಡಿ ಕರ್ತವ್ಯಕ್ಕೆ ಹಾಜರಾ­ಗುವಂತೆ ಸಿಬ್ಬಂದಿ ಮನವೊಲಿಸಿಲ್ಲ ಎನ್ನಲಾಗುತ್ತಿದೆ. ಡಿಸಿಎಫ್‌ ಎಸ್‌.ಎನ್‌.ಮಳವಳ್ಳಿ ಅವರಿಗೆ ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ಆದೇಶ­ವಾಗಿದ್ದು, ಕರ್ತವ್ಯದಿಂದ ಬಿಡುಗಡೆ ಆಗುವು­ದಷ್ಟೇ ಬಾಕಿ ಇರುವ ಹಿನ್ನೆಲೆಯಲ್ಲಿ ಅವರು ಈ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ ಎಂಬ ದೂರುಗಳಿವೆ.

ಅರಣ್ಯದಲ್ಲಿ ರಕ್ಷಣೆ ಇಲ್ಲದೆ ಅಮೂಲ್ಯ ವನ್ಯಪ್ರಾಣಿಗಳು ಬೆಂಕಿ ಹಾಗೂ ಬೇಟೆಗಾರರಿಗೆ ಆಹುತಿಯಾಗುವ ಸ್ಥಿತಿ ಎದುರಾಗಿದೆ. ಅರಣ್ಯ ಪ್ರದೇಶದ ಹುಣಸೆಗುಡ್ಡ, ಸಂಜುಕಲ್ಲುಗುಡ್ಡ, ಕೊಡೆ­ಗುಂಡು, ಹಾಪ್‌ದೊಣೆಮಟ್ಟಿ, ಹಳ್ಳಿ­ಬೀಳು, ರಕ್ಕಸಘಟ್ಟ, ಚಕ್ಕಲ್ಲು, ಕ್ವಾರಮಟ್ಟಿ ಪ್ರದೇಶದಲ್ಲಿ ಬೆಂಕಿಯಿಂದಾಗಿ ವಿವಿಧ ಜಾತಿಯ ಅಪಾರ ಪ್ರಮಾಣದ ಮರಗಿಡಗಳು, ವಿವಿಧ ಪ್ರಾಣಿ ಪಕ್ಷಿಗಳು ಸುಟ್ಟು ಕರಕಲಾಗಿವೆ.

ಕೊಂಡುಕುರಿಯಂತಹ ಅಳಿವಿನ ಅಂಚಿ­ನಲ್ಲಿರುವ ಪ್ರಾಣಿ ಸಂಕುಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಏಷ್ಯಾ ಖಂಡದ ಏಕೈಕ ವನ್ಯಜೀವಿಧಾಮ ಆಗಿ ಘೋಷಿಸಿದೆ. ಆದರೆ ನಾಲ್ಕು ದಿನದಿಂದ ಹೊತ್ತಿ ಉರಿಯುತ್ತಿರುವ ಬೆಂಕಿ ಇನ್ನೂ ಶಮನವಾಗಿಲ್ಲ. ಪ್ರಾಣಿಗಳು ಜೀವ ಉಳಿಸಿಕೊಳ್ಳಲು ಪರದಾಡುತ್ತಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.